Advertisement

ಬಡ ಪಾಲಕರ ಆಸೆಗೆ ತಣ್ಣೀರೆರಚಿದ ಸರ್ಕಾರ

11:00 AM May 16, 2019 | Team Udayavani |

ರಾಯಚೂರು: ಬಡ ಮಕ್ಕಳಿಗೆ ಕಡ್ಡಾಯ ಮತ್ತು ಗುಣಮಟ್ಟದ ಶಿಕ್ಷಣ ಸಿಗಬೇಕು ಎಂಬ ಉದ್ದೇಶದಿಂದ ಜಾರಿಗೊಳಿಸಿದ್ದ ಶಿಕ್ಷಣ ಹಕ್ಕು ಕಾಯ್ದೆ (ಆರ್‌ಟಿಇ) ಸ್ವರೂಪ ಬದಲಿಸಿರುವುದು ಬಡ ಪಾಲಕರನ್ನು ಕಂಗೆಡಿಸಿದೆ. ಈ ಬಾರಿ ಸರ್ಕಾರ ಆರ್‌ಟಿಇ ವ್ಯಾಪ್ತಿಯಿಂದ ಅನುದಾನ ರಹಿತ ಶಾಲೆಗಳನ್ನು ಕೈ ಬಿಟ್ಟಿರುವುದು ಯೋಜನೆ ಉದ್ದೇಶವೇ ಮಂಕಾದಂತಾಗಿದೆ.

Advertisement

ಕಳೆದ ಬಾರಿ ಜಿಲ್ಲೆಯಲ್ಲಿ ಅನುದಾನ ರಹಿತ, ಸಹಿತ ಹಾಗೂ ಸರ್ಕಾರಿ ಶಾಲೆಗಳಲ್ಲಿ ಆರ್‌ಟಿಇ ಅಡಿ 4,561 ವಿದ್ಯಾರ್ಥಿಗಳಿಗೆ ಸೀಟು ಸಿಕ್ಕಿತ್ತು. ಆದರೆ, ಈ ಬಾರಿ ಅನುದಾನ ಸಹಿತ ಮತ್ತು ಸರ್ಕಾರಿ ಶಾಲೆಗಳಲ್ಲಿ ಮಾತ್ರ ಆರ್‌ಟಿಇ ಸೀಟು ಸಿಗಲಿದ್ದು, ಕೇವಲ 410 ಸೀಟುಗಳು ಮಾತ್ರ ಲಭ್ಯವಿದೆ. ಇದರಿಂದ ಬಡವರು ತಮ್ಮ ಮಕ್ಕಳನ್ನು ಖಾಸಗಿ ಶಾಲೆಗಳಲ್ಲಿ ಓದಿಸಬೇಕು ಎಂಬ ಮಹದಾಸೆಗೆ ತಣ್ಣೀರು ಎರಚಿದಂತಾಗಿದೆ.

ಜಿಲ್ಲೆಯಲ್ಲಿ 1,458 ಸರ್ಕಾರಿ ಪ್ರಾಥಮಿಕ ಶಾಲೆಗಳಿದ್ದರೆ, 56 ಅನುದಾನ ಸಹಿತ ಹಾಗೂ 570 ಖಾಸಗಿ ಶಾಲೆಗಳಿವೆ. ಕಳೆದ ಬಾರಿ 5,401 ಸೀಟು ನೀಡಲಾಗಿತ್ತು. ಅದರಲ್ಲಿ 5,305 ಸೀಟುಗಳನ್ನು ಹಂಚಿಕೆ ಮಾಡಿದ್ದರೆ, 4,561 ವಿದ್ಯಾರ್ಥಿಗಳಿಗೆ ಆರ್‌ಟಿಇ ಅಡಿ ಸೀಟು ಸಿಕ್ಕಿತ್ತು. ಆದರೆ, ಈ ಬಾರಿ ಜಿಲ್ಲೆಗೆ ಕೇವಲ 410 ಸೀಟುಗಳು ಮಾತ್ರ ಆರ್‌ಟಿಇ ಅಡಿ ಲಭ್ಯವಿದೆ. ಅದರಲ್ಲಿ 220 ಹಂಚಿಕೆ ಮಾಡಿದ್ದು, ಮೊದಲನೇ ಹಂತದಲ್ಲಿ 50 ಸೀಟುಗಳು ಮಾತ್ರ ಭರ್ತಿಯಾಗಿವೆ. ಎರಡನೇ ಮತ್ತು ಮೂರನೇ ಹಂತದ ಆಯ್ಕೆ ಪ್ರಕ್ರಿಯೆ ಬಾಕಿ ಇದೆ. ಈ ಬಾರಿ ಜಿಲ್ಲೆಯ ಯಾವ ತಾಲೂಕಿಗೂ ಆರ್‌ಟಿಇ ಸೀಟುಗಳ ಸಂಖ್ಯೆ ಮೂರಂಕಿ ದಾಟಿಲ್ಲ.

