Advertisement

ಕೊನೆಗೂ ‘ಕೈ’ಕೊಟ್ಟರು ಪ್ರತಾಪಗೌಡ

10:37 AM Jul 07, 2019 | Team Udayavani |

ಸಿದ್ಧಯ್ಯಸ್ವಾಮಿ ಕುಕನೂರು
ರಾಯಚೂರು:
ಮಸ್ಕಿ ಶಾಸಕ ಪ್ರತಾಪಗೌಡ ಪಾಟೀಲ ಕೊನೆಗೂ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡುವ ಮೂಲಕ ಊಹಾಪೋಹಗಳಿಗೆ ತೆರೆ ಎಳೆದಿದ್ದಾರೆ.

Advertisement

ಮಸ್ಕಿ ಪರಿಶಿಷ್ಟ ಪಂಗಡ ಮೀಸಲು ಕ್ಷೇತ್ರದಿಂದ ಸತತ ಮೂರು ಬಾರಿ ಗೆಲುವು ದಾಖಲಿಸುವ ಮೂಲಕ ಹ್ಯಾಟ್ರಿಕ್‌ ಬಾರಿಸಿದ್ದ ಅವರು, ರಾಜಕೀಯ ಸ್ಥಿತ್ಯಂತರ ಮಾಡಿಕೊಂಡಿದ್ದು ಇದೇ ಮೊದಲಲ್ಲ. ಬಿಜೆಪಿಯಿಂದ ರಾಜಕೀಯ ಜೀವನ ಆರಂಭಿಸಿದ್ದ ಅವರು, ಎರಡನೇ ಬಾರಿ ಕಾಂಗ್ರೆಸ್‌ನಿಂದ ಗೆದ್ದು ಶಾಸಕರಾಗಿದ್ದರು. ಮೂರನೇ ಬಾರಿ ಕಾಂಗ್ರೆಸ್‌ನಿಂದ ಅಖಾಡಕ್ಕಿಳಿದಿದ್ದರಾದರೂ ಕೂದಲೆಳೆ ಅಂತರದಲ್ಲಿ ಗೆಲುವು ದಾಖಲಿಸಿದ್ದರು. ಅತಂತ್ರ ವಿಧಾನಸಭೆ ನಿರ್ಮಾಣವಾದಾಗ ಬಿಜೆಪಿಯಿಂದ ಶುರುವಾದ ಆಪರೇಷನ್‌ ಪ್ರಹಸನದಲ್ಲಿ ಮೊದಲು ಕೇಳಿ ಬಂದ ಹೆಸರೇ ಪ್ರತಾಪಗೌಡ ಪಾಟೀಲ ಅವರದ್ದಾಗಿತ್ತು.

ಬಿಜೆಪಿ ಸಖ್ಯ: ಪ್ರತಾಪಗೌಡ ಪಾಟೀಲ ಮುಂಚೆಯಿಂದಲೂ ಬಿಜೆಪಿ ವರಿಷ್ಠರು ಹಾಗೂ ಅನೇಕ ಮುಖಂಡರೊಂದಿಗೆ ಉತ್ತಮ ಬಾಂಧವ್ಯ ಇಟ್ಟುಕೊಂಡಿದ್ದರು. ಅಲ್ಲದೇ, ರೆಬೆಲ್ ಶಾಸಕ ರಮೇಶ ಜಾರಕಿಹೊಳಿ ಜತೆಗೆ ನಿರಂತರ ಸಂಪರ್ಕದಲ್ಲಿದ್ದರು. ಅದರಲ್ಲೂ ಬಿ.ಎಸ್‌.ಯಡಿಯೂರಪ್ಪರ ಬಗ್ಗೆ ಅವರಿಗೆ ತುಸು ಹೆಚ್ಚೇ ಒಲವಿತ್ತು. ಹೀಗಾಗಿ ಅವರ ಮೇಲಿನ ಅಭಿಮಾನಕ್ಕಾಗಿ ‘ಆಪರೇಷನ್‌ ಕಮಲ’ದ ಮೊದಲ ಶಾಸಕರಾಗಿ ಗುರುತಿಸಿಕೊಂಡಿದ್ದರು.

