ರಾಯಚೂರು: ಸಂಕ್ರಾಂತಿ ಹಬ್ಬವನ್ನು ಜಿಲ್ಲೆಯಲ್ಲಿ ಬುಧವಾರ ಸಡಗರ ಸಂಭ್ರಮದಿಂದ ಆಚರಿಸಲಾಯಿತು. ಜಿಲ್ಲೆಯಲ್ಲಿ ಹರಿಯುವ ಕೃಷ್ಣಾ, ತುಂಗಭದ್ರಾ ನದಿಗಳಿಗೆ ತೆರಳಿದ ಜನ ಪುಣ್ಯಸ್ನಾನ ಮಾಡಿದರು. ಜಿಲ್ಲೆಯಲ್ಲಿ ಜ.14ರಂದು ವಿವಿಧೆಡೆ ಸಂಕ್ರಾಂತಿ ಆಚರಣೆ ಮಾಡಿದ ಹಿನ್ನೆಲೆಯಲ್ಲಿ ನದಿಪಾತ್ರದ ಪುಣ್ಯಕ್ಷೇತ್ರಗಳಲ್ಲಿ ಬುಧವಾರ ಜನಾಭಾವ ಕಂಡು ಬಂತು.
ಹಳ್ಳಿಗಾಡಿನ ಸೊಗಡು ಸಾರುವ ಹಬ್ಬವನ್ನು ನಗರದಲ್ಲೂ ವಿಜೃಂಭಣೆಯಿಂದ ಆಚರಿಸಲಾಯಿತು. ಹಬ್ಬದ ನಿಮಿತ್ತ ಮನೆಗಳ ಮುಂದೆ ರಂಗೋಲಿ ಬಿಡಿಸಿ ವಿಶೇಷ ಅಲಂಕಾರ ಮಾಡಲಾಗಿತ್ತು. ಕೊಂತೆಮ್ಮಗಳನ್ನು ಮಾಡಿ ಪಾಂಡವರ ಪ್ರತಿಷ್ಠಾಪನೆ ಮಾಡಲಾಗಿತ್ತು. ಸಜ್ಜೆ ರೊಟ್ಟಿ, ಎಳ್ಳಿನ ಹೋಳಿಗೆ, ಚಕ್ಕಲಿ, ಹತ್ತಾರು ತರಕಾರಿ ಬಳಸಿ ರಚಿಸಿದ ಭರ್ತ, ಎಣ್ಣೆ ಬದನೆಕಾಯಿ, ಶೇಂಗಾ ಚಟ್ನಿ, ಚಿತ್ರಾನ್ನ, ಮೊಸರನ್ನ ಸೇರಿದಂತೆ ಹತ್ತು ಹಲವು ಖಾದ್ಯಗಳನ್ನು ಮಾಡಲಾಗಿತ್ತು. ನದಿಯಲ್ಲಿ ಮಿಂದೆದ್ದ ಬಳಿಕ ಎಲ್ಲರೂ ಕೂಡಿ ಬುತ್ತಿ ಸವಿಯುವ ಮೂಲಕ ಸಂಭ್ರಮಿಸಿದರು.
ಸಂಕ್ರಾಂತಿ ನಿಮಿತ್ತ ದೇವಸ್ಥಾನಗಳಲ್ಲಿ ವಿಶೇಷ ಪೂಜೆ ಕಾರ್ಯಗಳು ಜರುಗಿದವು. ಇಂದು ಶಬರಿಮಲೆಯಲ್ಲಿ ಮಕರ ಜ್ಯೋತಿ ದರ್ಶನ ಇರುವ ಕಾರಣ ನಗರದ ಅಯ್ಯಪ್ಪಸ್ವಾಮಿ ದೇವಸ್ಥಾನದಲ್ಲಿ ವಿಶೇಷ ಪೂಜೆ ನೆರವೇರಿಸಲಾಯಿತು. ಅಯ್ಯಪ್ಪಸ್ವಾಮಿ ಮಾಲೆ ಹಾಕಿದ ಗ್ರಾಮೀಣ ಶಾಸಕ ತಿಪ್ಪರಾಜ ಸೇರಿದಂತೆ ಅನೇಕರು ನಂದೀಶ್ವರ ದೇವಸ್ಥಾನದಲ್ಲಿ ವಿಶೇಷ ಪೂಜೆ ನೆರವೇರಿಸಿದರು. ನಗರದ ಚಂದ್ರಮೌಳೇಶ್ವರ, ನಗರೇಶ್ವರ, ದೇವಸೂಗೂರಿನ ಶ್ರೀ ಸೂಗೂರೇಶ್ವರ ಸ್ವಾಮಿ ದೇವಸ್ಥಾನ ಸೇರಿದಂತೆ ವಿವಿಧ ದೇವಸ್ಥಾನಗಳಲ್ಲಿ ವಿಶೇಷ ಪೂಜೆ ನೆರವೇರಿಸಲಾಯಿತು.
