ರಾಯಚೂರು: 1995ರ ನಂತರ ಆರಂಭವಾದ ಕನ್ನಡ ಶಾಲಾ ಕಾಲೇಜುಗಳನ್ನು ವೇತನಾನುದಾನಕ್ಕೆ ಒಳಪಡಿಸಬೇಕು, ಅನುದಾನಿತ ಶಾಲಾ ಕಾಲೇಜುಗಳ ಬೋಧಕರ ವಿವಿಧ ಬೇಡಿಕೆ ಈಡೇರಿಸುವಂತೆ ಆಗ್ರಹಿಸಿ ಖಾಸಗಿ ಶಿಕ್ಷಣ ಸಂಸ್ಥೆಗಳ ಆಡಳಿತ ಮಂಡಳಿ ಹಾಗೂ ನೌಕರರ ಹೋರಾಟ ಸಮನ್ವಯ ಸಮಿತಿ ಸದಸ್ಯರು ಶನಿವಾರ ಸಾಂಕೇತಿಕ ಧರಣಿ ನಡೆಸಿದರು.
ನಗರದ ಮಹಾತ್ಮ ಗಾಂಧಿ ವೃತ್ತದಿಂದ ಜಿಲ್ಲಾಧಿಕಾರಿ ಕಚೇರಿ ಎದುರಿನ ಉದ್ಯಾನವನದವರೆಗೆ ಪ್ರತಿಭಟನಾ ರ್ಯಾಲಿ ನಡೆಸಿ, ಬಳಿಕ ಎರಡು ಗಂಟೆಗಳ ಧರಣಿ ನಡೆಸಲಾಯಿತು. ಈ ವೇಳೆ ಜಿಲ್ಲಾಧಿಕಾರಿ ಮೂಲಕ ಮುಖ್ಯಮಂತ್ರಿಗೆ ಮನವಿ ಸಲ್ಲಿಸಿದರು. 1995ರ ನಂತರ ಶುರುವಾದ ಶಾಲಾ ಕಾಲೇಜುಗಳಲ್ಲಿ ದುಡಿಯುವ ಶಿಕ್ಷಕಗೆ ಕನಿಷ್ಠ ವೇತನ, ಸೌಲಭ್ಯಗಳೇ ಇಲ್ಲ. ಕಡಿಮೆ ವೇತನಕ್ಕೆ ಎರಡ್ಮೂರು ದಶಕಗಳಿಂದ ದುಡಿಯುತ್ತಿದ್ದು, ಅದರಲ್ಲಿ ಕೆಲವರು ನಿವೃತ್ತಿ ಅಂಚಿಗೆ ತಲುಪಿದ್ದಾರೆ. ಸರ್ಕಾರ ಇನ್ನಾದರೂ ಅನುದಾನ ಸೌಲಭ್ಯ ಕಲ್ಪಿಸಿದಲ್ಲಿ ಅವರಿಗೆ ಅನುಕೂಲವಾಗಲಿದೆ ಎಂದರು.
ಪಿಂಚಣಿ ಸೌಲಭ್ಯ ಕಲ್ಪಿಸಬೇಕು, ಜ್ಯೋತಿ ಸಂಜೀವಿನಿ ಯೋಜನೆ ವಿಸ್ತರಿಸಬೇಕು, ಕಾಲ್ಪನಿಕ ವೇತನ ವ್ಯವಸ್ಥೆ ಮಾಡಬೇಕು, ಬಡ್ತಿ ಜಾರಿಗೊಳಿಸಬೇಕು, ಅನುದಾನ ರಹಿತ ಕನ್ನಡ ಮಾಧ್ಯಮ ಹಾಗೂ ಪ್ರಾದೇಶಿಕ ಭಾಷಾ ಮಾಧ್ಯಮದ ಪ್ರಾಥಮಿಕ, ಪ್ರೌಢ ಶಾಲೆಗಳು ಹಾಗೂ ಪದವಿ ಪೂರ್ವ ಕಾಲೇಜುಗಳಿಗೆ ವೇತನಾನುದಾನ ವಿಸ್ತರಿಸಬೇಕು ಎಂದು ಒತ್ತಾಯಿಸಿದರು.
ಮಾನ್ವಿ ಕಲ್ಮಠದ ಶ್ರೀ ಡಾ| ಶಿವಮೂರ್ತಿ ಶಿವಾಚಾರ್ಯ ಸ್ವಾಮೀಜಿ, ನೀಲಗಲ್‌ನ ಶ್ರೀ ಡಾ| ಪಂಚಾಕ್ಷರ ಶಿವಾಚಾರ್ಯ ಸ್ವಾಮೀಜಿ, ಕಿಲ್ಲೆ ಬೃಹನ್ಮಠದ ಶ್ರೀ ಶಾಂತಮಲ್ಲ ಶಿವಾಚಾರ್ಯ ಸ್ವಾಮೀಜಿ, ವೀರಗೋಟದ ಶ್ರೀ ಆದಿ ಮೌನಲಿಂಗೇಶ್ವರದ ಶ್ರೀ ಅಡವಿಲಿಂಗ ಮಹಾರಾಜರು, ಗಬ್ಬೂರಿನ ಗುರುವಿನ ನಾಗಯ್ಯ ತಾತನವರು ಹೋರಾಟಕ್ಕೆ ಬೆಂಬಲಿಸಿ ಪಾಲ್ಗೊಂಡಿದ್ದರು.
ರಾಜ್ಯ ಸಂಘಟನಾ ಕಾರ್ಯದರ್ಶಿ ಶಿವರಾಜ ಅಕ್ಕಿಕಲ್, ಸಮನ್ವಯ ಸಮಿತಿ ಜಿಲ್ಲಾ ಉಪಾಧ್ಯಕ್ಷ ಸಂಗಯ್ಯಸ್ವಾಮಿ ಸೊಪ್ಪಿಮಠ, ಸದಸ್ಯರಾದ ಪ್ರಕಾಶ ಖೇಣೆದ, ಬಸವರಾಜಪ್ಪ ವಾರದ, ಜಗನ್ನಾಥ ಪಾಟೀಲ, ಜಿ.ನಾಗರಾಜ, ಮಲ್ಲನಗೌಡ ಪಾಟೀಲ, ಮಂಜುನಾಥ, ಜಾತಪ್ಪ, ಹಂಪಣ್ಣ ಪಲ್ಲೇದ, ರಾಜಾ ಶ್ರೀನಿವಾಸ, ರವಿಕುಮಾರ ಗೋನಾಳ, ವೆಂಕಟೇಶ ಯಾದವ, ಗಿರೀಶ ಆಚಾರ್ಯ ಸೇರಿ ಅನೇಕರು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.