ರಾಯಚೂರು: ಸೇವೆಯಿಂದ ಕೈ ಬಿಟ್ಟಿರುವ ಬಿಎಸ್ಸೆನ್ನೆಲ್ನ 41 ಕಾರ್ಮಿಕರನ್ನು ಸೇವೆಗೆ ಸೇರಿಸಿಕೊಳ್ಳಬೇಕು ಎಂಬುದು ಸೇರಿ ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಶನಿವಾರ ರಾಜ್ಯ ಬಿಎಸ್ಸೆನ್ನೆಲ್ ಕ್ಯಾಶುವೆಲ್ ಕಾಂಟ್ರಾಕ್ಟ್ ಕಾರ್ಮಿಕರ ಒಕ್ಕೂಟದ ಸದಸ್ಯರು ಪ್ರತಿಭಟನೆ ನಡೆಸಿ ಜಿಲ್ಲಾಧಿಕಾರಿಗೆ ಮನವಿ ಸಲ್ಲಿಸಿದರು.
ರಾಯಚೂರು-ಕೊಪ್ಪಳ ವ್ಯಾಪ್ತಿಯ ಬಿಎಸ್ಸೆನ್ನೆಲ್ ಸಂಸ್ಥೆಯಲ್ಲಿ 15 ವರ್ಷದಿಂದಲೂ ಗುತ್ತಿಗೆ ಕಾರ್ಮಿಕರಾಗಿ ಕೆಲಸ ಮಾಡುತ್ತಿದ್ದಾರೆ. ಆದರೆ, ರಾಯಚೂರು ವಿಭಾಗದ 41 ಕಾರ್ಮಿಕರನ್ನು ಸೂಕ್ತ ಕಾರಣ ನೀಡದೆ, ನೋಟಿಸ್ ನೀಡದೆ ಏಕಾಏಕಿ ಕೆಲಸದಿಂದ ತೆಗೆದಿರುವುದು ಖಂಡನೀಯ ಎಂದು ದೂರಿದರು. ಈ ಕಾರ್ಮಿಕರಿಗೆ ಇನ್ನೂ ಏಳು ತಿಂಗಳ ವೇತನ ಬಾಕಿಯಿದ್ದು, ಅದನ್ನು ಪಾವತಿಸಿಲ್ಲ. ಕೆಲಸದಿಂದ ತೆಗೆಯುವ ಮೂರು ತಿಂಗಳ ಮುಂಚೆ ಕನಿಷ್ಠ ಸೂಚನೆ ಕೂಡ ನೀಡಿಲ್ಲ. ಇನ್ನೂ ಗುತ್ತಿಗೆ ಕಾರ್ಮಿಕರ ಕಾಯ್ದೆ ಪ್ರಕಾರ ಗುರುತಿನ ಚೀಟಿ, ವೇತನ ಪಾವತಿ ಚೀಟಿ, ಪಿಎಫ್ ವಾರ್ಷಿಕ ವರದಿ ಪಟ್ಟಿ ನೀಡಬೇಕು. ಪ್ರತಿ ತಿಂಗಳು ಏಳನೇ ತಾರೀಖೀನೊಳಗೆ ವೇತನ ಪಾವತಿಸಬೇಕು ಎಂದು ಒತ್ತಾಯಿಸಿದರು.
ಈ ಕಾರ್ಮಿಕರಿಗೆ ಗುತ್ತಿಗೆ ಕಾರ್ಮಿಕ ಕಾಯ್ದೆಯಡಿ ಯಾವುದೇ ಕನಿಷ್ಠ ಸೌಲಭ್ಯ ಕಲ್ಪಿಸಿಲ್ಲ. ಕಾರ್ಮಿಕರ ಸಮಸ್ಯೆಗಳ ಕುರಿತು ಅನೇಕ ಬಾರಿ ಸಂಬಂಧಿಸಿದ ಅಧಿಕಾರಿಗಳಿಗೆ ಮನವಿ ಸಲ್ಲಿಸಿದರೂ ಪ್ರಯೋಜನವಾಗಿಲ್ಲ. ಆದರೆ, ಈವರೆಗೂ ಯಾವುದೇ ಕ್ರಮ ಕೈಗೊಂಡಿಲ್ಲ. ಕಳೆದ 7 ತಿಂಗಳಿಂದಲೂ ಗುತ್ತಿಗೆ ಕಾರ್ಮಿಕರಿಗೆ ವೇತನ, ಬೋನಸ್, ಕನಿಷ್ಠ ಕೂಲಿ, ಭವಿಷ್ಯನಿಧಿ ವಾರ್ಷಿಕ ವರದಿ ಪತ್ರಗಳು ಹಾಗೂ ಗುರುತಿನ ಚೀಟಿ ನೀಡಿಲ್ಲ ಎಂದು ದೂರಿದರು.
ಬೆಂಗಳೂರಿನ ಹೈಕೋರ್ಟ್ ಮೈಸೂರು ಬಿಎಸ್‌ಎನ್‌ಎಲ್ ಗುತ್ತಿಗೆ ಕಾರ್ಮಿಕರನ್ನು ಪುನರ್ ನೇಮಿಸಿಕೊಳ್ಳುವಂತೆ ಆದೇಶಿಸಿದೆ. ಈ ಆದೇಶದ ಪ್ರತಿಯನ್ನು ಮುಖ್ಯಪ್ರಬಂಧಕರಿಗೆ ತಲುಪಿಸಲಾಗಿದೆ. ನಮ್ಮ ಬೇಡಿಕೆಗಳನ್ನು ಶೀಘ್ರದಲ್ಲಿ ಈಡೇರಿಸದಿದ್ದರೆ ಹೋರಾಟ ಅನಿವಾರ್ಯವಾಗಲಿದೆ ಎಂದರು.
ಸಂಘದ ಗೌರವಾಧ್ಯಕ್ಷ ಶೇಕ್ಷಾ ಖಾದ್ರಿ, ಅಧ್ಯಕ್ಷ ವಿಠuಲ, ಸದಸ್ಯರಾದ ಧಿರೇಂದ್ರ, ಆರ್.ವೆಂಕಟೇಶ, ಪ್ರದೀಪ, ಸಿಐಟಿಯು ಕಾರ್ಯದರ್ಶಿ ಡಿ.ಎಸ್ ಶರಣಬಸವ, ಸೈಯ್ಯದ್ ಹಾಜಿ, ಮಹ್ಮದ್ ಹನೀಫ್, ಮುತ್ತಯ್ಯ, ವಿಜಯ, ನಾಗರಾಜ ವೆಂಕಟೇಶ, ಎಂ.ವೀರೇಶ, ಅಲ್ತಾಫ್ ಹುಸೇನ್ ಸೇರಿ ಇತರರು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.