Advertisement

ನಿಷೇಧವಿದ್ದರೂ ಜಿಲ್ಲೆಗೆ ನುಸುಳಿದ ಜನ

12:21 PM Apr 16, 2020 | Naveen |

ರಾಯಚೂರು: ಕೊರೊನಾ ಪಾಸಿಟಿವ್‌ ಪ್ರಕರಣಗಳಿಂದ ತತ್ತರಿಸಿದ ಆಂಧ್ರ, ತೆಲಂಗಾಣದ ಗಡಿಭಾಗದ ಜಿಲ್ಲೆಗಳಿಂದ ಜಿಲ್ಲೆಗೆ ಬರುವವರ ಸಂಖ್ಯೆ ದಿನೇ ದಿನೇ ಹೆಚ್ಚುತ್ತಿದೆ. ಮಂಗಳವಾರ ರಾತ್ರಿ ಕೂಡ 14 ಜನ ಗುಳೆ ಹೋದವರು ಮರಳಿ ಬಂದಿದ್ದು, ಅವರನ್ನು ಸರ್ಕಾರಿ ಕ್ವಾರಂಟೈನ್‌ನಲ್ಲಿ ಉಳಿಸಲಾಗಿದೆ. ಆಂಧ್ರ, ತೆಲಂಗಾಣದಲ್ಲಿ ಕೊರೊನಾ ಹಾವಳಿ ಹೆಚ್ಚಾಗಿದೆ. ಅದರಲ್ಲೂ ಗಡಿಭಾಗದ ಜಿಲ್ಲೆಗಳಲ್ಲೂ ಪಾಸಿಟಿವ್‌ ಪ್ರಕರಣಗಳಿವೆ.

Advertisement

ಈಚೆಗೆ ಸಭೆ ನಡೆಸಿದ್ದ ಜಿಲ್ಲಾ ಉಸ್ತುವಾರಿ ಸಚಿವ ಲಕ್ಷ್ಮಣ ಸವದಿ, ಗಡಿ ಭಾಗದಲ್ಲಿ ಕಟ್ಟೆಚ್ಚರ ವಹಿಸುವಂತೆ ತಿಳಿಸಿದ್ದರು. ಆದರೂ ಸಾಕಷ್ಟು ಜನ ನುಸುಳುತ್ತಿದ್ದಾರೆ. ಆಂಧ್ರದಿಂದ 14 ಜನ ಕಾರ್ಮಿಕರು ಲಾರಿಯಲ್ಲಿ ಬಂದಿದ್ದು, ನಗರದ ಪೊಲೀಸರು ತಪಾಸಣೆ ನಡೆಸಿದಾಗ ಘಟನೆ ಬಯಲಾಗಿದೆ. ಇನ್ನೂ ನಗರದ ವಿವಿಧ ಬ್ಯಾಂಕ್‌ಗಳಲ್ಲಿ ಕೆಲಸ ಮಾಡುವ ಸಿಬ್ಬಂದಿ ಕೂಡ ನೆರೆ ರಾಜ್ಯದ ಗಡಿಭಾಗದ ಗ್ರಾಮಗಳಿಂದ ನಿತ್ಯ ಓಡಾಡುತ್ತಿದ್ದಾರೆ. ಪಾಸ್‌ ತೋರಿಸುತ್ತಿದ್ದು, ಬುಧವಾರ ವಿಚಾರಣೆ ನಡೆಸಿದಾಗ ಸತ್ಯ ಗೊತ್ತಾಗಿದೆ. ಇನ್ನೂ ನಗರದಲ್ಲಿ ಲಾಕ್‌ಡೌನ್‌ ಮುಂದುವರಿದರೂ ಜನಸಂಚಾರ ಹೆಚ್ಚಾಗಿತ್ತು. ಪಾಸ್‌ಗಳಿಲ್ಲದೇ ಬಂದ ಜನ ಚೆಕ್‌ ಪೋಸ್ಟ್‌ಗಳಲ್ಲಿ, ನಾಕಾಬಂದಿಗಳಲ್ಲಿ ಪೊಲೀಸರೊಂದಿಗೆ ವಾಗ್ವಾದ ಮಾಡುತ್ತಿದ್ದ ದೃಶ್ಯ ಅಲ್ಲಲ್ಲಿ ಕಂಡು ಬಂತು.

