Advertisement

ವೃಂದಾವನ ಧ್ವಂಸ: ವಿಪ್ರರ ಪ್ರತಿಭಟನೆ

11:01 AM Jul 20, 2019 | Team Udayavani |

ರಾಯಚೂರು: ಕೊಪ್ಪಳ ಜಿಲ್ಲೆ ಗಂಗಾವತಿ ತಾಲೂಕು ತುಂಗಭದ್ರಾ ನದಿಯಲ್ಲಿರುವ ಶ್ರೀವ್ಯಾಸರಾಜರ ಮೂಲ ಬೃಂದಾವನ ಧ್ವಂಸಗೊಳಿಸಿದ ದುಷ್ಕರ್ಮಿಗಳನ್ನು ಕೂಡಲೇ ಬಂಧಿಸಿ ಕಠಿಣ ಶಿಕ್ಷೆಗೆ ಗುರಿಪಡಿಸುವಂತೆ ಆಗ್ರಹಿಸಿ ಅಖೀಲ ಕರ್ನಾಟಕ ಬ್ರಾಹ್ಮಣ ಮಹಾಸಭಾದ ನೇತೃತ್ವದಲ್ಲಿ ವಿಪ್ರ ಸಮಾಜದ ಬಾಂಧವರು ಶುಕ್ರವಾರ ಪ್ರತಿಭಟನೆ ನಡೆಸಿದರು.

Advertisement

ನಗರದ ಮುಂಗ್ಲಿ ಪ್ರಾಣದೇವರ ದೇವಸ್ಥಾನದಿಂದ ಶುರುವಾದ ಪ್ರತಿಭಟನಾ ರ್ಯಾಲಿ ನಗರದ ಪ್ರಮುಖ ಬೀದಿಗಳ ಮೂಲಕ ಸಂಚರಿಸಿ ಡಿಸಿ ಕಚೇರಿಗೆ ಬಂದು ತಲುಪಿತು. ಬಳಿಕ ಜಿಲ್ಲಾಧಿಕಾರಿ ಮೂಲಕ ರಾಜ್ಯಪಾಲರಿಗೆ ಮನವಿ ಸಲ್ಲಿಸಲಾಯಿತು.

ಇದೊಂದು ಹೇಯ ಕೃತ್ಯವಾಗಿದೆ. ಹಿಂದೂ ಧರ್ಮದ ಪವಿತ್ರ ಸ್ಥಳಗಳಿಗೆ ರಕ್ಷಣೆ ಇಲ್ಲದಂತಾಗಿದೆ. ಶತ ಶತಮಾನಗಳ ಇತಿಹಾಸ ಹೊಂದಿರುವ ಈ ಪವಿತ್ರ ಧಾರ್ಮಿಕ ಕೇಂದ್ರವಾದ ನವವೃಂದಾವನ ಗಡ್ಡೆಯಲ್ಲಿ ಇಂಥ ಕೃತ್ಯ ನಡೆದಿರುವುದು ಖಂಡನಾರ್ಹ. ಅಲ್ಲಿ ಸೂಕ್ತ ಭದ್ರತೆ ಇಲ್ಲದಿರುವುದಕ್ಕೆ ದುಷ್ಕರ್ಮಿಗಳು ಯಾವುದೇ ಭಯ ಭೀತಿ ಇಲ್ಲದೇ ಈ ಕೆಲಸ ಮಾಡಿದ್ದಾರೆ ಎಂದು ದೂರಿದರು.

ಮಾಧ್ವ ಪರಂಪರೆ ಅನುಯಾಯಿಗಳಾಗಿದ್ದ ಶ್ರೀವ್ಯಾಸರಾಜರು ವಿಜಯನಗರ ಸಾಮಾಜ್ಯದ ಅನೇಕ ರಾಜರಿಗೆ ಗುರುಗಳಾಗಿದ್ದವರು. ವಿಜಯನಗರ ಸುವರ್ಣಯುಗಕ್ಕೆ ಅಪಾರ ಕೊಡುಗೆಯನ್ನೂ ನೀಡಿದ್ದಾರೆ. ಹಿಂದೂ ಸಂಸ್ಕೃತಿ ಅಭ್ಯುದಯಕ್ಕಾಗಿ ದೇಶಾದ್ಯಂತ ಸಾವಿರಾರು ಪ್ರಾಣದೇವರ ಮೂರ್ತಿಗಳನ್ನು ಪ್ರತಿಷ್ಠಾಪಿಸಿದ್ದಾರೆ. ಧರ್ಮ ಜಾಗೃತಿ ಹಾಗೂ ಹಲವು ಗ್ರಂಥಗಳನ್ನು ಸಂಕೀರ್ತನೆಗಳನ್ನು ರಚಿಸಿ ದಾಸ ಸಾಹಿತ್ಯವನ್ನು ಶ್ರೀಮಂತಗೊಳಿಸಿ ಅಪರೋಕ್ಷ ಜ್ಞಾನಿಗಳಾಗಿದ್ದಾರೆ ಎಂದರು.

