Advertisement

ನೆರೆ ಬಂದಾಗ ಆಸರೆ ನೆನಪು

11:19 AM Aug 15, 2019 | Team Udayavani |

ಸಿದ್ಧಯ್ಯಸ್ವಾಮಿ ಕುಕನೂರು
ರಾಯಚೂರು:
ಸಂಕಟ ಬಂದಾಗ ವೆಂಕಟರಮಣ ಎನ್ನುವಂತೆ ಜಿಲ್ಲೆಗೆ ನೆರೆ ಬಂದಾಗ ಆಸರೆ ಮನೆಗಳ ನೆನಪು ಮಾಡಿಕೊಳ್ಳುವಂತಾಗಿದೆ ಸಂತ್ರಸ್ತರ ಸ್ಥಿತಿ. 2009ರಲ್ಲಿ ನಿರ್ಮಿಸಿದ್ದ ಪುನರ್ವಸತಿ ಕೇಂದ್ರಗಳು ಈಗ ವಾಸಿಸಲಾಗದ ಸ್ಥಿತಿಗೆ ತಲುಪಿದ್ದು, ನದಿ ಪಾತ್ರದ ಜನರಿಗೆ ಪರಿಹಾರ ಕೇಂದ್ರಗಳೇ ಗತಿ ಎನ್ನುವಂತಾಗಿದೆ.

Advertisement

ತಾಲೂಕಿನ ಗುರ್ಜಾಪುರ ಸಂಪೂರ್ಣ ಮುಳುಗಡೆಯಾಗಿದ್ದು, ಅಲ್ಲಿನ ಜನರನ್ನು ಜೇಗರಕಲ್ಗೆ ಸ್ಥಳಾಂತರಿಸಲಾಗಿದೆ. ಆದರೆ, ಈ ಗ್ರಾಮಸ್ಥರಿಗಾಗಿಯೇ 2009ರಲ್ಲಿ ನಿರ್ಮಿಸಿದ ಪುನರ್ವಸತಿ ಕೇಂದ್ರದಲ್ಲಿ ಅಕ್ಷರಶಃ ಜಾಲಿ ಬೆಳೆದು ನಿಂತಿದೆ. ಪ್ರವಾಹ ಬಂದಾಗಲೊಮ್ಮೆ ನಮ್ಮನ್ನು ಒಕ್ಕಲೆಬ್ಬಿಸುವ ಜಿಲ್ಲಾಡಳಿತ ಸುಸಜ್ಜಿತ ಪುನರ್ವಸತಿ ಕಲ್ಪಿಸುತ್ತಿಲ್ಲ ಎಂದು ಹಿಡಿಶಾಪ ಹಾಕುತ್ತಿದ್ದಾರೆ ಗ್ರಾಮಸ್ಥರು. ಲೋಕೋಪಯೋಗಿ ಇಲಾಖೆ ಅಂದು 70ಕ್ಕೂ ಅಧಿಕ ಮನೆಗಳನ್ನು ಕಟ್ಟಿದೆಯಾದರೂ ಅದಕ್ಕೆ ಸುಣ್ಣ ಬಣ್ಣವನ್ನೂ ಬಳಿದಿಲ್ಲ. ಕನಿಷ್ಠ ಸೌಲಭ್ಯ ಕೂಡ ಕಲ್ಪಿಸಿಲ್ಲ.

ಗುರ್ಜಾಪುರಕ್ಕೆ ಪ್ರತಿ ವರ್ಷ ನೆರೆ ಭೀತಿ ಎದುರಾಗುತ್ತಲೇ ಇರುತ್ತದೆ. ಏಕೆಂದರೆ ಕೃಷ್ಣೆ, ಭೀಮಾ ನದಿಗಳ ಸಂಗಮವಾಗುವುದೇ ಈ ಗ್ರಾಮದ ಸಮೀಪ. ಎರಡೂ ನದಿ ಸೇರಿದಾಗ ಗ್ರಾಮಕ್ಕೆ ನೀರು ನುಗ್ಗಿ ಅವಾಂತರ ಸೃಷ್ಟಿಯಾಗುತ್ತದೆ. 2009ರಲ್ಲಿಯೂ ಇಂಥದ್ದೇ ಸ್ಥಿತಿ ಎದುರಾದಾಗ ಊರು ತೊರೆದಿದ್ದ ಜನರಿಗೆ ಸುಮಾರು 5-6 ಕಿಮೀ ದೂರದಲ್ಲಿ ಮನೆಗಳನ್ನು ನಿರ್ಮಿಸಿಕೊಡಲಾಗಿತ್ತು. ಆದರೆ, ಅಲ್ಲಿಗೆ ಕುಡಿಯುವ ನೀರಾಗಲಿ, ರಸ್ತೆಯಾಗಲಿ, ಅಗತ್ಯ ಸೌಕರ್ಯಗಳೇ ಕಲ್ಪಿಸಲಿಲ್ಲ. ಇದರಿಂದ ಜನ ಅತ್ತ ಮುಖ ಕೂಡ ಮಾಡಲಿಲ್ಲ.

