ರಾಯಚೂರು: ಕಾನೂನು ಸುವ್ಯವಸ್ಥೆ ಬಗ್ಗೆ ಸಂವಿಧಾನದಲ್ಲಿ ಸ್ಪಷ್ಟವಾಗಿ ಉಲ್ಲೇಖೀಸಿದ್ದು, ಪೊಲೀಸರು ಅದನ್ನೂ ಚಾಚೂ ತಪ್ಪದೆ ಪಾಲಿಸಬೇಕು. ನಮ್ಮ ಕರ್ತವ್ಯದ ಇತಿಮಿತಿಯೊಳಗೆ ಸಮಾಜಕ್ಕೆ ಉತ್ತಮ ಸೇವೆ ಒದಗಿಸಬೇಕು ಎಂದು ಬಳ್ಳಾರಿ ವಲಯ ಪೊಲೀಸ್ ಮಹಾನಿರೀಕ್ಷಕ ಎಂ.ನಂಜುಂಡಸ್ವಾಮಿ ತಿಳಿಸಿದರು.
ನಗರದ ಪೊಲೀಸ್ ಡಿಎಆರ್ ಕವಾಯತು ಮೈದಾನದಲ್ಲಿ ಮಂಗಳವಾರ ಏರ್ಪಡಿಸಿದ್ದ 10ನೇ ತಂಡದ ನಾಗರಿಕ ಮತ್ತು ಸಶಸ್ತ್ರ ಪೊಲೀಸ್ ಕಾನಸ್ಟೇಬಲ್ಗಳ ನಿರ್ಗಮನ ಪಥ ಸಂಚಲನ ಗೌರವ ವಂದನೆ ಸ್ವೀಕರಿಸಿ ಅವರು ಮಾತನಾಡಿದರು.
ನಾವೆಲ್ಲರೂ ಸಂವಿಧಾನದಡಿ ಕೆಲಸ ಮಾಡಬೇಕಿದೆ. ಅದರ ಆಶಯಗಳಿಗೆ ಧಕ್ಕೆ ಬಾರದಂತೆ ನಡೆದುಕೊಳ್ಳಬೇಕು. ಇಲಾಖೆಯಲ್ಲಿ ಹೊಸ ಹೊಸ ನಿಯಮಗಳು ಜಾರಿಗೊಳಿಸಲಾಗುತ್ತಿದೆ. ಕಾಲಕ್ಕೆತಕ್ಕಂತೆ ನಾವು ಕೂಡ ಹೊಂದಿಕೊಳ್ಳುವ ಅಗತ್ಯವಿದೆ. ಅಧಿಕಾರ ದುರ್ಬಳಕೆ ಮಾಡಿಕೊಳ್ಳದೆ ಸತ್ಯ, ನ್ಯಾಯದ ಪರ ಕೆಲಸ ಮಾಡಬೇಕು ಎಂದರು.
ಜನ ತಮಗೆ ತೊಂದರೆ ಆದಾಗ, ಅನ್ಯಾಯವಾದಾಗ ನಮ್ಮ ಬಳಿ ಬರುತ್ತಾರೆ. ಆಗ ಸತ್ಯಾಸತ್ಯತೆ ಅರಿತು ನ್ಯಾಯದ ಪರ ನಿಲ್ಲಬೇಕು. ಜನರ ನಂಬಿಕೆಗೆ ಚ್ಯುತಿ ಬಾರದಂತೆ ನಡೆದುಕೊಳ್ಳಬೇಕು. ನಮ್ಮ ನಡೆ, ನುಡಿಯಲ್ಲಿ ಪ್ರಾಮಾಣಿಕತೆ ಇರಬೇಕು. ಭಾರತದ ಏಳಿಗೆಗೆ, ಸಾರ್ವಜನಿಕರ ರಕ್ಷಣೆಗಾಗಿ ಶಕ್ತಿ ಬಳಸಲು ಮುಂದಾಗಬೇಕು ಎಂದರು.
ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ| ಸಿ.ಬಿ.ವೇದಮೂರ್ತಿ ಮಾತನಾಡಿ, ತರಬೇತಿ ಪಡೆದು ವೃತ್ತಿ ಆರಂಭಿಸುವವರು ಶಿಸ್ತು ಅಳವಡಿಸಿಕೊಳ್ಳಬೇಕು. ನೆಮ್ಮದಿಯ ಬದುಕಿಗಾಗಿ ಪ್ರಾಮಾಣಿಕವಾಗಿ ಕಾರ್ಯನಿರ್ವಹಿಸಬೇಕು. ವೃತ್ತಿಯ ಜತೆಗೆ ಕುಟುಂಬ ಸದಸ್ಯರಿಗೂ ಸಮಯ ಮೀಸಲಿಡಬೇಕು ಎಂದು ತಿಳಿಸಿದರು.
ಎಡಿಸಿ ಹರಿಬಾಬು ಎಂಟು ತಿಂಗಳಿಂದ ತರಬೇತಿ ನೀಡಿದ ಕುರಿತು ವರದಿ ಮಂಡಿಸಿದರು. ತರಬೇತಿ ಅವಧಿಯಲ್ಲಿ ವಿವಿಧ ಸ್ಪರ್ಧೆಗಳಲ್ಲಿ ಉತ್ತಮ ಪ್ರದರ್ಶನ ತೋರಿದ ಪ್ರಶಿಕ್ಷಣಾರ್ಥಿ ಕಾನ್ಸಟೇಬಲ್ಗಳಿಗೆ ವಲಯ ಮಹಾನಿರೀಕ್ಷಕ ಎಂ. ನಂಜುಂಡಸ್ವಾಮಿ ಬಹುಮಾನ ವಿತರಿಸಿದರು.
ವಿವಿಧ ಉಪನ್ಯಾಸಕರಿಗೂ ಬಹುಮಾನ, ನೆನಪಿನ ಕಾಣಿಕೆ ನೀಡಿ ಗೌರವಿಸಲಾಯಿತು. 157 ಜನರಿಂದ ನಿರ್ಗಮಿತ ಪಥ ಸಂಚಲನ ನಡೆಯಿತು. ಜಿಲ್ಲೆಯ ವಿವಿಧ ವೃತ್ತಗಳ ಹಿರಿಯ ಪೊಲೀಸ್ ಅಧಿಕಾರಿಗಳು, ಪಿಎಸ್‌ಐ, ಸಿಬ್ಬಂದಿ, ತರಬೇತಿ ಪಡೆದ ಪೊಲೀಸರ ಪಾಲಕರು, ಕುಟುಂಬದ ಸದಸ್ಯರು ಭಾಗವಹಿಸಿದ್ದರು.