ನಿಮಗೆ ಎಷ್ಟು ಶಾಸಕರು ಬೇಕು ಅಷ್ಟು ಜನರ ರಾಜೀನಾಮೆ ಪಡೆಯಿರಿ. ನಾನು ಯಾವ ಕ್ಷಣದಲ್ಲಾದರೂ ರಾಜೀನಾಮೆ ನೀಡಲು ಸಿದ್ಧ. ಆದರೆ, ಪದೇ ಪದೇ ತಮ್ಮ ಹೆಸರು ಬಳಸದಂತೆ ಬಿಜೆಪಿ ವರಿಷ್ಠರಿಗೆ ವಿನಂತಿಸಿದ್ದರು ಎನ್ನಲಾಗುತ್ತಿದೆ. ಕೊನೆಗೂ ಕೊಟ್ಟ ಮಾತಿನಂತೆ ನಡೆದುಕೊಂಡಿದ್ದಾರೆ ಎನ್ನಲಾಗಿದೆ.

ನಿಗಮವೂ ಸಿಕ್ಕಿತ್ತು: ಈ ಹಿಂದೆ ‘ಆಪರೇಷನ್‌ ಕಮಲ’ ಬೆಳವಣಿಗೆ ನಡೆದಾಗ ಸಿಎಂ ಎಚ್.ಡಿ. ಕುಮಾರಸ್ವಾಮಿ ಜಿಲ್ಲೆಯ ಕಾಂಗ್ರೆಸ್‌ ಶಾಸಕರಾದ ಪ್ರತಾಪಗೌಡ ಪಾಟೀಲ ಹಾಗೂ ಗ್ರಾಮೀಣ ಕ್ಷೇತ್ರದ ದದ್ದಲ್ ಬಸನಗೌಡರಿಗೆ ನಿಗಮ ಮಂಡಳಿ ಸ್ಥಾನ ನೀಡಿ ಸಮಾಧಾನಪಡಿಸುವ ಯತ್ನ ನಡೆಸಿದ್ದರು. ಮೊದಲ ಬಾರಿಗೆ ಗೆದ್ದಿರುವ ದದ್ದಲ್ ಅಷ್ಟಕ್ಕೇ ಸಮಾಧಾನಗೊಂಡಿದ್ದರೆ, ಹ್ಯಾಟ್ರಿಕ್‌ ಸಾಧಿಸಿರುವ ಪ್ರತಾಪಗೌಡರಿಗೆ ಸಚಿವ ಸ್ಥಾನ ಸಿಕ್ಕಿಲ್ಲ ಎಂಬ ಕೊರಗು ಮಾತ್ರ ಕುಗ್ಗಿರಲಿಲ್ಲ. ಆ ಅಸಮಾಧಾನದ ಫಲವೇ ಅವರ ರಾಜೀನಾಮೆಗೆ ಕಾರಣ ಎಂದರೂ ತಪ್ಪಲ್ಲ.

ಭವಿಷ್ಯಕ್ಕೆ ಕುತ್ತು
ಶಾಸಕ ಪ್ರತಾಪಗೌಡ ಪಾಟೀಲ ತಮ್ಮ ರಾಜಕೀಯ ಭವಿಷ್ಯವನ್ನೇ ಅಡವಿಟ್ಟು ಇಂಥ ನಿರ್ಧಾರ ಕೈಗೊಂಡಿರುವುದು ಮೇಲ್ನೋಟಕ್ಕೆ ಕಾಣಿಸುತ್ತಿದೆ. ಕಳೆದ ವಿಧಾನಸಭೆ ಚುನಾವಣೆಯಲ್ಲಿ ಬೀಸಿದ್ದ ಬಿಜೆಪಿ ಅಲೆಗೆ ಅವರ ಗೆಲುವು ಕಷ್ಟ ಎಂದೇ ಹೇಳಲಾಗಿತ್ತು. ಬಿಜೆಪಿಯ ಬಸನಗೌಡ ತುರ್ವಿಹಾಳ ವಿರುದ್ಧ ಕೇವಲ 202 ಮತಗಳ ಅಂತರದಿಂದ ಗೆಲುವು ದಾಖಲಿಸಿರುವುದೇ ಅದಕ್ಕೆ ಸಾಕ್ಷಿ. ಆದರೀಗ ಅವರು ಉಪ ಚುನಾವಣೆ ಎದುರಿಸಿದರೂ ಗೆಲುವು ಖಚಿತ ಎಂದು ಹೇಳುವುದು ಕಷ್ಟ . ಹೀಗಾಗಿ ತಮ್ಮ ರಾಜಕೀಯ ಭವಿಷ್ಯವನ್ನೇ ಅಡವಿಟ್ಟು ಈ ನಿರ್ಧಾರ ಕೈಗೊಂಡರಾ ಎಂಬ ಮಾತು ಕೇಳಿಬರುತ್ತಿದೆ.
Advertisement
Advertisement

Udayavani is now on Telegram. Click here to join our channel and stay updated with the latest news.

Next