ನಕಲಿ ಪಾಸ್‌ಗಳ ಹಾವಳಿ: ನಗರದಲ್ಲಿ ಜಿಲ್ಲಾಡಳಿತ ನೀಡಿದ್ದ ಪಾಸ್‌ಗಳನ್ನೇ ಕಲರ್‌ ಝರಾಕ್ಸ್‌ ಮಾಡಿಸಿಕೊಂಡು ದುರ್ಬಳಕೆ ಮಾಡುವವರ ಸಂಖ್ಯೆ ಹೆಚ್ಚಾಗಿದೆ. ತುರ್ತು ಸೇವೆ, ಅಗತ್ಯ ಕೆಲಸಗಳಿಗಾಗಿ ಆದ್ಯತೆ ಮೇರೆಗೆ ಜಿಲ್ಲಾಡಳಿತ ಸಾಕಷ್ಟು ಪಾಸ್‌ ನೀಡಿದೆ. ಆದರೆ, ಅವು ದುರ್ಬಳಕೆಯಾಗಿರುವ ಅನುಮಾನದ ಮೇರೆಗೆ ಪೊಲೀಸರು ಕ್ರಮಕ್ಕೆ ಮುಂದಾಗಿದ್ದಾರೆ. ಈ ವಿಚಾರ ಗಮನಕ್ಕೆ ಬರುತ್ತಿದ್ದಂತೆ ಹೆಚ್ಚುವರಿ ಪೊಲೀಸ್‌ ವರಿಷ್ಠಾಧಿಕಾರಿ ಹರಿಬಾಬು ನೇತೃತ್ವದ ತಂಡ ತನಿಖೆ ನಡೆಸಿದ್ದು, 19 ಪಾಸ್‌ ಗುರುತಿಸಲಾಗಿದೆ. ಬೈಕ್‌ಗಳನ್ನು ವಶಪಡಿಸಿಕೊಳ್ಳಲಾಗಿದೆ. ನಗರದ ಗಂಜ್‌ ವೃತ್ತ ಸೇರಿದಂತೆ ವಿವಿಧೆಡೆ ಬೆಳಗ್ಗೆಯಿಂದಲೇ ತಪಾಸಣೆ ನಡೆಸಲಾಯಿತು.

ನಗರದಲ್ಲಿ ನಕಲಿ ಪಾಸ್‌ ತೋರಿಸಿ ಅನಗತ್ಯವಾಗಿ ಓಡಾಡುವವರ ಸಂಖ್ಯೆ ಹೆಚ್ಚಾಗಿರುವ ದೂರುಗಳು ಬಂದಿದ್ದವು. ಈ ಹಿನ್ನೆಲೆಯಲ್ಲಿ ತನಿಖೆ ನಡೆಸಿದ್ದು, ಶಂಕಾಸ್ಪದ 19 ಪಾಸ್‌ ವಶಕ್ಕೆ ಪಡೆದು ಸಂಬಂಧಿ ಸಿದ ಇಲಾಖೆಗಳಿಗೆ ಕಳುಹಿಸಲಾಗಿದೆ. ಅಲ್ಲಿಂದ ವರದಿ ಬಂದು ನಕಲಿ ಎಂದು ಗೊತ್ತಾದಲ್ಲಿ ಅಂಥವರ ವಿರುದ್ಧ ಪ್ರಕರಣ ದಾಖಲಿಸಲಾಗುವುದು.
ಹರಿಬಾಬು,
ಹೆಚ್ಚುವರಿ ಪೊಲೀಸ್‌ ವರಿಷ್ಠಾಧಿಕಾರಿ

ಆಂಧ್ರ, ತೆಲಂಗಾಣಕ್ಕೆ ಗುಳೆ ಹೋಗಿರುವ ಜನ ಒಂದಲ್ಲ ಒಂದು ಮಾರ್ಗದಿಂದ ಮರಳಿ ಊರಿಗೆ ಬರುತ್ತಿದ್ದಾರೆ. ಅಂಥವರನ್ನು ಈಗಾಗಲೇ ಕ್ವಾರಂಟೈನ್‌ಗಳಲ್ಲಿ ಉಳಿಸಲಾಗಿದೆ. ಯಾರೇ ಹೊರಗಿನವರು ಬಂದಲ್ಲಿ ಗ್ರಾಮಸ್ಥರು ಮಾಹಿತಿ ನೀಡಬೇಕು. ಹೊರರಾಜ್ಯದಿಂದ ಬರುತ್ತಿದ್ದ ಬ್ಯಾಂಕ್‌ ಸಿಬ್ಬಂದಿಗೂ ಇಲ್ಲೇ ಉಳಿಯಿರಿ, ಇಲ್ಲ ಕೆಲಸಕ್ಕೆ ಗೈರಾಗುವಂತೆ ನಿರ್ದೇಶನ ನೀಡಲಾಗಿದೆ.
ಸಂತೋಷ ಕಾಮಗೌಡ,
ಸಹಾಯಕ ಆಯುಕ್ತ

Advertisement
Advertisement

Udayavani is now on Telegram. Click here to join our channel and stay updated with the latest news.

Next