Advertisement

ದುಡ್ಡು ಕೊಟ್ಟರೂ ಸಿಗುತ್ತಿಲ್ಲ ಜೀವಜಲ

03:20 PM May 17, 2019 | Naveen |

ರಾಯಚೂರು: ಮುಂಗಾರು-ಹಿಂಗಾರು ಸಂಪೂರ್ಣ ಕೈ ಕೊಟ್ಟು ಜಲಮೂಲಗಳೆಲ್ಲ ಬತ್ತಿ ಹೋಗಿದ್ದು, ಸಾಂಪ್ರದಾಯಿಕ ನೀರಿನ ಮೂಲಗಳಾಗಿದ್ದ ಕೊಳವೆ ಬಾವಿಗಳು ಕೂಡ ಈ ವರ್ಷ ಕೈ ಕೊಟ್ಟಿವೆ. ಇದರಿಂದ ದಿನೇ ದಿನೇ ಜಲ ಸಂಕಟ ಮಿತಿ ಮೀರುತ್ತಿದ್ದು, ಜಿಲ್ಲಾಡಳಿತ ನೀಡಿದ ಮಾಹಿತಿ ಪ್ರಕಾರ 36 ಹಳ್ಳಿಗಳಲ್ಲಿ ತೀವ್ರ ನೀರಿನ ಸಮಸ್ಯೆ ಎದುರಾಗಿದೆ.

Advertisement

ಎರಡು ಜೀವನದಿಗಳಾದ ತುಂಗಭದ್ರಾ, ಕೃಷ್ಣೆ ಹರಿಯುವ ರಾಯಚೂರು ತಾಲೂಕಿ ನಲ್ಲಿಯೇ 21 ಹಳ್ಳಿಗಳಲ್ಲಿ ತೀವ್ರ ನೀರಿನ ಸಮಸ್ಯೆ ಇದೆ. ಎರಡೂ ನದಿಗಳು ಸಂಪೂರ್ಣ ಬತ್ತಿ ಹೋಗಿವೆ. ಜಿಲ್ಲೆಯಲ್ಲಿ 344 ಹಳ್ಳಿಗಳಲ್ಲಿ 398 ಹೊಸ ಬೋರ್‌ವೆಲ್ ಕೊರೆಸಿದ್ದು, ಅದರಲ್ಲಿ 268ರಲ್ಲಿ ಮಾತ್ರ ನೀರಿನ ಲಭ್ಯತೆಯಾಗಿದೆ. 120 ಕೊಳವೆ ಬಾವಿಗಳು ವಿಫಲಗೊಂಡಿವೆ. ಅದರಲ್ಲಿ ಇನ್ನೂ 25 ಕೊಳವೆ ಬಾವಿಗಳಿಗೆ ವಿದ್ಯುತ್‌ ಸಂಪರ್ಕವೇ ಕಲ್ಪಿಸಿಲ್ಲ. ಇಷ್ಟಾದರೂ ಬೇಸಿಗೆ ಮುಗಿಯುವುದರೊಳಗೆ ಇನ್ನೂ 176 ಹಳ್ಳಿಗಳಲ್ಲಿ ನೀರಿನ ಸಮಸ್ಯೆ ಉಲ್ಭಣಿಸುವ ಸಾಧ್ಯತೆ ಇದೆ ಎಂದು ಜಿಲ್ಲಾಡಳಿತವೇ ತಿಳಿಸಿದೆ. ಮುಂಜಾಗ್ರತಾ ಕ್ರಮವಾಗಿ ಕೆರೆ ತುಂಬಿಸಿದರೂ ಈ ಬಾರಿ ಮೇನಲ್ಲಿ ನೀರಿನ ಅಭಾವ ಕಾಡತೊಡಗಿದೆ. ಮಳೆಗಾಲ ಕೈ ಕೊಟ್ಟ ಕಾರಣ ಈ ವರ್ಷ ಫೆಬ್ರವರಿಯಲ್ಲಿಯೇ ಬಿರು ಬೇಸಿಗೆ ಶುರುವಾಗಿದ್ದು, ಏಪ್ರಿಲ್-ಮೇ ತಿಂಗಳಲ್ಲಿ ನೆಲ ಕಾದ ಕೆಂಡದಂತಾಗಿದೆ. ಇಂಥ ತಾಪಮಾನಕ್ಕೆ ಅಂತರ್ಜಲ ಮಟ್ಟ ಸಂಪೂರ್ಣ ಕುಸಿದು ಹಳೇ ಬೋರ್‌ವೆಲ್ಗಳು ಕೂಡ ನೀರಿಲ್ಲದೇ ಕೆಟ್ಟು ನಿಂತಿವೆ.

