Advertisement

ಅಪೌಷ್ಟಿಕತೆ ಗಾಯಕ್ಕೆ ಸಿಬ್ಬಂದಿ ಕೊರತೆ ಬರೆ!

03:01 PM Jul 10, 2019 | Naveen |

ಸಿದ್ಧಯ್ಯಸ್ವಾಮಿ ಕುಕುನೂರು
ರಾಯಚೂರು:
ಹಿಂದುಳಿದ ರಾಯಚೂರು ಜಿಲ್ಲೆಯ ಮಕ್ಕಳಲ್ಲಿ ಅಪೌಷ್ಟಿಕತೆ ಸಮಸ್ಯೆ ಬಹುವಾಗಿ ಕಾಡುತ್ತಿದೆ ಎನ್ನುವ ವಿಚಾರ ಗೊತ್ತಿದ್ದರೂ ಸರ್ಕಾರ ಅದನ್ನು ನಿವಾರಿಸಲು ಮುಂದಾದಂತೆ ಕಾಣುತ್ತಿಲ್ಲ. ಜಿಲ್ಲೆಯ ಮಹಿಳಾ ಮತ್ತು ಮಕ್ಕಳ ಇಲಾಖೆಯಲ್ಲಿ 87 ಹುದ್ದೆಗಳು ಖಾಲಿ ಇದ್ದು, ಅಪೌಷ್ಟಿಕತೆ ನಿವಾರಣೆಗೆ ಶ್ರಮಿಸುವವರೇ ಇಲ್ಲದಂತಾಗಿದೆ.

Advertisement

ಮಕ್ಕಳಲ್ಲಿನ ಅಪೌಷ್ಟಿಕತೆ ನಿವಾರಣೆಗೆ ಸರ್ಕಾರ ನಾನಾ ಯೋಜನೆಗಳನ್ನು ಜಾರಿಗೊಳಿಸಿದೆ. ಆದರೆ, ಅವುಗಳನ್ನು ಸರಿಯಾಗಿ ಅನುಷ್ಠಾನ ಮಾಡಲು ಅಗತ್ಯ ಸಿಬ್ಬಂದಿಯೇ ಇಲ್ಲದಿರುವುದು ವಿಪರ್ಯಾಸ. ಇಲಾಖೆ ಅಂಕಿ-ಅಂಶಗಳ ಪ್ರಕಾರ ಅತಿಯಾದ ಅಪೌಷ್ಟಿಕತೆಯಿಂದ ಬಳಲುತ್ತಿರುವ ಮಕ್ಕಳ ಸಂಖ್ಯೆಯಲ್ಲಿ ರಾಯಚೂರಿಗೆ ಮೂರನೇ ಸ್ಥಾನವಿದೆ. ಜಿಲ್ಲೆಯಲ್ಲಿ 2,02,742 ಮಕ್ಕಳು ಕಡಿಮೆ ತೂಕ ಹೊಂದಿದ್ದರೆ ಅದರಲ್ಲಿ 56,137 ಮಕ್ಕಳು ಅಪೌಷ್ಟಿಕತೆ ಸಮಸ್ಯೆಯಿಂದ ಬಳಲುತ್ತಿದ್ದಾರೆ. ಅದರಲ್ಲೂ ಸಾವಿರಾರು ಮಕ್ಕಳು ಅತಿಯಾದ ಅಪೌಷ್ಟಿಕತೆಗೆ ತುತ್ತಾಗಿದ್ದಾರೆ ಎನ್ನುತ್ತವೆ ಮೂಲಗಳು. ಈ ಸಮಸ್ಯೆ ಇಂದು, ನಿನ್ನೆಯದಲ್ಲ. ಕಳೆದ ಕೆಲ ವರ್ಷಗಳಿಂದ ಜಿಲ್ಲೆಗೆ ಅಪೌಷ್ಟಿಕತೆ ಪೆಡಂಭೂತ ಎಡೆಬಿಡದೆ ಕಾಡುತ್ತಿದೆ. ಅಷ್ಟಾದರೂ ಸರ್ಕಾರ ಮಾತ್ರ ಬಗ್ಗೆ ಕನಿಷ್ಠ ಮುತುವರ್ಜಿ ವಹಿಸದಿರುವುದು ವಿಪರ್ಯಾಸ.

ಎಲ್ಲ ವಿಭಾಗದಲ್ಲೂ ಖಾಲಿ ಖಾಲಿ: ರಾಯಚೂರು ಜಿಲ್ಲೆಯ ಮಹಿಳೆ ಮತ್ತು ಮಕ್ಕಳ ಕಲ್ಯಾಣ ಇಲಾಖೆಯಲ್ಲಿ ಬರೋಬ್ಬರಿ 87 ಹುದ್ದೆಗಳು ಖಾಲಿ ಇವೆ. ಒಟ್ಟು 222 ಮಂಜೂರಾದ ಹುದ್ದೆಗಳಿದ್ದು, ಅದರಲ್ಲಿ 135 ಮಾತ್ರ ಭರ್ತಿಯಾಗಿವೆ. ಎ ದರ್ಜೆ ಹುದ್ದೆಗಳಾದ ಉಪನಿರ್ದೇಶಕರ ಹುದ್ದೆ, ನಿರೂಪಣಾಧಿಕಾರಿ, ಮಹಿಳಾ ಮತ್ತು ಮಕ್ಕಳ ಕಲ್ಯಾಣಾಧಿಕಾರಿ, ಜಿಲ್ಲಾ ಮಕ್ಕಳ ರಕ್ಷಣಾಧಿಕಾರಿ ಹುದ್ದೆಗಳು ಖಾಲಿ ಇದ್ದರೆ, ಇದೆ ದರ್ಜೆಯ ಶಿಶು ಅಭಿವೃದ್ಧಿ ಯೋಜನಾಧಿಕಾರಿಗಳ ಎಂಟು ಹುದ್ದೆಗಳಲ್ಲಿ ನಾಲ್ಕು ಮಾತ್ರ ಭರ್ತಿಯಾಗಿವೆ.

