ಸಿಂಧನೂರು: ಸತತ ನಾಲ್ಕು ವರ್ಷದಿಂದ ಮಳೆ ಇಲ್ಲದೇ ಭೀಕರ ಬರ ಎದುರಿಸಿದ ಭತ್ತದ ಕಣಜ ಸಿಂಧನೂರು ತಾಲೂಕಿನಲ್ಲಿ ಈ ಬಾರಿಯೂ ಬರದ ಛಾಯೆ ಆವರಿಸಿದೆ. ಉತ್ತಮ ಮಳೆಯಾಗಬಹುದೆಂಬ ರೈತರ ನಿರೀಕ್ಷೆ ಹುಸಿಯಾಗಿದೆ.
ಜೂನ್ ತಿಂಗಳು ಮುಗಿಯುತ್ತ ಬಂದರೂ ಮುಂಗಾರು ಮಳೆ ಭೂಮಿ ಹಸಿಯಾಗಿಸಿಲ್ಲ. ಇದರಿಂದ ರೈತರ ಜಂಘಾಬಲವೇ ಉಡುಗುವಂತಾಗಿದೆ. ಬಿತ್ತನೆಗೆ ಭೂಮಿ ಸಿದ್ಧಮಾಡಿಕೊಂಡಿರುವ ರೈತರು ಮಳೆ ಸುರಿದೀತೆ ಎಂದು ಓಡಿಹೋಗುತ್ತಿರುವ ಮೋಡಗಳತ್ತ ಮುಖ ಮಾಡಿ ಕುಳಿತುಕೊಳ್ಳುವಂತಾಗಿದೆ. ನಿತ್ಯ ಕೆಲ ಕಾಲ ಬಿಸಿಲು, ಮತ್ತೆ ಕೆಲ ಕಾಲ ಮೋಡ ಆವರಿಸಿಕೊಳ್ಳುತ್ತಿದ್ದು, ಬಿಸಿಲು-ಮೋಡಗಳ ಕಣ್ಣಾಮುಚ್ಚಾಲೆ ಆಟ ನಡೆಯುತ್ತಿದೆ.
ಮಳೆ ಪ್ರಮಾಣ: ವಾಡಿಕೆಯಂತೆ ತಾಲೂಕಿನಲ್ಲಿ ಈವರೆಗೆ 140 ಮಿ.ಮೀ. ಮಳೆಯಾಗಬೇಕಿತ್ತು. ಆದರೆ ಕೇವಲ 77 ಮಿ.ಮೀ. ಮಾತ್ರ ಮಳೆಯಾಗಿದೆ. ಕೆಲ ಕಡೆ ರೈತರು ಬಿತ್ತನೆ ಇರಲಿ, ಭೂಮಿ ಹದ ಮಾಡಲಿಕ್ಕೂ ಸಾಧ್ಯವಾಗಿಲ್ಲ.
ಬಿತ್ತನೆ ಗುರಿ: ತಾಲೂಕಿನಲ್ಲಿ 62,100 ಹೆಕ್ಟೇರ್ ಪ್ರದೇಶದಲ್ಲಿ ಭತ್ತ ಬಿತ್ತನೆ ಗುರಿ ಇದೆ. ಆದರೆ ಎಲ್ಲೂ ಬಿತ್ತನೆ ಆಗಿಲ್ಲ. ನೀರಾವರಿ ಪ್ರದೇಶದ 145 ಹೆಕ್ಟೇರ್ ಸಜ್ಜೆ ಬಿತ್ತನೆ ಗುರಿ ಇದೆ., ಖುಷ್ಕಿಯಲ್ಲಿ 2,755 ಹೆಕ್ಟೇರ್ ಬಿತ್ತನೆ ಗುರಿ ಇದೆ. ಆದರೆ ಕೇವಲ 54 ಹೆಕ್ಟೇರ್ ಪ್ರದೇಶದಲ್ಲಿ ಬಿತ್ತನೆ ಆಗಿದೆ. ಒಟ್ಟಾರೆಯಾಗಿ 113 ಹೆಕ್ಟೇರ್ ಖುಷ್ಕಿ ಭೂಮಿಯಲ್ಲಿ ಬಿತ್ತನೆ ಆಗಿದ್ದರೆ, ನೀರಾವರಿ ವ್ಯಾಪ್ತಿಯ 9 ಹೆಕ್ಟೇರ್ ಪ್ರದೇಶದಲ್ಲಿ ಮಾತ್ರ ಬಿತ್ತನೆ ಆಗಿದೆ. ಆದರೆ ತೇವಾಂಶ ಕೊರತೆಯಿಂದ ಬಿತ್ತಿದ ಬೀಜ ಮೊಳಕೆಯೊಡೆದು ಒಣಗಿ ಹೋಗಿದೆ.
