ರಾಯಚೂರು: ಯಾವುದೇ ಪ್ರದೇಶ ಅಭಿವೃದ್ಧಿ ಸಾಧಿಸಬೇಕಾದರೆ ಅಲ್ಲಿನ ಶೈಕ್ಷಣಿಕ ಗುಣಮಟ್ಟ ಚೆನ್ನಾಗಿರಬೇಕು. ಹೈ-ಕ ಭಾಗ ಇಂದಿಗೂ ಹಿಂದುಳಿಯಲು ಶೈಕ್ಷಣಿಕ ಹಿನ್ನಡೆಯೇ ಕಾರಣವಾಗಿದ್ದು, ಖಾಸಗಿ ಶಾಲೆಗಳು ಸಮಸ್ಯೆ ನಿವಾರಣೆಗೆ ಶ್ರಮಿಸಲಿ ಎಂದು ಎಂಎಲ್ಸಿ ಎನ್.ಎಸ್.ಬೋಸರಾಜ್ ಹೇಳಿದರು.
ನಗರದ ಪಂಡಿತ್ ಸಿದ್ಧರಾಮ ಜಂಬಲದಿನ್ನಿ ರಂಗ ಮಂದಿರದಲ್ಲಿ ರವಿವಾರ ಆಯೋಜಿಸಲಾಗಿದ್ದ ಸಮಾರಂಭದಲ್ಲಿ ಕರ್ನಾಟಕ ಖಾಸಗಿ ಅನುದಾನ ರಹಿತ ಶಾಲಾ ಆಡಳಿತ ಮಂಡಳಿಗಳ ಒಕ್ಕೂಟದ ತಾಲೂಕು ಘಟಕಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.
ಸರ್ಕಾರಿ ಶಾಲೆಗಳ ಅಭಿವೃದ್ಧಿಗಾಗಿ ಸಾಕಷ್ಟು ಅನುದಾನ ಬಿಡುಗಡೆ ಮಾಡಿದರೂ ಖಾಸಗಿ ಶಿಕ್ಷಣ ಸಂಸ್ಥೆಗಳ ಜತೆ ಪೈಪೋಟಿ ನೀಡುವಲ್ಲಿ ಹಿಂದೆ ಬೀಳುತ್ತಿವೆ. ಆದರೆ, ಖಾಸಗಿ ಶಿಕ್ಷಣ ಸಂಸ್ಥೆಗಳು ಕೇವಲ ಹಣದ ಹಿಂದೆ ಹೋಗದೆ ಗುಣಮಟ್ಟದ ಶಿಕ್ಷಣ ನೀಡುವಲ್ಲಿ ಹೆಚ್ಚು ಶ್ರಮ ವಹಿಸಬೇಕು ಎಂದು ಹೇಳಿದರು.
ಈಗ ಶಿಕ್ಷಣ ಕ್ಷೇತ್ರಕ್ಕೆ ಮಠ ಮಾನ್ಯಗಳು ಕೂಡ ಸಾಕಷ್ಟು ಕೊಡುಗೆ ನೀಡುತ್ತಿರುವುದು ಶ್ಲಾಘನೀಯ. ಮೈಸೂರು ಭಾಗದಲ್ಲಿ ಕೆಲ ಮಠಗಳು ದೊಡ್ಡ ದೊಡ್ಡ ಶೈಕ್ಷಣಿಕ ಸಂಸ್ಥೆಗಳನ್ನು ನಡೆಸುತ್ತಿವೆ. ಜಿಲ್ಲೆಯಲ್ಲಿ 340ಕ್ಕೂ ಅಧಿಕ ಖಾಸಗಿ ಶಾಲೆಗಳಿರುವ ಮಾಹಿತಿ ಇದ್ದು, ಶೈಕ್ಷಣಿಕವಾಗಿ ಸಾಕಷ್ಟು ಕೊಡುಗೆ ನೀಡುತ್ತಿವೆ ಎಂದು ಹೇಳಿದರು.
ರಾಯಚೂರು ಪ್ರತ್ಯೇಕ ವಿಶ್ವವಿದ್ಯಾಲಯ ಸ್ಥಾಪನೆಗೆ ಸಚಿವ ಸಂಪುಟದ ಸಭೆಯಲ್ಲಿ ಅನುಮೋದನೆ ಸಿಕ್ಕಿದೆ. ಆದರೆ, ಕಾರಣಾಂತರಗಳಿಂದ ರಾಜ್ಯಪಾಲರು ತಡೆಹಿಡಿದಿದ್ದಾರೆ. ಶೀಘ್ರದಲ್ಲಿ ವಿಶ್ವವಿದ್ಯಾಲಯ ಆರಂಭಿಸುವುದಾಗಿ ಹೇಳಿದರು.
ಕಿಲ್ಲೆ ಬೃಹನ್ಮಠದ ಶ್ರೀ ಶಾಂತಮಲ್ಲ ಶಿವಾಚಾರ್ಯ ಸ್ವಾಮೀಜಿ ಸಾನ್ನಿಧ್ಯ ವಹಿಸಿದ್ದರು. ಶಾಸಕ ಬಸನಗೌಡ ದದ್ದಲ್, ಜಿಪಂ ಅಧ್ಯಕ್ಷೆ ಆದಿಮನಿ ವೀರಲಕ್ಷ್ಮೀ, ನಗರಸಭೆ ಸದಸ್ಯ ಜಯಣ್ಣ, ಕೆ.ವಿ.ಧನಂಜಯ, ಎ. ಮರಿಯಪ್ಪ, ಎಸ್.ಎಲ್. ಕೇಶವರೆಡ್ಡಿ, ಡಿ.ಕೆ. ಮುರಳೀಧರ, ಚಂದ್ರಕಾಂತ, ಎಂ. ವೆಂಕಟೇಶ, ಷಣ್ಮುಖಪ್ಪ ಪಾಲ್ಗೊಂಡಿದ್ದರು.