Advertisement

ಹಿರಿಯರ ಅನುಭವ ಮಾರ್ಗದರ್ಶಿ

04:45 PM Oct 27, 2019 | Naveen |

ರಾಯಚೂರು: ಯುವ ಪೀಳಿಗೆಗೆ ಹಿರಿಯರ ಮಾರ್ಗದರ್ಶನ ಅಗತ್ಯ. ಅನುಭವದಿಂದ ಹೇಳುವ ಮಾತುಗಳನ್ನು ಕೇಳುವ ಪದ್ಧತಿಯನ್ನು ಯುವಕರು ರೂಢಿಸಿಕೊಳ್ಳಬೇಕು ಎಂದು ವಿಧಾನ ಪರಿಷತ್‌ ಸದಸ್ಯ ಎನ್‌.ಎಸ್‌.ಬೋಸರಾಜ್‌ ಹೇಳಿದರು.

Advertisement

ಜಿಲ್ಲಾ ನಿವೃತ್ತ ನೌಕರರ ಸಂಘ ಹಾಗೂ ರೋಟರಿ ಕ್ಲಬ್‌ ಸಹಯೋಗದಲ್ಲಿ ಶನಿವಾರ ನಗರದ ವೀರಶೈವ ಕಲ್ಯಾಣ ಮಂಟಪದಲ್ಲಿ ಹಮ್ಮಿಕೊಂಡಿದ್ದ ಹಿರಿಯ ನಾಗರಿಕರ ದಿನಾಚರಣೆ ಹಾಗೂ ಸನ್ಮಾನ ಸಮಾರಂಭ ಉದ್ಘಾಟಿಸಿ ಅವರು ಮಾತನಾಡಿದರು.

ಹಿರಿಯರನ್ನು ಪ್ರೀತಿ ಮತ್ತು ಗೌರವದಿಂದ ಕಾಣಬೇಕು. ತಂದೆ ತಾಯಂದಿರು ತಮ್ಮ ಜೀವನ ಮುಡಿಪಾಗಿಟ್ಟು ಮಕ್ಕಳನ್ನು ಕಷ್ಟದಿಂದ ಬೆಳೆಸಿರುತ್ತಾರೆ. ಆದರೆ, ಉದ್ಯೋಗಕ್ಕೆ ಸೇರಿದ ನಂತರ ಮಕ್ಕಳು ತಂದೆ ಮತ್ತು ತಾಯಂದಿರನ್ನು ಕಡೆಗಣಿಸುವುದು ಸರಿಯಲ್ಲ. ನಿಮ್ಮನ್ನು ಚೆನ್ನಾಗಿ ನೋಡಿಕೊಂಡ ತಂದೆ-ತಾಯಂದಿರನ್ನು ಮುಪ್ಪಿನಲ್ಲಿ ಮಕ್ಕಳು ಕೂಡ ಚೆನ್ನಾಗಿ ನೋಡಿಕೊಳ್ಳಬೇಕು ಎಂದರು.

ಇತ್ತೀಚಿನ ದಿನಗಳಲ್ಲಿ ಹಿರಿಯರನ್ನು ನಿರ್ಲಕ್ಷಿಸುವ ಪರಿಪಾಟ ಹೆಚ್ಚಾಗುತ್ತಿರುವುದು ಕಳವಳಕಾರಿ ಸಂಗತಿ. ಕೌಟುಂಬಿಕ ವ್ಯವಸ್ಥೆ ಹಾಳಾಗುತ್ತಿದೆ. ಮನೆಯಲ್ಲಿ ಹಿರಿಯರು ಇದ್ದರೆ ಸಂಬಂಧಗಳು ಗಟ್ಟಿಯಾಗಿರುತ್ತವೆ. ಆದರೆ, ಮಕ್ಕಳು ಮಾತ್ರ ಚಿಕ್ಕ ಕುಟುಂಬ ಎಂದು ತಂದೆ ತಾಯಂದಿರನ್ನೆ ತೊರೆಯುತ್ತಿರುವುದು ಸರಿಯಲ್ಲ ಎಂದರು.

ಸರ್ಕಾರಗಳು ಹಿರಿಯ ನಾಗರಿಕರಿಗಾಗಿ ಸಾಕಷ್ಟು ಸೌಲಭ್ಯಗಳನ್ನು ನೀಡುತ್ತಿದೆ. ಹಲವು ಯೋಜನೆಗಳನ್ನು ಜಾರಿಗೊಳಿಸಿದೆ. ಇಳಿವಯಸ್ಸಿನಲ್ಲಿ ಆ ಸೌಲಭ್ಯ ಪಡೆಯುವುದು ಕಷ್ಟವಾಗಬಹುದು. ಅಂಥ ಕಡೆ ಅಧಿ ಕಾರಿಗಳು, ವಿದ್ಯಾವಂತ ಯುವಕರು ಅವರಿಗೆ ನೆರವಾಗಬೇಕು. ಸೌಲಭ್ಯ ತಲುಪುವಂತೆ ಮಾಡಬೇಕು ಎಂದರು.

Advertisement

ಇದೇ ವೇಳೆ ವಿವಿಧ ಕ್ಷೇತ್ರಗಳಲ್ಲಿ ಸಾಧನೆಗೈದ ಹಿರಿಯ ನಾಗರಿಕರನ್ನು, ನಿವೃತ್ತ ನೌಕರರನ್ನು ಸನ್ಮಾನಿಸಲಾಯಿತು. ನಿವೃತ್ತ ನೌಕರರ ಸಂಘದ ಅಧ್ಯಕ್ಷ ಮಹಾದೇವಪ್ಪ ಹಂಚಿನಾಳ ಪ್ರಾಸ್ತಾವಿಕ ಮಾತನಾಡಿದರು. ವೀರಶೈವ ಸಮಾಜ ಅಧ್ಯಕ್ಷ ಎಂ.ವೀರನಗೌಡ, ಮಹಿಳಾ ಘಟಕ ಅಧ್ಯಕ್ಷೆ ದಾನಮ್ಮ, ರೋಟರಿ ಕ್ಲಬ್‌ ಅಧ್ಯಕ್ಷ ವೆಂಕಟಸ್ವಾಮಿ, ಸಾಹಿತಿ ಅಯ್ಯಪ್ಪಯ್ಯ ಹುಡಾ, ಸರ್ಕಾರಿ ವಕೀಲ ಎನ್‌.ಶಿವಶಂಕರ, ಡಾ| ಬಸವರಾಜಪ್ಪ, ಮಾನ್ವಿ ತಾಲೂಕು ನಿವೃತ್ತ ನೌಕರರ ಸಂಘದ ಅಧ್ಯಕ್ಷ ಬೆಟ್ಟಪ್ಪ, ಕೆ.ಶರಣಪ್ಪ, ಜಿ.ಡೇವಿಡ್‌ ಸೇರಿ ಇತರರು ಉಪಸ್ಥಿತರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next