Advertisement

ಪ್ರತಿ ಸಭೆಯಲ್ಲೂ ಕಥೆ ಹೇಳಬೇಡಿ

10:59 AM Jun 16, 2019 | Team Udayavani |

ರಾಯಚೂರು: ಜಿಲ್ಲೆಯಲ್ಲಿ ಸಾಕಷ್ಟು ಬಹುಗ್ರಾಮ ಕುಡಿಯುವ ನೀರಿನ ಯೋಜನೆಗಳು ನನೆಗುದಿಗೆ ಬಿದ್ದಿವೆ. ಜನ ಕುಡಿಯುವ ನೀರಿಲ್ಲದೇ ಸಮಸ್ಯೆ ಎದುರಿಸುತ್ತಿದ್ದು, ಕಾಮಗಾರಿ ಮುಗಿಸಲು ಇನ್ನೆಷ್ಟು ವರ್ಷ ಬೇಕು ಎಂದು ಜಿಪಂ ಅಧ್ಯಕ್ಷೆ ಆದಿಮನಿ ವೀರಲಕ್ಷ್ಮೀ ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡರು.

Advertisement

ನಗರದ ಜಿಲ್ಲಾ ಪಂಚಾಯಿತಿ ಸಭಾಂಗಣದಲ್ಲಿ ಶನಿವಾರ ನಡೆದ ಮಾಸಿಕ ಸಾಮಾನ್ಯ ಸಭೆ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

ಸಭೆಯಲ್ಲಿ ಕೃಷಿ ಮತ್ತು ಕೈಗಾರಿಕೆ ಸ್ಥಾಯಿ ಸಮಿತಿ ಅಧ್ಯಕ್ಷ ಬಸವರಾಜ ಕಲ್ಯಾಣಪ್ಪ ಹಿರೇಗೌಡ್ರು ಮಾತನಾಡಿ, ಒಂದೆಡೆ ಜನ ಭೀಕರ ಬರದಿಂದ ನೀರಿಲ್ಲದೇ ಸಮಸ್ಯೆ ಎದುರಿಸುತ್ತಿದ್ದಾರೆ. ಅಧಿಕಾರಿಗಳು ಮಾತ್ರ ಕಾಟಾಚಾರಕ್ಕೆ ಇಂಥ ಸಭೆ ನಡೆಸಿ ಕೈತೊಳೆದುಕೊಳ್ಳುತ್ತಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು. ಇದಕ್ಕೆ ಪ್ರತಿಕ್ರಿಯಿಸಿದ ಅಧ್ಯಕ್ಷರು, ಕಾಮಗಾರಿಗಳು ಯಾಕೆ ವಿಳಂಬವಾಗುತ್ತಿವೆ. ಏನು ಸಮಸ್ಯೆಯಾಗಿದೆ ಎಂಬುದನ್ನು ವಿವರಿಸಿ ಎಂದರು. ಆಗ ಸಂಬಂಧಿಸಿದ ಅಧಿಕಾರಿಗಳು ಶೀಘ್ರದಲ್ಲೇ ಮುಗಿಸಲಾಗುವುದು ಎಂದು ಸಮಜಾಯಿಷಿ ನೀಡುತ್ತಿದ್ದಂತೆ, ಪ್ರತಿ ಸಭೆಯಲ್ಲೂ ಇದೇ ಕಾರಣ ನೀಡುತ್ತಿರಿ. ನಿಮಗೆ ಸ್ವಲ್ಪವಾದರೂ ಜವಾಬ್ದಾರಿ ಇಲ್ಲವೇ ಎಂದು ತರಾಟೆಗೆ ತೆಗೆದುಕೊಂಡರು.

ಬಹುಗ್ರಾಮ ಕುಡಿಯುವ ನೀರಿನ ಯೋಜನೆಯಡಿ ಸಮರ್ಪಕವಾಗಿ ನೀರು ನೀಡುತ್ತಿಲ್ಲ ಎಂಬ ದೂರುಗಳು ಹೆಚ್ಚಾಗುತ್ತಿವೆ. ಸಂಬಂಧಪಟ್ಟ ಅಧಿಕಾರಿಗಳು ಏನು ಮಾಡುತ್ತಿದ್ದಿರಾ. ಯಾವುದೇ ಕಾಮಾಗಾರಿಗಳನ್ನು ಸಕಾಲಕ್ಕೆ ಮುಗಿಸಬೇಕು ಎಂದರು.

ಹಿರೇಗೌಡ್ರು ಪ್ರತಿಕ್ರಿಯಿಸಿ, ಪರಿಸ್ಥಿತಿಗೆ ತಕ್ಕ ಹಾಗೆ ಕಾರ್ಯಕ್ರಮ ರೂಪಿಸಿದರೆ ಅನುಕೂಲವಾಗುತ್ತದೆ. ಕೆರೆಗಳು ಇಲ್ಲದ ಊರುಗಳಲ್ಲಿ ನೀರಿನ ಸಮಸ್ಯೆ ಇನ್ನೂ ಹೆಚ್ಚಿದೆ. ಮೊದಲು ನೀರು ಕೊಡಿ ಎಂದರು.

