ರಾಯಚೂರು: ವಸತಿ ಯೋಜನೆಗಳ ಫಲಾನುಭವಿಗಳ ಆಯ್ಕೆಗೆ ವಾರದೊಳಗೆ ಗ್ರಾಮಸಭೆ ನಡೆಸಬೇಕು. ಗ್ರಾಮಸಭೆ ಮಾಡಿ ಅರ್ಹ ಫಲಾನುಭವಿಗಳನ್ನು ಆಯ್ಕೆ ಮಾಡದಿದ್ದರೆ ಶೋಕಾಸ್ ನೋಟೀಸ್ ನೀಡಲಾಗುವುದು ಎಂದು ಜಿಪಂ ಸಿಇಒ ಲಕ್ಷ್ಮೀಕಾಂತರೆಡ್ಡಿ ಪಿಡಿಒಗಳಿಗೆ ಎಚ್ಚರಿಸಿದರು.
ನಗರದ ಜಿಲ್ಲಾ ಪಂಚಾಯಿತಿ ಸಭಾಂಗಣದಲ್ಲಿ ಶನಿವಾರ ನಡೆದ ಲಿಂಗಸುಗೂರು ವಿಧಾನಸಭಾ ಕ್ಷೇತ್ರದ ಪಿಡಿಒ ಮತ್ತು ತಾಂತ್ರಿಕ ಅಧಿಕಾರಿಗಳ ಸಭೆ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು. ಪ್ರಧಾನಮಂತ್ರಿ ಆವಾಸ್ ಹಾಗೂ ಬಸವ ಯೋಜನೆಯಡಿ ವಸತಿ ರಹಿತ ಫಲಾನುಭವಿಗಳ ಆಯ್ಕೆಗೆ ನಡೆಸುವ ಗ್ರಾಮಸಭೆಯನ್ನು ಸಂಪೂರ್ಣ ಚಿತ್ರೀಕರಿಸಬೇಕು. ಭಾವಚಿತ್ರ ಅಗತ್ಯ ದಾಖಲೆಗಳೊಂದಿಗೆ ಕಾರ್ಯನಿರ್ವಾಹಕ ಅಧಿಕಾರಿಗೆ ಸಲ್ಲಿಸಬೇಕು ಎಂದು ಸೂಚಿಸಿದರು.
ಈ ಯೋಜನೆಯಡಿ ಪಿಡಿಒಗಳು ಅರ್ಹ ಫಲಾನುಭವಿಗಳನ್ನು ಆಯ್ಕೆ ಮಾಡಿ ಅವರ ವಿವರಗಳನ್ನು ಗಣಕಯಂತ್ರದಲ್ಲಿ ದಾಖಲಿಸಬೇಕು. ಕಾಲಹರಣ ಮಾಡದೇ ಗ್ರಾಮಸಭೆ ನಡೆಸಿ ಫಲಾನುಭವಿಗಳನ್ನು ಆಯ್ಕೆ ಮಾಡಬೇಕು ಎಂದು ಹೇಳಿದರು.
ಗ್ರಾಮಸಭೆ ನಡೆಸದ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳಿಂದ ಮಾಹಿತಿ ಪಡೆದರು. ಲಿಂಗಸುಗೂರು ತಾಲೂಕು ವ್ಯಾಪ್ತಿಯಲ್ಲಿ ಸ್ವಚ್ಛ ಭಾರತ ಮಿಷನ್ ಯೋಜನೆಯಡಿ ಅರ್ಧಕ್ಕೆ ಸ್ಥಗಿತಗೊಂಡ ವೈಯಕ್ತಿಕ ಶೌಚಾಲಯಗಳ ಕಾಮಗಾರಿ ಗಳನ್ನು ಮುಂದಿನ ಸಭೆಯೊಳಗೆ ಪೂರ್ಣಗೊಳಿಸಬೇಕು. ಸಮಸ್ಯೆಗಳಿದ್ದರೆ, ಸ್ವಚ್ಛ ಭಾರತ ಮಿಷನ್‌ನ ಸಂಯೋಜನಾಅಧಿಕಾರಿಗಳೊಂದಿಗೆ ಚರ್ಚೆ ನಡೆಸಿ ಪರಿಹಾರ ಕಂಡುಕೊಳ್ಳಬೇಕು ಎಂದರು.
ಗುಳೆ ಹೋಗುವುದನ್ನು ತಡೆದು ಉದ್ಯೋಗ ಖಾತ್ರಿ ಯೋಜನೆಯಡಿ ಶೇ.100ರಷ್ಟು ಉದ್ಯೋಗ ನೀಡಿದ ಖೈರವಾಡಗಿ ಗ್ರಾಪಂ ಅಭಿವೃದ್ಧಿ ಅಧಿಕಾರಿ ರಾಮಪ್ಪ ಅವರ ಕಾರ್ಯವನ್ನು ಸಿಇಒ ಶ್ಲಾಘಿಸಿದರು. ಐಎಎಸ್ ಪ್ರಬೇಷನರಿ ಅಧಿಕಾರಿ ರಿತೇಶ ಇತರರಿದ್ದರು.