524 ಅರ್ಜಿ ಸಲ್ಲಿಕೆ: ಅಚ್ಚರಿ ಎಂದರೆ ಈ ಬಾರಿ ಆರ್‌ಟಿಇ ಅಡಿ ಸಲ್ಲಿಕೆಯಾದ ಅರ್ಜಿಗಳ ಸಂಖ್ಯೆಯೂ ಸಾಕಷ್ಟು ಕಡಿಮೆಯಾಗಿದೆ. ಜಿಲ್ಲೆಯಲ್ಲಿ ಈವರೆಗೆ 524 ಅರ್ಜಿಗಳು ಮಾತ್ರ ಸಲ್ಲಿಕೆಯಾಗಿವೆ. ರಾಯಚೂರು ತಾಲೂಕಿನಲ್ಲಿ 371, ದೇವದುರ್ಗ 23, ಲಿಂಗಸುಗೂರು 63, ಸಿಂಧನೂರು 53 ಹಾಗೂ ಮಾನ್ವಿ ತಾಲೂಕಿನಲ್ಲಿ ಕೇವಲ 13 ಅರ್ಜಿಗಳು ಸಲ್ಲಿಕೆಯಾಗಿವೆ. ಅರ್ಜಿ ಸಲ್ಲಿಸುವಾಗ ಪಾಲಕರು ತಮ್ಮ ವಾರ್ಡ್‌ಗಳಿಗೆ ಸಮೀಪದ ಖಾಸಗಿ ಶಾಲೆಗಳನ್ನು ಹುಡುಕಿದರೆ ಆನ್‌ಲೈನ್‌ನಲ್ಲಿ ಅದು ತೋರಿಸಿಲ್ಲ. ಹೀಗಾಗಿ ಅನುದಾನಿತ ಶಾಲೆಗಳಿಗೆ ಮಾತ್ರ ಅರ್ಜಿ ಸಲ್ಲಿಸುವಂತಾಗಿದೆ.

