ರಾಯಚೂರು: 1995ರ ನಂತರದ ಖಾಸಗಿ ಶಾಲಾ ಕಾಲೇಜುಗಳನ್ನು ಸರ್ಕಾರ ಅನುದಾನಕ್ಕೆ ಒಳಪಡಿಸುವಂತೆ ತಾಲೂಕು ಖಾಸಗಿ ಶಿಕ್ಷಣ ಸಂಸ್ಥೆಗಳ ಆಡಳಿತ ಮಂಡಳಿ ಮತ್ತು ನೌಕರರ ಸಮನ್ವಯ ಹೋರಾಟ ಸಮಿತಿ ಸದಸ್ಯರು ಒತ್ತಾಯಿಸಿದರು.
ಈ ಕುರಿತು ತಹಶೀಲ್ದಾರ್ ಮೂಲಕ ಮುಖ್ಯಮಂತ್ರಿಗೆ ಮನವಿ ಸಲ್ಲಿಸಿ, ಸರ್ಕಾರ ಕಾಲಕಾಲಕ್ಕೆ ಖಾಸಗಿ ಶಾಲಾ ಕಾಲೇಜುಗಳನ್ನು ಅನುದಾನಕ್ಕೆ ಒಳಪಡಿಸುತ್ತಲೇ ಬಂದಿದೆ.
ಕ್ರಮಬದ್ಧವಾಗಿ ಹಿಂದಿನ ಸರ್ಕಾರಗಳು ಈ ಕ್ರಮ ಕೈಗೊಂಡಿವೆ. ಸರ್ಕಾರದ ಸಹಭಾಗಿತ್ವದಲ್ಲಿ ಖಾಸಗಿ ಶಿಕ್ಷಣ ಸಂಸ್ಥೆಗಳು ಶಿಕ್ಷಣ ನೀಡುತ್ತಾ ಬಂದಿದ್ದು, ಸರ್ಕಾರ ಕೂಡ ಅನುದಾನ ನೀಡುತ್ತಿದೆ.
2006ರಲ್ಲಿದ್ದ ಮೈತ್ರಿ ಸರ್ಕಾರದ ಸಿಎಂ ಕುಮಾರಸ್ವಾಮಿ 1986ರಿಂದ 1993ರವರೆಗೆ ಖಾಸಗಿ ಶಾಲೆಗಳನ್ನು ಅನುದಾನಕ್ಕೆ ಒಳಪಡಿಸಿ ಆದೇಶಿಸಿದ್ದರು. ನಂತರ ಬಂದ ಬಿಜೆಪಿ ನೇತೃತ್ವದ ಸರ್ಕಾರ 1993ರಿಂದ 1995ರವರೆಗಿನ ಕನ್ನಡ ಮಾಧ್ಯಮ ಶಾಲಾ ಕಾಲೇಜುಗಳನ್ನು ಅನುದಾನಕ್ಕೆ ಒಳಪಡಿಸಿದ್ದರು ಎಂದು ತಿಳಿಸಿದರು.
ಆದರೆ, 2008ರ ನಂತರ ಅಧಿಕಾರಕ್ಕೆ ಬಂದ ಯಾವ ಸರ್ಕಾರ ಕೂಡ ಈ ಕ್ರಮ ಕೈಗೊಂಡಿಲ್ಲ. ಇದರಿಂದ 1995ರ ನಂತರ ಶುರುವಾದ ಅನುದಾನ ರಹಿತ ಕನ್ನಡ ಮಾಧ್ಯಮ ಶಾಲಾ ಕಾಲೇಜುಗಳು ಸಂಕಷ್ಟದಲ್ಲೇ ನಡೆಯುತ್ತಿವೆ. ಇಲ್ಲಿ ಓದುವ ಲಕ್ಷಾಂತರ ಬಡ ಮಕ್ಕಳಿಗೆ ಸರ್ಕಾರದ ಸೌಲಭ್ಯ ಸಿಗುತ್ತಿಲ್ಲ. ಶಿಕ್ಷಕರು, ಸಿಬ್ಬಂದಿ ಕೂಡ ಎರಡು ದಶಕಗಳಿಂದ ಕನಿಷ್ಠ ವೇತನಕ್ಕೆ ದುಡಿಯುತ್ತಿದ್ದಾರೆ.
ಇಂದಲ್ಲ ನಾಳೆ ಸರ್ಕಾರ ಅನುದಾನಕ್ಕೆ ಒಳಪಡಿಸಬಹುದು ಎಂಬ ಕಾರಣಕ್ಕೆ ವೇತನ ಕಡಿಮೆ
ಆದರೂ ಕೆಲಸ ಬಿಡದೆ ಮುಂದುವರಿಯುತ್ತಿದ್ದಾರೆ. ಹೀಗಾಗಿ ಅಂಥ ಶಾಲೆಗಳನ್ನು ಅನುದಾನಕ್ಕೆ ಒಳ ಪಡಿಸಿದಲ್ಲಿ ಎಲ್ಲ ಕಡೆ ಯಿಂದಲೂ ಅನುಕೂಲವಾಗಲಿದೆ ಎಂದರು.
ಸಮನ್ವಯ ಹೋರಾಟ ಸಮಿತಿ ತಾಲೂಕು ಸದಸ್ಯ ಸಂಗಯ್ಯ ಸೊಪ್ಪಿಮಠ, ಮಂಜುನಾಥ ಪುಂಡಿ, ಕಲ್ಲಪ್ಪ, ಮಹೇಶ, ರವಿ, ಮಲ್ಲಪ್ಪ ಸೇರಿ ಅನೇಕರು ಇದ್ದರು.