ಸಿದ್ಧಯ್ಯಸ್ವಾಮಿ ಕುಕನೂರು
ರಾಯಚೂರು: ಜಿಲ್ಲೆಯ ರೈತರ ದೌರ್ಭಾಗ್ಯ ಎನ್ನುವಂತೆ ಈ ವರ್ಷವೂ ವರುಣನ ಅವಕೃಪೆಗೆ ತುತ್ತಾಗಿದ್ದು, ದಿನ ಬೆಳಗಾದರೆ ಕಾರ್ಮೋಡಗಳನ್ನೇ ನೋಡುತ್ತ ಕುಳಿತುಕೊಳ್ಳುವ ಪರಿಸ್ಥಿತಿ ಎದುರಾಗಿದೆ. ಮುಂಗಾರು ಶುರುವಾಗಿ ತಿಂಗಳಾಗುತ್ತ ಬಂದರೂ ಬಿತ್ತನೆಗೆ ಬೇಕಾದಷ್ಟು ಮಳೆ ಬಾರದಿರುವುದು ರೈತರ ಆತಂಕ ಇಮ್ಮಡಿಗೊಳಿಸಿದೆ.
ಇಲಾಖೆ ಅಧಿಕಾರಿಗಳ ಮಾಹಿತಿ ಪ್ರಕಾರ ಈವರೆಗೂ ಜಿಲ್ಲೆಯಲ್ಲಿ ಕೇವಲ ಶೆ.1ರಷ್ಟು ಬಿತ್ತನೆಯಾಗಿದೆ. ಜಿಲ್ಲೆಯಲ್ಲಿ 3,50,700 ಹೆಕ್ಟೇರ್ ಬಿತ್ತನೆ ಗುರಿ ಇದ್ದು, ಈವರೆಗೆ ಕೇವಲ 6 ಸಾವಿರ ಹೆಕ್ಟೇರ್ ಪ್ರದೇಶದಲ್ಲಿ ಬಿತ್ತನೆ ಮಾಡಲಾಗಿದೆ. ಉಳಿದ ರೈತರು ಭೂಮಿ ಹದ ಮಾಡಿಕೊಂಡು ವರುಣನಿಗಾಗಿ ಅಕ್ಷರಶಃ ಚಾತಕ ಪಕ್ಷಿಗಳಂತೆ ಕಾದು ಕುಳಿತಿದ್ದಾರೆ. ಈವರೆಗೆ 88 ಮಿಮೀ ಮಳೆಯಾಗಬೇಕಿತ್ತು. ಆದರೆ, ಕೇವಲ 55 ಮಿಮೀ ಮಳೆಯಾಗಿದ್ದು, ಶೇ.35ರಷ್ಟು ಮಳೆ ಕೊರತೆಯಾಗಿದೆ. ಆದರೆ, ಈಗ ಬಿದ್ದ ಮಳೆ ಭೂಮಿ ಹದ ಮಾಡಿಕೊಳ್ಳಲ್ಲಷ್ಟೇ ಯೋಗ್ಯವಾಗಿದ್ದು, ಬಿತ್ತನೆಗೆ ಪೂರಕವಾಗಿಲ್ಲ. ಹೀಗಾಗಿ ರೈತರು ಬಿತ್ತನೆ ಬೀಜ, ರಸಗೊಬ್ಬರ ಸಿದ್ಧಪಡಿಸಿಕೊಂಡಿದ್ದಾರೆ.
