Advertisement

ಪರಿಹಾರಕ್ಕಾಗಿ ಡಿಸಿ ವಿರುದ್ಧ ರೈತರ ಹಾರಾಟ

11:23 AM Aug 24, 2019 | Naveen |

ರಾಯಚೂರು: ನ್ಯಾಯೋಚಿತ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಪ್ರತಿಭಟನೆ ನಡೆಸಿದ ರೈತರ ಮನವಿ ಆಲಿಸುವಲ್ಲಿ ಅಸಡ್ಡೆ ತೋರಿದ ಜಿಲ್ಲಾಧಿಕಾರಿ ಬಿ.ಶರತ್‌ ನಡೆ ಖಂಡಿಸಿ ಪ್ರತಿಭಟನಾಕಾರರು ಡಿಸಿ ಕಚೇರಿಗೇ ನುಗ್ಗಲೆತ್ನಿಸಿದ ಘಟನೆ ಶುಕ್ರವಾರ ನಡೆಯಿತು. ಇದರಿಂದ ಕೆಲಕಾಲ ಉದ್ವಿಗ್ನ ಪರಿಸ್ಥಿತಿ ನಿರ್ಮಾಣವಾಗಿ ಪೊಲೀಸರು ಹೋರಾಟಗಾರರನ್ನು ಬಂಧಿಸಿ ನಂತರ ಬಿಡುಗಡೆ ಮಾಡಿದರು.

Advertisement

ಫಸಲ್ಬಿಮಾದಡಿ ಹಣ ಪಾವತಿಸಿದ ಅನೇಕ ರೈತರಲ್ಲಿ ಕೆಲವರಿಗೆ ಮಾತ್ರ ಪರಿಹಾರ ಬಂದಿದೆ. ಇನ್ನೂ ಅನೇಕರಿಗೆ ಬಂದಿಲ್ಲ. ಕೂಡಲೇ ಪಾವತಿಸಬೇಕು ಎಂಬ ಬೇಡಿಕೆಯೊಡ್ಡಿ ನಗರದ ಡಿಸಿ ಕಚೇರಿ ಎದುರಿನ ಉದ್ಯಾನದಲ್ಲಿ ಸ್ವರಾಜ್‌ ಇಂಡಿಯಾ ಪಕ್ಷ ಮತ್ತು ಕರ್ನಾಟಕ ರಾಜ್ಯ ರೈತರ ಸಂಘ ಹಾಗೂ ಹಸಿರು ಸೇನೆ ನೇತೃತ್ವದಲ್ಲಿ ನೂರಾರು ರೈತರು ಪ್ರತಿಭಟನೆ ನಡೆಸಿದರು. ಸತತ ಎರಡು ಗಂಟೆ ಹೋರಾಟ ಮಾಡಿದರೂ ಜಿಲ್ಲಾಧಿಕಾರಿ ಸ್ಥಳಕ್ಕೆ ಭೇಟಿ ನೀಡಲಿಲ್ಲ. ಇದರಿಂದ ಕೋಪಗೊಂಡ ಪ್ರತಿಭಟನಾನಿರತರು ಡಿಸಿ ಕಚೇರಿ ಗೇಟ್ ತಳ್ಳಿ ಒಳಗೆ ನುಗ್ಗಿದರು. ಇನ್ನೇನು ಡಿಸಿ ಕಚೇರಿಗೂ ನುಗ್ಗುವಷ್ಟರಲ್ಲಿ ಪೊಲೀಸರು ಅಡ್ಡಗಟ್ಟಿ ತಡೆದರು.

