ರಾಯಚೂರು: ದೇಶದಲ್ಲಿ ಇಂದಿಗೂ ಅದೆಷ್ಟೋ ಸ್ಲಂಗಳಲ್ಲಿ ಕನಿಷ್ಠ ಸೌಲಭ್ಯಗಳು ಕೂಡ ಇಲ್ಲ. ತಮ್ಮ ಕಲೆಯ ಮೂಲಕ ಸಾಂಸ್ಕೃತಿಕ ಲೋಕ ಶ್ರೀಮಂತಗೊಳಿಸುವ ಕಲಾವಿದರು ವಾಸಿಸುವ ತಾಣಗಳ ಅಭಿವೃದ್ಧಿಗೆ ಯಾವುದೇ ಸರ್ಕಾರ ಗಮನಹರಿಸದಿರುವುದು ನಿಜಕ್ಕೂ ಖೇದಕರ ಎಂದು ರಾಷ್ಟ್ರಪತಿ ಪ್ರಶಸ್ತಿ ಪುರಸ್ಕೃತ ಕೆ.ಕರಿಯಪ್ಪ ಮಾಸ್ತರ ಬೇಸರ ವ್ಯಕ್ತಪಡಿಸಿದರು.
ನಗರದ ಪಂ.ಸಿದ್ಧರಾಮ ಜಂಬಲದಿನ್ನಿ ರಂಗಮಂದಿರದಲ್ಲಿ ರಾಯಚೂರು ಸ್ಲ ನಿವಾಸಿಗಳ ಕ್ರಿಯಾ ವೇದಿಕೆ ಹಾಗೂ ಸ್ಲಂ ಜನಾಂದೋಲನ ಕರ್ನಾಟಕ ಸಂಘಟನೆಗಳ ಸಹಯೋಗದಲ್ಲಿ ಶನಿವಾರ ಹಮ್ಮಿಕೊಂಡಿದ್ದ ಸ್ಲಂ ಜನರ ಸಮಾವೇಶ ಹಾಗೂ ಸಾಂಸ್ಕೃತಿಕ ಹಬ್ಬ-2019ರ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು. ಒಂದೆಡೆ ದೇಶ ಪ್ರಗತಿಯಾಗುತ್ತಿದೆ ಎನ್ನುತ್ತಿದ್ದರೆ ಮತ್ತೂಂದೆಡೆ ಇಂದಿಗೂ ಸ್ಲಂಗಳ ಅಭಿವೃದ್ಧಿ ಆಗುತ್ತಿಲ್ಲ ಎನ್ನುವುದೂ ಸತ್ಯ. ಎಲ್ಲರೂ ತಮ್ಮ ಸಮುದಾಯಗಳ ಸಂಪ್ರದಾಯದಂತೆ ಹಬ್ಬಗಳನ್ನು ಆಚರಿಸಿದರೆ. ಸ್ಲಂ ಜನರ ಕಲೆಯನ್ನು ಪ್ರೋತ್ಸಾಹಿಸಲು ಇಂಥ ಹಬ್ಬ ಆಚರಿಸುವುದು ಉತ್ತಮ ಚಿಂತನೆ. ಅವರ ಕಲೆಗೆ ಸಿಗುವ ಮನ್ನಣೆ ಅವರ ಜೀವನ ಕ್ರಮಕ್ಕೂ ಸಿಗಬೇಕಿದೆ. ಸ್ಲಂ ಅಭಿವೃದ್ಧಿಗೆ ಹೆಚ್ಚಿನ ಒತ್ತು ನೀಡುವ ಅಗತ್ಯವಿದೆ ಎಂದರು.