ನೀರಿಗಾಗಿ ಅಲೆದಾಟ: ಕೆಲವೆಡೆ ಬಳಕೆಗೆ ನೀರಿನ ಸಮಸ್ಯೆ ಇಲ್ಲದಿದ್ದರೂ ಕುಡಿಯಲೂ ಮಾತ್ರ ಕಿಮೀಗಟ್ಟಲೇ ಹೋಗಬೇಕಿದೆ. ಐದಾರು ಕಿಮೀ ದೂರದ ಗ್ರಾಮಗಳಿಗೆ ತೆರಳಿ ಶುದ್ಧೀಕರಣ ಘಟಕದಿಂದಲೋ ಇಲ್ಲ ಖಾಸಗಿ ಬೋರ್‌ಗಳಿಂದಲೋ ಸೈಕಲ್, ಬೈಕ್‌ಗಳ ಮೇಲೆ ನೀರು ತಂದುಕೊಳ್ಳುತ್ತಿದ್ದಾರೆ. ಇನ್ನು ನಗರಗಳಲ್ಲಿ 30 ರೂ. ಕೊಟ್ಟರೂ ಕುಡಿಯುವ ನೀರು ಸಕಾಲಕ್ಕೆ ಸಿಗದ ಪರಿಸ್ಥಿತಿ ನಿರ್ಮಾಣವಾಗಿದೆ. ಲಿಂಗಸುಗೂರು ಪಟ್ಟಣಕ್ಕೆ ನೀರು ಪೂರೈಸುವ ಕೆರೆ ತುಂಬಿದ್ದು, ಸದ್ಯಕ್ಕೆ ಅಲ್ಲಿಗೆ ನೀರಿನ ಸಮಸ್ಯೆ ತಲೆದೋರಿಲ್ಲ. ಆದರೆ, ಆ ತಾಲೂಕಿನ ಗ್ರಾಮೀಣ ಭಾಗದಲ್ಲಿ ಮಾತ್ರ ಜನ ನಾನಾ ಪಡಿಪಾಟಲು ಪಡಬೇಕಿದೆ.

ಇನ್ನುಳಿದಂತೆ ರಾಯಚೂರು, ದೇವದುರ್ಗ, ಸಿಂಧನೂರು ಮತ್ತು ಮಾನ್ವಿ ತಾಲೂಕು ಕೇಂದ್ರಗಳಲ್ಲಿ ನೀರಿಗಾಗಿ ಹಾಹಾಕಾರ ಇದೆ. ಕೆರೆಗಳು, ತೆರೆದಬಾವಿಗಳು ಹಾಗೂ ಕೊಳವೆಬಾವಿಗಳು ಸಂಪೂರ್ಣ ಬತ್ತಿ ಹೋಗಿವೆ. ಆರ್‌ಟಿಪಿಎಸ್‌ಗಾಗಿ ಒಂದು ಟಿಎಂಸಿ ನೀರು ಹರಿಸುವ ಉದ್ದೇಶವಿದ್ದು, ಆ ನೀರು ಬಂದರೆ ಮಾತ್ರ ನದಿ ಪಾತ್ರ ಊರುಗಳ ಸಮಸ್ಯೆ ತಾತ್ಕಾಲಿಕವಾಗಿ ಶಮನಗೊಳ್ಳಲಿದೆ. ನಗರಕ್ಕೆ ಅತ್ತ ತುಂಗಭದ್ರಾ ಇತ್ತ ಕೃಷ್ಣ ನದಿಯಿಂದ ನೀರು ಹರಿಸುತ್ತಿದ್ದು, ಟಿಎಲ್ಬಿಸಿಯಿಂದ ರಾಂಪುರ ಕೆರೆ ತುಂಬಿಸಲಾಗಿದೆ. ಈಗ ಅದೂ ತಳ ಕಾಣುತ್ತಿದೆ. ಕೃಷ್ಣಾ ನದಿ ಬರಿದಾಗಿದ್ದು, ಜಾಕ್‌ವೆಲ್ನಲ್ಲಿ ನೀರಿಲ್ಲದಾಗಿದೆ.