ಹರಿದಾಸ ಶ್ರೇಷ್ಠರಾದ ಪುರಂದರದಾಸರಿಗೆ ಹಾಗೂ ಕನಕದಾಸರಿಗೆ ಗುರುಗಳಾಗಿ ಮಾರ್ಗದರ್ಶನ ನೀಡಿದ್ದಾರೆ. ಸರ್ವರ ಹಿತಕ್ಕಾಗಿ ಜಾತಿ, ಮತ ಬೇಧವಿಲ್ಲದೇ ವಿಜಯನಗರ ಸಾಮ್ರಾಜ್ಯದಲ್ಲಿ ಜನರ ಕಲ್ಯಾಣಕ್ಕಾಗಿ ಅನೇಕ ಕಾರ್ಯ ಕೈಗೊಂಡಿದ್ದಾರೆ. ಹಿಂದೂಗಳ ಹಾಗೂ ಮಧ್ವಮತದ ಅನುಯಾಯಿಗಳ ಭಕ್ತಿಯಿಂದ ಪೂಜಿಸುತ್ತಿರುವ ಶ್ರೀ ವ್ಯಾಸರಾಜರ ಬೃಂದಾವನವನ್ನು ದುಷ್ಕರ್ಮಿಗಳು ಧ್ವಂಸಗೊಳಿಸಿ ನಮ್ಮೆಲ್ಲರ ಭಾವನೆಗಳಿಗೆ ತೀವ್ರ ಧಕ್ಕೆಯನ್ನುಂಟು ಮಾಡಲಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

Advertisement

ನವವೃಂದಾನದಲ್ಲಿರುವ ಎಲ್ಲ ಯತಿ ಶ್ರೇಷ್ಠರ ಬೃಂದಾವನಗಳಿಗೆ ಸೂಕ್ತ ರಕ್ಷಣೆ ಭದ್ರತೆ ಒದಗಿಸಬೇಕು ಹಾಗೂ ಅದೇ ರೀತಿಯಾಗಿ ವಿವಿಧ ಭಾಗಗಳಲ್ಲಿರುವ ಧಾರ್ಮಿಕ ಶ್ರದ್ಧಾ ಕೇಂದ್ರಗಳಿಗೂ ಸೂಕ್ತ ಭದ್ರತೆ ಕಲ್ಪಿಸಬೇಕು ಎಂದು ಆಗ್ರಹಿಸಿದರು.

ಮಹಾಸಭಾದ ಜಿಲ್ಲಾಧ್ಯಕ್ಷ ಜಗನ್ನಾಥ ಕುಲಕರ್ಣಿ ವಕೀಲರು, ನಗರದ ಘಟಕದ ಅಧ್ಯಕ್ಷ ಗುರು ರಾಜಾಚಾರ್ಯ ಜೋಷಿ ತಾಳಿಕೋಟೆ, ಸದಸ್ಯರಾದ ಪ್ರಕಾಶ ಆಲಂಪಲ್ಲಿ, ಗುರುರಾಜರಾವ್‌ ಗೋರ್ಕಲ್, ಡಿ.ಕೆ.ಮುರಳೀಧರ, ವಿ.ಕಿಶನರಾವ್‌, ಡಿ.ವೆಂಕಟೇಶ, ಪ್ರಾಣೇಶ ಕುಲಕರ್ಣಿ, ಬಂಡೇರಾವ್‌, ಜಯಕುಮಾರ ಗಬ್ಬೂರು ಪಾಲ್ಗೊಂಡಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next