ಖಾಸಗಿ ಶಾಲೆಗಳ ದಿಲ್ಖುಷ್‌: ಸರ್ಕಾರದ ಈ ನಿರ್ಣಯದ ಹಿಂದೆ ಶಿಕ್ಷಣ ಮಾಫಿಯಾದ ಕೈವಾಡವಿದೆ ಎಂಬ ಆರೋಪ ಒಂದೆಡೆಯಾದರೆ ಖಾಸಗಿ ಶಾಲೆಗಳಿಗೆ ಮಾತ್ರ ಖುಷಿಯಾಗಿದೆ. ಜಿಲ್ಲೆಯಲ್ಲಿ 570 ಖಾಸಗಿ ಶಾಲೆಗಳಿದ್ದು, ಕಳೆದ ವರ್ಷ 434 ಶಾಲೆಗಳಲ್ಲಿ ಆರ್‌ಟಿಇ ಅಡಿ ಸೀಟು ಹಂಚಿಕೆ ಮಾಡಲಾಗಿತ್ತು. ಲಕ್ಷಾಂತರ ರೂ. ಡೊನೇಷನ್‌ ಪಡೆದು ಶಿಕ್ಷಣ ನೀಡುವ ಖಾಸಗಿ ಶಾಲೆಗಳಿಗೆ ಬಡ ಮಕ್ಕಳಿಗೆ ಸರ್ಕಾರ ನಿಗದಿ ಮಾಡಿದ ಕಡಿಮೆ ದರದಲ್ಲಿ ಶಿಕ್ಷಣ ನೀಡುವುದು ನುಂಗಲಾರದ ತುತ್ತಾಗಿ ಪರಿಣಮಿಸಿತ್ತು. ಈಗ ಸರ್ಕಾರವೇ ಖಾಸಗಿ ಶಾಲೆಗಳಿಗೆ ಆರ್‌ಟಿಇ ಸಮಸ್ಯೆ ತಪ್ಪಿಸಿರುವುದು ವರವಾಗಿ ಪರಿಣಮಿಸಿದೆ.

Advertisement

ಪಾಲಕರ ಆಕ್ಷೇಪ: ಆರ್‌ಟಿಇ ಶಿಕ್ಷಣ ವಂಚಿತ ಮಕ್ಕಳ ಪಾಲಕರ ಸಂಘ ಈ ಬಗ್ಗೆ ಆಕ್ಷೇಪ ಎತ್ತಿದೆ. ಅಲ್ಲದೇ, ಈಗಾಗಲೇ ಈ ಕುರಿತ ಪ್ರಕರಣ ನ್ಯಾಯಾಲಯದ ಅಂಗಳದಲ್ಲಿದೆ. ಏತನ್ಮಧ್ಯೆ ಬಡ ಪಾಲಕರು ನಮ್ಮ ಮಕ್ಕಳಿಗೆ ಖಾಸಗಿ ಶಾಲೆಗಳಲ್ಲಿ ಆರ್‌ಟಿಇ ಶಿಕ್ಷಣ ನೀಡಬೇಕು ಎಂಬ ಹಕ್ಕೊತ್ತಾಯ ಮಾಡುತ್ತಲೇ ಇದ್ದಾರೆ. ಇಲಾಖೆ ಅಧಿಕಾರಿಗಳು ಮಾತ್ರ ಸರ್ಕಾರಿ ಶಾಲೆಗಳಲ್ಲೂ ಆರ್‌ಟಿಇ ಅಡಿ ಸೀಟು ಪಡೆಯಬಹುದು ಎಂಬ ಸಮಜಾಯಿಷಿ ನೀಡುತ್ತಿದ್ದಾರೆ. ಆದರೆ, ಗುಣಮಟ್ಟದ ಶಿಕ್ಷಣ ಸಿಗುತ್ತಿಲ್ಲ ಎಂಬ ಕಾರಣಕ್ಕೆ ನಾವು ಖಾಸಗಿ ಶಾಲೆಗಳತ್ತ ಮುಖ ಮಾಡಿರುವುದು ಎನ್ನುವುದು ಪಾಲಕರ ವಾದ.