ಕಿಟಕಿ-ಬಾಗಿಲುಗಳು ಇಲ್ಲ: 600ಕ್ಕೂ ಅಧಿಕ ಜನರಿಗಾಗಿ 70ಕ್ಕೂ ಅಧಿಕ ಮನೆಗಳನ್ನು ನಿರ್ಮಿಸಲಾಗಿದೆ. ಜನವಸತಿ ಇಲ್ಲದ ಕಾರಣ ಕ್ರಮೇಣ ಮನೆಗಳು ಹಾಳಾಗುತ್ತಿದ್ದು, ಈಗ ಅಲ್ಲಿ ಮನೆಗಳ ಒಳಗೆಯೇ ಜಾಲಿ ಬೆಳೆದು ನಿಂತಿದೆ.

ವಿದ್ಯುತ್‌ ಕಂಬಗಳನ್ನು ಹಾಕಲಾಗಿದೆ. ಆದರೆ, ಅವು ಈಗ ನೆಲಕ್ಕೆ ಬಾಗಿವೆ. ಕಿಟಕಿ ಬಾಗಿಲುಗಳನ್ನು ಕಿತ್ತುಕೊಂಡು ಹೋಗಲಾಗಿದೆ. ನೆಲಕ್ಕೆ ಹಾಕಿದ ಬಂಡೆಗಳು ಉಳಿದಿಲ್ಲ. ಕಟ್ಟಡಗಳು ಈಗ ಅಕ್ಷರಶಃ ಅಸ್ಥಿಪಂಜರಗಳಂತೆ ಖಾಲಿ ಖಾಲಿ ಸೂಸುತ್ತಿವೆ. ಇನ್ನೂ ಅನೇಕ ಮನೆಗಳ ಬುನಾದಿಯೇ ಸಡಿಲಿದ್ದು, ಅವಸಾನ ಸ್ಥಿತಿಗೆ ತಲುಪಿವೆ. ಹೋಗಲಿ ಹೇಗೋ ಹೋಗಿ ವಾಸವಾದರೆ ಆಯಿತು ಎಂದರೆ ಅದಕ್ಕೆ ಸಂಬಂಧಿಸಿದ ಹಕ್ಕುಪತ್ರಗಳನ್ನೇ ಸರಿಯಾಗಿ ನೀಡಿಲ್ಲ ಎಂದು ದೂರುತ್ತಾರೆ ಗ್ರಾಮಸ್ಥರು. ಈಗ ಈ ಮನೆಗಳು ಅನೈತಿಕ ಚಟುವಟಿಕೆ ತಾಣಗಳಾಗಿ ಮಾರ್ಪಟ್ಟಿದ್ದು, ಕಂಡಕಂಡಲ್ಲಿ ಮದ್ಯದ ಬಾಟಲಿಗಳೇ ರಾರಾಜಿಸುತ್ತವೆ.

Advertisement

ಅಲ್ಲಿ ಏನಿದೆ ಎಂದು ಹೋಗಬೇಕು. ಇರಲು ಯೋಗ್ಯವಾದ ಒಂದು ಮನೆ ಕೂಡ ಇಲ್ಲ. ವಿದ್ಯುತ್‌, ಕುಡಿಯುವ ನೀರು, ರಸ್ತೆ ಯಾವುದು ಕಲ್ಪಿಸಿಲ್ಲ. ಕಿಟಕಿ ಬಾಗಿಲು ಕಿತ್ತುಕೊಂಡು ಹೋಗಿದ್ದಾರೆ. ಬಯಲಲ್ಲೇ ಬಾಳುವೆ ಮಾಡುವಂತಾಗುತ್ತದೆ. ಅದಕ್ಕಿಂತ ನಮ್ಮ ದೂರದ ಸಂಬಂಧಿಗಳ ಮನೆಗೆ ಹೋಗುವುದೇ ವಾಸಿ.
ಮಲ್ಲಿಕಾರ್ಜುನ,
ಗುರ್ಜಾಪುರ ನಿವಾಸಿ

Advertisement

Udayavani is now on Telegram. Click here to join our channel and stay updated with the latest news.

Next