Advertisement

ಅದಕ್ಕೆ ದನಿಗೂಡಿಸಿದ ಶಿಕ್ಷಣ ಮತ್ತು ಸಾಮಾಜಿಕ ಸ್ಥಾಯಿ ಸಮಿತಿ ಅಧ್ಯಕ್ಷ ಖಾಸಿಂ ನಾಯಕ, ಕಮಲಾಪುರ ಗ್ರಾಪಂ ಮಂಜರ್ಲಾ ಮತ್ತು ಹೊಸ ಗೋನವಾರ ಗ್ರಾಮಗಳಲ್ಲಿ ನೀರಿನ ಸಮಸ್ಯೆ ಇದೆ. ಅಧಿಕಾರಿಗಳಿಗೆ ಹೇಳಿದರೆ, ಬಜೆಟ್ ಇಲ್ಲ ಎನ್ನುತ್ತಿದ್ದಾರೆ ಎಂದು ದೂರಿದರು.

ಡಿಡಿಪಿಐ ಬಿ.ಕೆ.ನಂದನೂರು ಮಾತನಾಡಿ, ಶೈಕ್ಷಣಿಕ ವರ್ಷಾರಂಭವಾಗಿದ್ದು, ಈಗಾಗಲೇ 20.50 ಲಕ್ಷ ಪಠ್ಯಪುಸ್ತಕ ಹಾಗೂ ಸಮವಸ್ತ್ರ ವಿತರಿಸಲಾಗಿದೆ ಎಂದರು. ಸಾಕಷ್ಟು ಕಡೆ ಶಿಕ್ಷಕರ ಕೊರತೆ ಇದೆಯಲ್ಲ ಎಂದು ಅಧ್ಯಕ್ಷೆ ಪ್ರಶ್ನಿಸಿದರು. ಪ್ರಾಥಮಿಕ ಶಾಲೆಗಳಿಗೆ 1,518 ಹಾಗೂ ಪ್ರೌಢಶಾಲೆಗಳಿಗೆ 190 ಅತಿಥಿ ಶಿಕ್ಷಕರನ್ನು ನೀಡುವಂತೆ ಪ್ರಸ್ತಾವನೆ ಸಲ್ಲಿಸಲಾಗಿದೆ ಎಂದು ಡಿಡಿಪಿಐ ತಿಳಿಸಿದರು. ಇದಕ್ಕೆ ದನಿಗೂಡಿಸಿದ ಜಿಪಂ ಸಿಇಒ, ಎಸ್ಸೆಸ್ಸೆಲ್ಸಿ ಫಲಿತಾಂಶದಲ್ಲಿ ಕುಸಿತ ಕಂಡಿರುವ ವಿಚಾರವನ್ನು ಸರ್ಕಾರದ ಗಮನಕ್ಕೆ ತಂದಿದ್ದು, ಈ ಬಾರಿ ಕಡ್ಡಾಯವಾಗಿ ಅತಿಥಿ ಶಿಕ್ಷಕರನ್ನು ನೀಡುವಂತೆ ಕೋರಲಾಗಿದೆ ಎಂದರು.

ಸಮಾಜ ಕಲ್ಯಾಣ ಇಲಾಖೆ ಉಪನಿರ್ದೇಶಕ ಪ್ರಶಾಂತ ಸಭೆಗೆ ಮಾಹಿತಿ ನೀಡಿ, ಎರಡು ಸಾವಿರ ವಿದ್ಯಾರ್ಥಿಗಳಿಗೆ ಸ್ಕಾಲರ್‌ಶಿಫ್‌ ಬಿಡುಗಡೆ ಮಾಡಿದ್ದು, ಇನ್ನೂ 15 ಸಾವಿರ ವಿದ್ಯಾರ್ಥಿಗಳ ಆಧಾರ್‌ ಕಾರ್ಡ್‌ ಜೋಡಣೆ ಆಗಬೇಕಿದೆ. ಮೇ ನಲ್ಲಿ 18 ಜನ ವಾರ್ಡನ್‌ಗಳನ್ನು ಜಿಲ್ಲೆಗೆ ನೇಮಿಸಿದ್ದು, ಈಗಾಗಲೇ ಎಂಟು ವಾರ್ಡನ್‌ಗಳು ಮಾನ್ವಿ ತಾಲೂಕಿನ ವಸತಿ ನಿಲಯಗಳಲ್ಲಿ ಕಾರ್ಯನಿರ್ವಹಿಸುತ್ತಿದ್ದಾರೆ ಎಂದರು.

ಬಳಿಕ ಕೃಷಿ ಇಲಾಖೆ ಜಂಟಿ ನಿರ್ದೇಶಕಿ ಡಾ| ಚೇತನಾ ಪಾಟೀಲ ಮಾತನಾಡಿ, ಮುಂಗಾರು ಹಂಗಾಮಿಗೆ ಸಿದ್ಧತೆಗಳ ಕುರಿತು ತಿಳಿಸಿದರು. ಬಿತ್ತನೆ ಬೀಜಗಳ ಖರೀದಿಗೆ ಜಾಗೃತಿ ಮೂಡಿಸುತ್ತಿರುವುದಾಗಿ ತಿಳಿಸಿದರು. ಸಬ್ಸಿಡಿಯಲ್ಲಿ ಅಗತ್ಯದಷ್ಟು ಬಿತ್ತನೆ ಬೀಜ ದಾಸ್ತಾನಿದ್ದು, ನೋಂದಾಯಿತ ರೈತರಿಗೆ ನೀಡುತ್ತಿರುವುದಾಗಿ ತಿಳಿಸಿದರು. ಬಳಿಕ ವಿವಿಧ ಇಲಾಖೆ ಅಧಿಕಾರಿಗಳು ಪ್ರಗತಿ ವರದಿ ನೀಡಿದರು.

Advertisement

Udayavani is now on Telegram. Click here to join our channel and stay updated with the latest news.

Next