ಸ್ಲಂಗಳಲ್ಲಿ ವಾಸಿಸುವ ಜನರ ನೈಜ ಕಲೆಗೆ ಸೂಕ್ತ ವೇದಿಕೆ ಹಾಗೂ ಪ್ರೋತ್ಸಾಹ ಸಿಗಬೇಕಿದೆ. ಇಂದು ಅದೇ ಕಲೆಗೆ ಆಧುನೀಕತೆ ಲೇಪ ಮಾಡಿ ದೊಡ್ಡ ಮಟ್ಟದಲ್ಲಿ ಮಾರುಕಟ್ಟೆ ಕಲ್ಪಿಸಲಾಗುತ್ತಿದೆ. ಆದರೆ, ಅರ್ಹ ಕಲಾವಿದರೂ ಇಂದಿಗೂ ಅದೇ ಸ್ಲಂಗಳಲ್ಲಿ ವಾಸಿಸುತ್ತಿದ್ದಾರೆ ಎಂದರು.
ಹಿರಿಯ ಪತ್ರಕರ್ತ ಬಿ.ವೆಂಕಟಸಿಂಗ್ ಮಾತನಾಡಿ, ಅಭಿವೃದ್ಧಿ ವಿಚಾರದಲ್ಲಿ ನಾವು ಇಂದಿಗೂ ಸಾಕಷ್ಟು ಹಿಂದುಳಿದಿದ್ದೇವೆ ಎಂಬುದಕ್ಕೆ ಸ್ಲಂ ಜನಜೀವನವೇ ಸಾಕ್ಷಿ. ವಿದೇಶಗಳಲ್ಲಿ ಸ್ಲಂ ಎಂಬ ಪರಿಕಲ್ಪನೆಯೇ ಉಳಿದಿಲ್ಲ. ಆದರೆ, ನಮ್ಮಲ್ಲಿ ಇನ್ನೂ ಅಂಥ ಅದೆಷ್ಟೋ ಸ್ಥಳಗಳಲ್ಲಿ ಕೋಟ್ಯಂತರ ಜನ ವಾಸಿಸುವ ನಿದರ್ಶನಗಳಿವೆ. ವಿದೇಶಗಳು ಸ್ವಚ್ಛತೆಗೆ ನೀಡುತ್ತಿರುವ ಆದ್ಯತೆ ಇಲ್ಲಿಯೂ ಜಾರಿಯಾಗಬೇಕು. ಅಲ್ಲಿ ಕಾರ್ಮಿಕರನ್ನು ಅತ್ಯಂತ ಗೌರವದಿಂದ ಕಾಣುತ್ತಾರೆ. ಪ್ರಗತಿಯನ್ನು ನಗರ, ಪಟ್ಟಣ ಹಳ್ಳಿ ಎಂಬ ತಾರತಮ್ಯ ಇಲ್ಲದೇ ಮಾಡುತ್ತಾರೆ. ಅಂಥ ಸಂಪ್ರದಾಯ ಇಲ್ಲೂ ಬರಬೇಕು ಎಂದರು.
ಬೆಂಗಳೂರಿನ ಸ್ಲಂ ಜನಾಂದೋಲನ ಕರ್ನಾಟಕ ಸಂಘಟನೆ ರಾಜ್ಯ ಸಂಚಾಲಕ ಎ.ನರಸಿಂಹ ಮೂರ್ತಿ ಪ್ರಾಸ್ತಾವಿಕ ಮಾತನಾಡಿದರು. ರಾಯಚೂರು ಸ್ಲಂ ನಿವಾಸಿಗಳ ಕ್ರಿಯಾ ವೇದಿಕೆ ಅಧ್ಯಕ್ಷ ಜನಾರ್ದನ ಹಳ್ಳಿ ಬೆಂಚಿ ಅಧ್ಯಕ್ಷತೆ ವಹಿಸಿದ್ದರು. ಮಾದಿಗ ಸಂಘಟನೆಗಳ ಒಕ್ಕೂಟ ರಾಜ್ಯ ಸಂಚಾಲಕ ಅಂಬಣ್ಣ ಆರೋಲಿ, ಬಿಎಸ್‌ಪಿ ಜಿಲ್ಲಾಧ್ಯಕ್ಷ ಎಂ.ಆರ್.ಬೇರಿ ಇತರರಿದ್ದರು.