ಸತತ ಬರಕ್ಕೆ ಕಂಗೆಟ್ಟ ರೈತರು: ಕಳೆದ ಎರಡ್ಮೂರು ವರ್ಷಗಳಿಂದ ಜಿಲ್ಲೆಯಲ್ಲಿ ಆವರಿಸಿದ ಭೀಕರ ಬರದಿಂದ ರೈತರು ಕಂಗೆಟ್ಟು ಹೋಗಿದ್ದಾರೆ. ಕಳೆದ ವರ್ಷವಂತೂ ಮುಂಗಾರು ಹಿಂಗಾರು ಸಂಪೂರ್ಣ ಕೈಕೊಟ್ಟಿದ್ದು, ಅನ್ನದಾತ ಕೃಷಿಗೆ ಮಾಡಿದ ಖರ್ಚು ಕೂಡ ಹಿಂದುರುಗಿ ಬರಲಿಲ್ಲ. ಕನಿಷ್ಠ ಪಕ್ಷ ಈ ಬಾರಿಯಾದರೂ ಉತ್ತಮ ಮಳೆಯಾಗಿ ದೊಡ್ಡ ಇಳುವರಿ ಬಂದರೆ ಸಾಲಬಾಧೆಯಿಂದ ಮುಕ್ತಿ ಕಾಣಬೇಕು ಎಂಬ ಕನಸಿಗೂ ಆರಂಭಿಕ ವಿಘ್ನ ಎದುರಾಗಿದೆ.
ಟ್ಯಾಂಕರ್ ಮೂಲಕ ನೀರು ಪೂರೈಕೆ: ಕಳೆದ ವರ್ಷ ಹೇಗೋ ಎದೆ ಎತ್ತರಕ್ಕೆ ಬೆಳೆದ ಬೆಳೆಯನ್ನು ರಕ್ಷಿಸಿಕೊಳ್ಳಲು ರೈತರು ಪಡಿಪಾಟಲು ಪಟ್ಟಿದ್ದರು. ಸಾವಿರಾರು ರೂ. ಖರ್ಚು ಮಾಡಿ ಟ್ಯಾಂಕರ್ ಮೂಲಕ ನೀರು ಸರಬರಾಜು ಮಾಡಿದ್ದರು. ಕೆಲವೆಡೆ ಕಿಮೀ ದೂರದಿಂದ ಪೈಪ್‌ಲೈನ್ ಮಾಡಿಸಿಕೊಂಡು ನೀರು ಕಟ್ಟಿದ್ದರು. ಈ ಬಾರಿಯೂ ಅಂಥದ್ದೇ ಸ್ಥಿತಿ ಎದುರಾಗುವುದೇ ಎಂಬ ಆತಂಕ ಕಾಡುತ್ತಿದೆ.
ವಿಮೆ ಮಾಡಿಸಿಕೊಳ್ಳಲು ಸೂಚನೆ: ಈ ಬಾರಿಯೂ ಬರ ಮುನ್ಸೂಚನೆ ಕಂಡು ಬಂದ ಹಿನ್ನೆಲೆಯಲ್ಲಿ ಪ್ರಧಾನಮಂತ್ರಿ ಫಸಲ್ ಬಿಮಾ ಯೋಜನೆಯಡಿ ಬೆಳೆ ವಿಮೆ ಮಾಡಿಸಿಕೊಳ್ಳುವಂತೆ ಇಲಾಖೆ ಪ್ರಕಟಣೆ ನೀಡಿದೆ. ಬಿತ್ತನೆ ಮುನ್ನವೂ ವಿಮೆ ಮಾಡಿಸಬಹುದಾಗಿದ್ದು, ಬಳಿಕ ಅದನ್ನು ಯಾವ ಬೆಳೆಗೆ ಬೇಕಾದರೂ ಬದಲಿಸಿಕೊಳ್ಳಲು ಅವಕಾಶ ನೀಡಲಾಗಿದೆ. ಇನ್ನು ವಿಮೆ ಸಮಸ್ಯೆಗಳನ್ನು ಇತ್ಯರ್ಥಗೊಳಿಸಲು ವಿಮಾ ಕಂಪನಿ ಜಿಲ್ಲೆ ಮತ್ತು ತಾಲೂಕು ಮಟ್ಟದಲ್ಲಿ ಅಧಿಕಾರಿಗಳನ್ನು ನಿಯೋಜಿಸಿರುವುದು ಅನುಕೂಲವಾಗಲಿದೆ. ಹೀಗಾಗಿ ವಿಮೆ ಮಾಡಿಸಿದಲ್ಲಿ ರೈತರು ನಷ್ಟದಿಂದ ಪಾರಾಗಬಹುದು ಎನ್ನುವುದು ಇಲಾಖೆ ಅಧಿಕಾರಿಗಳ ವಿವರಣೆ.