ನಾಲೆಗೆ ನೀರು ಬಂದರೆ ಭತ್ತ ನಾಟಿ: ನೀರಾವರಿ ಪ್ರದೇಶದಲ್ಲಿ ತುಂಗಭದ್ರಾ ಜಲಾಶಯದಿಂದ ಎಡದಂಡೆ ನಾಲೆಗೆ ನೀರು ಹರಿದುಬಂದರೆ ಮಾತ್ರ ಭತ್ತ ನಾಟಿ ಆರಂಭವಾಗಲಿದೆ. ಜೂನ್ ತಿಂಗಳು ಮುಗಿದರೂ ತುಂಗಭದ್ರಾ ಜಲಾನಯನ ಪ್ರದೇಶದಲ್ಲಿ ಮಳೆ ಆಗಿಲ್ಲ. ಜತೆಗೆ ಭದ್ರಾ ವ್ಯಾಪ್ತಿಯಲ್ಲಿಯೂ ಮಳೆ ಬಿದ್ದಿಲ್ಲ. ಇದರಿಂದ ಜಲಾಶಯಕ್ಕೆ ಇದುವರೆಗೆ ಹನಿ ನೀರು ಹರಿದು ಬಂದಿಲ್ಲ. ಈ ವರ್ಷವೂ ಮುಂದುವರಿದಿದೆ. ವಾರದಲ್ಲಿ ಮಳೆ ಬಿದ್ದರೆ ಮಾತ್ರ ಭತ್ತದ ಕಣಜ ಚೇತರಿಸಿಕೊಳ್ಳಲಿದೆ.
ಹವಾಮಾನ ಇಲಾಖೆ ವರದಿಯಂತೆ ಇಷ್ಟರಲ್ಲೇ ಮಳೆಯಾಗುವ ಸೂಚನೆ ಇದೆ. ಭತ್ತ ನಾಟಿಗೂ ತಿಂಗಳು ಕಾಲಾವಕಾಶ ಇದೆ. ತಾಲೂಕಿನಲ್ಲಿ ಇದುವರೆಗೆ ನಿರೀಕ್ಷೆಯಂತೆ ಮಳೆ ಬಿದ್ದಿಲ್ಲ.
•
ಜಯಪ್ರಕಾಶ
ಕೃಷಿ ಅಧಿಕಾರಿ, ಸಿಂಧನೂರು.
ಈಗ ಮತ್ತೆ ಮಳೆ ಕಣ್ಣಾಮುಚ್ಚಾಲೆಯಾಟ ಆಡುತ್ತಿರುವುದರಿಂದ ಈ ಬಾರಿಯೂ ರೈತರ ಬದುಕು ದುಸ್ತರವಾಗುವ ಎಲ್ಲ ಲಕ್ಷಣಗಳು ಕಾಣುತ್ತಿವೆ. ಸರ್ಕಾರ ಪ್ರತಿ ಎಕರೆಗೆ ಪರಿಹಾರ ನೀಡಬೇಕು.
•ಅಮರೇಶ ಗೊರೇಬಾಳ,
ರೈತ ಸಿಂಧನೂರು.