ರಾಯಚೂರು: ಸತತ ಬರದಿಂದ ರಾಜ್ಯದಲ್ಲಿ ರೈತರು ಆತ್ಮಹತ್ಯೆ ಮಾಡಿಕೊಳ್ಳುವ ಸ್ಥಿತಿಯಲ್ಲಿದ್ದರೆ ಆಳುವ ಸರ್ಕಾರ ಹಾಗೂ ವಿಪಕ್ಷ ಅಧಿಕಾರಕ್ಕಾಗಿ ಹಪಾಹಪಿಸುತ್ತಿವೆ. ಎಲ್ಲ ಪಕ್ಷಗಳ ಧೋರಣೆ ಖಂಡಿಸಿ ವಿಧಾನಸೌಧ ಖಾಲಿ ಮಾಡಿ ಹೋರಾಟ ಹಮ್ಮಿಕೊಂಡಿರುವುದಾಗಿ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ರಾಜ್ಯಾಧ್ಯಕ್ಷ ಬಡಗಲಪುರ ನಾಗೇಂದ್ರ ತಿಳಿಸಿದರು.
ನಗರದ ಪತ್ರಿಕಾ ಭವನದಲ್ಲಿ ಗುರುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಭೀಕರ ಕ್ಷಾಮದಿಂದ ರೈತರಿಗೆ ಸಂಕಷ್ಟ ಕಾಲ ಎದುರಾಗಿದೆ. ತೀವ್ರ ಬರ ಎದುರಿಸುವ ರಾಜ್ಯಗಳಲ್ಲಿ ರಾಜ್ಯಕ್ಕೆ 2ನೇ ಸ್ಥಾನವಿದೆ. ಇಡೀ ದೇಶದಲ್ಲಿ ಶೇ.45ರಷ್ಟು ಬರ ಇದ್ದರೆ ರಾಜ್ಯದಲ್ಲಿ ಶೇ.16ರಷ್ಟಿದೆ. ಜಲಾಶಯಗಳೆಲ್ಲ ಖಾಲಿಯಾಗಿ ಬೇಸಿಗೆಯಲ್ಲಿ ಕುಡಿಯುವ ನೀರಿಗೂ ತತ್ವಾರ ಎದುರಾಗಿದೆ. ಆದರೆ, ಸಮ್ಮಿಶ್ರ ಸರ್ಕಾರದ ಕಾಂಗ್ರೆಸ್, ಜೆಡಿಎಸ್ ಮತ್ತು ವಿಪಕ್ಷ ಸ್ಥಾನದಲ್ಲಿರುವ ಬಿಜೆಪಿ ದಿನಬೆಳಗಾದರೆ ಖುರ್ಚಿಗಾಗಿ ಕಚ್ಚಾಡುವುದನ್ನೇ ನೋಡುವಂತಾಗಿದೆ. ಹೀಗಾಗಿ ವಿಧಾನಸೌಧ ಖಾಲಿ ಮಾಡಿ ಎಂಬ ಘೋಷಣೆಯೊಂದಿಗೆ ಹೋರಾಟ ನಡೆಸಲು ನಿರ್ಧರಿಸಲಾಗಿದೆ ಎಂದರು.
ರಾಜ್ಯ ರೈತ ಸಂಘ ಪ್ರಸಕ್ತ ವರ್ಷದಿಂದ ಸಾಕಷ್ಟು ಹೋರಾಟಗಳನ್ನು ರೂಪಿಸುತ್ತಿದೆ. ಜು.21ರಂದು ರೈತ ಬಂಡಾಯ ಹೋರಾಟದ ಹುತಾತ್ಮ ರೈತರ ಹೆಸರಿನಲ್ಲಿ ಬರಮುಕ್ತ ಕರ್ನಾಟಕ ಆಂದೋಲನ ಶುರು ಮಾಡಲಾಗುತ್ತಿದೆ. ಪ್ರತಿ ಜಿಲ್ಲೆಯಲ್ಲಿ 100 ಜನರನ್ನು ತಯಾರು ಮಾಡಿ ನಮ್ಮ ಕಾರ್ಯಕ್ರಮಗಳ ಅನುಷ್ಠಾನಕ್ಕೆ ಮುಂದಾಗುವುದಾಗಿ ತಿಳಿಸಿದರು.