ಕೋಟ್ಯಂತರ ರೂ. ಅನುದಾನ ಬಾಕಿ: ಸರ್ಕಾರ ಖಾಸಗಿ ಶಾಲೆಗಳಿಗೆ ಪ್ರತಿ ವರ್ಷ ಪಾವತಿಸುವ ಅನುದಾನ ಜಿಲ್ಲೆಯ ಮಟ್ಟಿಗೆ ಇನ್ನೂ ಬಾಕಿ ಎನ್ನಲಾಗುತ್ತಿದೆ. ಈಗ ಅಂದಾಜು 8 ಕೋಟಿ ರೂ. ಪಾವತಿಸಲು ಇಲಾಖೆಯಿಂದ ಖಜಾನೆಗೆ ಪತ್ರ ಬರೆಯಲಾಗಿದೆ. ಇನ್ನೂ ಅಂದಾಜು 8 ಕೋಟಿಗೂ ಅಧಿಕ ಪಾವತಿಸಬೇಕಿದೆ. ಇನ್ನು ಮುಂದೆ ಆರ್‌ಟಿಇ ಅಡಿ ಬಾರದ ಕಾರಣ ಖಾಸಗಿ ಶಾಲೆಗಳಿಗೆ ಪಾವತಿಸಬೇಕಾದ ಹಣ ಹಂತ ಹಂತವಾಗಿ ಕಡಿಮೆಗೊಳ್ಳಲಿದೆ ಎನ್ನುತ್ತಾರೆ ಇಲಾಖೆ ಅಧಿಕಾರಿಗಳು.

ಬಡ ಮಕ್ಕಳಿಗೂ ಗುಣಮಟ್ಟದ ಶಿಕ್ಷಣ ಉಚಿತವಾಗಿ ಸಿಗಬೇಕು ಎಂಬ ಕಾರಣಕ್ಕೆ ಆರ್‌ಟಿಇ ಜಾರಿಗೊಳಿಸಲಾಗಿತ್ತು. ಆದರೆ, ಈಗ ಖಾಸಗಿ ಶಾಲೆಗಳ ಒತ್ತಡಕ್ಕೆ ಮಣಿದು ಸರ್ಕಾರ ಕಾಯ್ದೆಯನ್ನೇ ಬದಲಿಸಿದೆ. ಶ್ರೀಮಂತರ ಮಕ್ಕಳು ಮಾತ್ರ ಖಾಸಗಿ ಶಾಲೆಗಳಲ್ಲಿ ಓದಬೇಕು ಎಂಬ ಪ್ರತ್ಯೇಕತೆಯನ್ನು ಸರ್ಕಾರವೇ ರೂಪಿಸಿದಂತಿದೆ. ಈಗಾಗಲೇ ಈ ವಿಚಾರ ನ್ಯಾಯಾಲಯದ ಮೆಟ್ಟಿಲೇರಿದೆ. ಮುಂಚಿನಂತೆ ಖಾಸಗಿ ಶಾಲೆಗಳಲ್ಲೂ ಬಡ ಮಕ್ಕಳಿಗೆ ಉಚಿತ ಶಿಕ್ಷಣ ಸಿಗುವಂತಾಗಬೇಕು.
ಡಾ| ರಜಾಕ್‌ ಉಸ್ತಾದ್‌,
ಶೈಕ್ಷಣಿಕ ಹೋರಾಟಗಾರ

ಈ ಬಾರಿ ಆರ್‌ಟಿಇ ಅಡಿ ಖಾಸಗಿ ಶಾಲೆಗಳನ್ನು ಕೈ ಬಿಟ್ಟಿದ್ದು, ಅನುದಾನಿತ ಮತ್ತು ಸರ್ಕಾರಿ ಶಾಲೆಗಳಲ್ಲಿ ಮಾತ್ರ ಅವಕಾಶವಿದೆ. ಸರ್ಕಾರದ ಆದೇಶದನ್ವಯ ಈಗಾಗಲೇ ದಾಖಲಾತಿ ಪ್ರಕ್ರಿಯೆ ನಡೆಯುತ್ತಿದೆ. ಆರ್‌ಟಿಇ ಸಂಖ್ಯೆಯನುಸಾರ ಪ್ರವೇಶಾವಕಾಶ ಇರಲಿದೆ.
ಬಿ.ಕೆ. ನಂದನೂರ,
ಡಿಡಿಪಿಐ ರಾಯಚೂರು

ಸಿದ್ಧಯ್ಯಸ್ವಾಮಿ ಕುಕನೂರು

Advertisement

Udayavani is now on Telegram. Click here to join our channel and stay updated with the latest news.

Next