239 ಬೋರ್‌ ನಿಷ್ಕ್ರಿಯ
ಜಿಲ್ಲೆಯಲ್ಲಿ 77 ಹಳ್ಳಿಗಳಲ್ಲಿ 86 ಖಾಸಗಿ ಬೋರ್‌ವೆಲ್ಗಳನ್ನು ಬಾಡಿಗೆ ಪಡೆದು ನೀರು ನೀಡಲಾಗುತ್ತಿದೆ. ನಾಲ್ಕು ಹಳ್ಳಿಗಳಿಗೆ ಎಂಟು ಟ್ಯಾಂಕರ್‌ ಮೂಲಕ ನೀರು ಪೂರೈಸಲಾಗುತ್ತಿದೆ. ರಾಯಚೂರು ನಗರದ ಕೆಲ ವಾರ್ಡ್‌ಗಳಿಗೂ ಟ್ಯಾಂಕರ್‌ ಮೂಲಕ ನೀರು ಸರಬರಾಜು ಮಾಡಲಾಗುತ್ತಿದೆ. ರಾಯಚೂರು ತಾಲೂಕು ಒಂದರಲ್ಲೇ 162 ಗ್ರಾಮಗಳ ಪೈಕಿ 34 ಗ್ರಾಮಗಳಲ್ಲಿ ನೀರಿನ ಸಮಸ್ಯೆ ಇದ್ದು, 239 ಕೊಳವೆಬಾವಿಗಳು ಸ್ಥಗಿತಗೊಂಡಿವೆ. ಯರಗೇರಾ, ಯದ್ಲಾಪುರ ಗ್ರಾಪಂ ವ್ಯಾಪ್ತಿಯಲ್ಲಿ 28 ಕೊಳವೆ ಬಾವಿಗಳು ಕೆಟ್ಟು ನಿಂತಿವೆ. ತಾಲೂಕಿನಲ್ಲೇ 36 ಖಾಸಗಿ ಕೊಳವೆ ಬಾವಿ ಗುರುತಿಸಿ ಬಾಡಿಗೆ ಪಡೆಯಲಾಗಿದೆ.
ಬೇಸಿಗೆಯಲ್ಲಿ ನೀರಿನ ಸಮಸ್ಯೆಯಾಗದಂತೆ ಅಗತ್ಯ ಕ್ರಮ ಕೈಗೊಳ್ಳಲಾಗಿದೆ. ಟಾಸ್ಕ್ಫೋರ್ಸ್‌ ಸಭೆ ನಡೆಸಿ ಅಗತ್ಯ ಕ್ರಮಕ್ಕೆ ಸೂಚಿಸಲಾಗಿದೆ. ಅಗತ್ಯವಿರುವ ಕಡೆ ಕೊಳವೆಬಾವಿ ಕೊರೆಸಲಾಗಿದೆ. ಖಾಸಗಿ ಬೋರ್‌ವೆಲ್ ಬಾಡಿಗೆ ಪಡೆದು ನೀರು ಪೂರೈಸಲಾಗುತ್ತಿದೆ.
ಶರತ್‌ ಬಿ., ಜಿಲ್ಲಾಧಿಕಾರಿ
Advertisement

Udayavani is now on Telegram. Click here to join our channel and stay updated with the latest news.

Next