ಬರ ನಿರ್ವಹಣೆಗೆ ಸರ್ಕಾರಕ್ಕೆ ಏನು ಸಲಹೆ ಸೂಚನೆ ನೀಡಬೇಕು ಎಂಬ ಬಗ್ಗೆ ಕರಡು ಸಮಿತಿ ರಚಿಸಲಾಗುವುದು. ಶಿರಾದ ಮರಡಿಗುಡ್ಡದಲ್ಲಿ ಜೂ.29ಕ್ಕೆ 1 ಸಾವಿರ ಸಸಿ ನೆಡಲಾಗುವುದು. 30ಕ್ಕೆ ಚಿತ್ರದುರ್ಗದಲ್ಲಿ ತುಂಗಾ ಕಣಿವೆಯ ವ್ಯಾಪ್ತಿಯಲ್ಲಿ ಮಳೆ ಕೊಯ್ಲು ಕಾರ್ಯಕ್ರಮ ಹಮ್ಮಿಕೊಳ್ಳಲಾಗುವುದು. ಕೆರೆ ಒತ್ತುವರಿ ತೆರವು ಮಾಡುವುದು, ಮರಳು ದಂಧೆಗೆ ಕಡಿವಾಣ ಹಾಕುವಂಥ ಕೆಲಸಗಳನ್ನು ಮಾಡಲಾಗುವುದು. ಈ ನಿಟ್ಟಿನಲ್ಲಿ ನಮ್ಮ ಸಂಘದ ಸದಸ್ಯರಿಗೆ ಕಟ್ಟುನಿಟ್ಟಿನ ಸಂದೇಶ ನೀಡಿದ್ದು, ರೈತ ಸಂಘದ ಸದಸ್ಯರು ಕೆರೆ ಒತ್ತುವರಿ ಮಾಡಿದ್ದರೆ ತಕ್ಷಣವೇ ತೆರವು ಮಾಡಬೇಕು. ಮರಳು ದಂಧೆ ನಡೆಸುತ್ತಿದ್ದರೆ ಕೂಡಲೇ ಕೈಬಿಡುವಂತೆ ಒತ್ತಾಯಿಸಿರುವುದಾಗಿ ತಿಳಿಸಿದರು.
ಭೂ ಸ್ವಾಧೀನ ಮಸೂದೆ ಪ್ರತಿಯನ್ನು ಸುಡುವ ಮೂಲಕ ಆರಂಭದಲ್ಲಿ ಹೋರಾಟಕ್ಕೆ ಚಾಲನೆ ನೀಡಿದ್ದೇ ನಮ್ಮ ಸಂಘ. ಆದರೆ, ಈಗ ಬೇರೆ ಸಂಘಟನೆಯವರು ಹೋರಾಟ ನಡೆಸಿರುವುದಕ್ಕೆ ನಾವು ಬೆಂಬಲ ನೀಡಲಿಲ್ಲ. ಆದರೆ, ವಿರೋಧಿಸಿಲ್ಲ. ನಮ್ಮ ಸಂಘದಲ್ಲಿ ಸಣ್ಣಪುಟ್ಟ ಭಿನ್ನಾಭಿಪ್ರಾಯಗಳು ಇತ್ತು. ಈಗ ಎಲ್ಲ ಬಗೆ ಹರಿದಿದೆ ಎಂದು ತಿಳಿಸಿದರು.
ರಾಜ್ಯ ಗೌರವಾಧ್ಯಕ್ಷ ಚಾಮರಸ ಮಾಲಿಪಾಟೀಲ, ಜಿ.ಟಿ. ರಾಮಸ್ವಾಮಿ, ಗೋಪಾಲ, ರಾಮು ಚನ್ನಪಟ್ಟಣ ಇದ್ದರು.