ಹಳ್ಳಿಗಳಲ್ಲೂ ಹಬ್ಬದ ವಾತಾವರಣ ಮನೆ ಮಾಡಿತ್ತು. ಜನ ಪುಣ್ಯಸ್ನಾನಗೈದು ಎತ್ತುಗಳಿಗೆ ವಿಶೇಷ ಅಲಂಕಾರ ಮಾಡಿದರು. ಈ ನಿಮಿತ್ತ ಕಲ್ಲು ಎತ್ತುವ ಸ್ಪರ್ಧೆ, ಎತ್ತುಗಳಿಂದ ಭಾರ ಎಳೆಸುವ ಸ್ಪರ್ಧೆ, ಕಿಡಿ ಹಾಯಿಸುವ ಸ್ಪರ್ಧೆಗಳನ್ನೂ ನಡೆಸಲಾಯಿತು.
ನದಿಪಾತ್ರದ ಪುಣ್ಯತಾಣಗಳತ್ತ ಜನ: ಪುಣ್ಯಸ್ನಾನಕ್ಕೆಂದು ಜಿಲ್ಲೆಯ ನಾನಾ ಭಾಗಗಳಿಂದ ಆಗಮಿಸಿದ ಜನ ಉಭಯ ನದಿಗಳ ಪಾತ್ರದಲ್ಲಿರುವ ಹಲವು ಪುಣ್ಯಕ್ಷೇತ್ರಗಳಿಗೆ ಭೇಟಿ ನೀಡಿದರು. ಇದರಿಂದ ನದಿಪಾತ್ರದ ದೇವಸ್ಥಾನಗಳಲ್ಲಿ ಜನಸಂದಣಿ ಜೋರಾಗಿತ್ತು. ಗೂಗಲ್ ಪ್ರಭುಸ್ವಾಮಿ ದೇವಸ್ಥಾನ, ಕುರುವಪುರದ ಶ್ರೀಪಾದವಲ್ಲಭ ದೇವಸ್ಥಾನ, ಕಾಡ್ಲೂರಿನ ಆಂಜನೇಯ ಸ್ವಾಮಿ ದೇವಸ್ಥಾನ, ಕೊಪ್ಪರದ ಲಕ್ಷ್ಮೀ ನರಸಿಂಹ ಸ್ವಾಮಿ, ತಿಂಥಣಿ ಮೌನೇಶ್ವರ, ಗುರುಗುಂಟಾ ಅಮರೇಶ್ವರ, ಹೂವಿನಹಡಗಲಿ, ನಾರದಗಡ್ಡೆ, ರಾಮಗಡ್ಡೆಗಳಿಗೆ ಭಕ್ತ ಸಾಗರ ಹರಿದುಬಂದಿತ್ತು. ಇನ್ನು ದಕ್ಷಿಣ ಕರ್ನಾಟಕದ ಜನ ಮಂತ್ರಾಲಯದ ಶ್ರೀ ರಾಘವೇಂದ್ರ ಸ್ವಾಮಿ ಮಠಕ್ಕೆ ಬಂದು ಇಲ್ಲಿಯೇ ಪುಣ್ಯಸ್ನಾನ ಮಾಡಿ ರಾಯರ ದರ್ಶನಾಶೀರ್ವಾದ ಪಡೆದರು. ತುಂಗಭದ್ರಾ ನದಿ ಪಾತ್ರದ ಬಿಚ್ಚಾಲಿ, ಮಂತ್ರಾಲಯ, ಚೀಕಲಪರ್ವಿ ಸೇರಿದಂತೆ ವಿವಿಧ ತಾಣಗಳಿಗೆ ಜನ ಭೇಟಿ ನೀಡಿದರು. ಈ ಭಾಗದ ಜನ ಹಂಪಿ ವಿರೂಪಾಕ್ಷೇಶ್ವರ, ಜುರಾಲಾ, ಶ್ರೀಶೈಲ, ಶಬರಿಮಲೆ ಸೇರಿದಂತೆ ವಿವಿಧ ಪುಣ್ಯಕ್ಷೇತ್ರಗಳಿಗೆ ಪ್ರವಾಸ ತೆರಳಿದ್ದರು. ಇನ್ನು ನದಿಗಳಿಗೆ ತೆರಳಲಾಗದವರು ಮನೆಯಲ್ಲಿಯೇ ಸ್ನಾನ ಮಾಡಿ, ಹೊಲಗಳಿಗೆ, ನಗರದ ಉದ್ಯಾನವನಗಳಿಗೆ, ಇಲ್ಲಿನ ಕೃಷಿ ವಿವಿ ಆವರಣಗಳಿಗೆ ಕುಟುಂಬದ ಸದಸ್ಯರೊಂದಿಗೆ ತೆರಳಿ ಬುತ್ತಿ ಊಟ ಸವಿದು ಸಂಭ್ರಮಿಸಿದರು.
ಉಭಯ ನದಿಗಳ ಪ್ರಮುಖ ಸ್ಥಳಗಳಲ್ಲಿ ಪೊಲೀಸರು ಮುನ್ನೆಚ್ಚರಿಕೆ ಕ್ರಮ ವಹಿಸಿದ್ದರು. ಅಪಾಯ ಸ್ಥಳಗಳಿಗೆ ತೆರಳಿದಂತೆ ಎಚ್ಚರಿಕೆ ನೀಡಲಾಗುತ್ತಿತ್ತು. ಅಲ್ಲಲ್ಲಿ ಮೊಸಳೆಗಳಿವೆ ಎಂದು ಎಚ್ಚರಿಕೆ ನೀಡಲಾಗುತ್ತಿತ್ತು.