ಈ ವೇಳೆ ಆಕ್ರೋಶ ಹೊರಹಾಕಿದ ಪ್ರತಿಭಟನಾಕಾರರು, ಯಾವುದೇ ಕಾರಣಕ್ಕೂ ಖುದ್ದು ಡಿಸಿಯೇ ಬಂದು ಮನವಿ ಸ್ವೀಕರಿಸಬೇಕು ಎಂದು ಪಟ್ಟು ಹಿಡಿದರು. ಆದರೆ ಇದಕ್ಕೆ ಪ್ರತಿಪಟ್ಟು ಹಿಡಿದಂತೆ ಕಚೇರಿ ಒಳಗಿದ್ದರೂ ಜಿಲ್ಲಾಧಿಕಾರಿ ಹೊರಗೆ ಬಾರದಿರುವುದು ಪ್ರತಿಭಟನಾಕಾರರನ್ನು ಮತ್ತಷ್ಟು ಕೆಣಕಿತು.

ಈ ವೇಳೆ ಮಾತನಾಡಿದ ಸಂಘದ ರಾಜ್ಯ ಗೌರವಾಧ್ಯಕ್ಷ ಚಾಮರಸ ಮಾಲಿಪಾಟೀಲ್, ರೈತರಿಗೆ ಗೌರವ ನೀಡದ ಇಂತಹ ಜಿಲ್ಲಾಧಿಕಾರಿ ನಮಗೆ ಅಗತ್ಯವಿಲ್ಲ. ನಾವೇನು ಭಿಕ್ಷೆಗೆ ಬಂದಿಲ್ಲ. ನಾವು ಪಾವತಿಸಿದ ಹಣಕ್ಕೆ ಪರಿಹಾರ ಕೇಳುತ್ತಿದ್ದೇವೆ. ಎಷ್ಟೋ ಡಿಸಿಗಳನ್ನು ನೋಡಿದ್ದೇವೆ. ಆದರೆ ಇಂತವರನ್ನು ಕಂಡಿಲ್ಲ ಎಂದು ಖಾರವಾಗಿ ಪ್ರತಿಕ್ರಿಯಿಸಿದರು. ಇಂಥ ತಾತ್ಸಾರ ಧೋರಣೆ ಮುಂದುವರೆಸಿದಲ್ಲಿ ಡಿಸಿಯನ್ನು ಜಿಲ್ಲೆಯಿಂದ ಕಳುಹಿಸುವವರೆಗೂ ಹೋರಾಟ ಮಾಡಬೇಕಾಗುತ್ತದೆ ಎಂದು ಎಚ್ಚರಿಸಿದರು. ಈ ವೇಳೆ ಪ್ರತಿಭಟನಾಕಾರರ ಆಕ್ರೋಶ ಹೆಚ್ಚಾಗುತ್ತಿರುವುದನ್ನು ಗಮನಿಸಿದ ಪೊಲೀಸರು ರೈತರನ್ನು ಬಂಧಿಸಿ ವ್ಯಾನ್‌ ಹತ್ತಿಸಿದರು. ಬಳಿಕ ಬಿಡುಗಡೆ ಮಾಡಲಾಯಿತು. ಈ ವೇಳೆ ದೇವದುರ್ಗ ತಾಲೂಕಿನ ರೈತ ಮುಖಂಡ ಹಾಜಿ ಎನ್ನುವವರು ಅಸ್ವಸ್ಥರಾದ ಘಟನೆಯೂ ಜರುಗಿತು. ಬಳಿಕ ತುಸು ಚೇತರಿಸಿಕೊಂಡರು.

ಮುಖಂಡರಾದ ಅಮರಣ್ಣ ಗುಡಿಹಾಳ, ಜಿಲ್ಲಾಧ್ಯಕ್ಷ ಲಕ್ಷ ್ಮಣಗೌಡ ಕಡಗಂದೊಡ್ಡಿ, ಜಯಪ್ಪಸ್ವಾಮಿ, ದೊಡ್ಡ ಬಸವರಾಜ, ವಿ.ಭೀಮೇಶ್ವರ ರಾವ್‌, ಹುಲಿಗೆಪ್ಪ ಜಾಲಿಬೆಂಚಿ, ವೀರನಗೌಡ, ನರಸಪ್ಪ ಹೊಕ್ರಾಣಿ, ಬೂದೆಯ್ಯ ಸ್ವಾಮಿ, ದೇವರಾಜ ನಾಯಕ ಇತರರಿದ್ದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next