ಇನ್ನು ಬಿ ದರ್ಜೆಯ ಸಹಾಯಕ ಶಿಶು ಅಭಿವೃದ್ಧಿ ಯೋಜನಾಧಿಕಾರಿಗಳ ಎಂಟರಲ್ಲಿ ನಾಲ್ಕು ಹುದ್ದೆ ಮಾತ್ರ ಭರ್ತಿಯಾಗಿವೆ. ಗ್ರೇಡ್‌ 1 ಸಂರಕ್ಷಣಾಧಿಕಾರಿಗಳ ಎಂಟರಲ್ಲಿ ನಾಲ್ಕು ಹುದ್ದೆ ಮಾತ್ರ ಭರ್ತಿಯಾಗಿವೆ. ಸಿ ದರ್ಜೆಯ ಗ್ರೇಡ್‌ 2 ಕಾರ್ಯಕ್ರಮ ಸಂಯೋಜಕರಲ್ಲಿ ಎಂಟರಲ್ಲಿ ಐವರು ಮಾತ್ರ ಲಭ್ಯವಿದ್ದು, ಮೂರು ಹುದ್ದೆಗಳು ಖಾಲಿ ಇವೆ. ಅಭಿವೃದ್ಧಿ ನಿರೀಕ್ಷಕರ ಹುದ್ದೆ ಖಾಲಿ ಇದೆ. ಹಿರಿಯ ಮೇಲ್ವಿಚಾರಕಿಯರ 102 ಹುದ್ದೆಗಳಲ್ಲಿ 82 ಭರ್ತಿಯಾಗಿದ್ದು, 20 ಖಾಲಿ ಇವೆ. ಉಪಾಧೀಕ್ಷಕರು, ಅಂಕಿ ಸಂಖ್ಯೆ ಸಹಾಯಕಿಯರ 31 ಹುದ್ದೆಗಳಲ್ಲಿ 13 ಮಾತ್ರ ಭರ್ತಿಯಾಗಿದ್ದು, 18 ಹುದ್ದೆ ಖಾಲಿ ಇವೆ. ದ್ವಿತೀಯ ದರ್ಜೆ ಸಹಾಯಕರ 16ರಲ್ಲಿ 10 ಹುದ್ದೆ ಖಾಲಿ ಇವೆ. ಡಿ ದರ್ಜೆಯ 40 ಹುದ್ದೆಗಳಲ್ಲಿ 12 ಮಾತ್ರ ಭರ್ತಿಯಾಗಿದ್ದು, 28 ಖಾಲಿ ಇವೆ.

ಬಡ್ತಿಯಿಂದಲೇ ಭರ್ತಿ: ಎಲ್ಲ ಇಲಾಖೆಗಳಲ್ಲಿ ಉಪನಿರ್ದೇಶಕರ ಹುದ್ದೆಗಳಿಗೆ ನೇರವಾಗಿ ನೇಮಕಾತಿ ನಡೆದರೆ ಈ ಇಲಾಖೆಯಲ್ಲಿ ಮಾತ್ರ ಬಡ್ತಿ ಮೂಲಕವೇ ನೇಮಕಾತಿ ಮಾಡುವ ಸಂಪ್ರದಾಯ ಇಂದಿಗೂ ನಡೆದುಕೊಂಡು ಬಂದಿದೆ. ಹೀಗಾಗಿ ಅರ್ಹ ಅಧಿಕಾರಿಗಳಿಗೆ ಬಡ್ತಿ ನೀಡಿ ಅವರನ್ನು ಉಪನಿರ್ದೇಶಕರ ಹುದ್ದೆಗೆ ನಿಯೋಜಿಸಬೇಕಿದೆ. ಒಂದು ವೇಳೆ ಅರ್ಹತೆ ಇಲ್ಲ ಎಂದರೆ ಅಲ್ಲಿವರೆಗೂ ಕಾಯಬೇಕಾದ ಸನ್ನಿವೇಶ ಇದೆ. ಇದೇ ಕಾರಣಕ್ಕೆ ಇಲ್ಲಿ ಮೇಲ್ದರ್ಜೆಯ ಹುದ್ದೆಗಳು ಖಾಲಿಯಾಗಿ ಉಳಿದಿವೆ.

Advertisement

ಕಾಗದದಲ್ಲೇ ವ್ಯವಹಾರ: ಸರ್ಕಾರ ಕಾಗದ ರಹಿತ ವ್ಯವಹಾರ ಮಾಡುವ ನಿಟ್ಟಿನಲ್ಲಿ ಮುಂದಡಿ ಇಟ್ಟರೆ ಈ ಇಲಾಖೆ ಮಾತ್ರ ಇಂದಿಗೂ ಕಾಗದದ ವ್ಯವಹಾರದಲ್ಲೇ ಇದೆ. ವಾರಕ್ಕೆರಡು ಬಾರಿ ಕೇಂದ್ರ ಕಚೇರಿಗೆ ಇಲಾಖೆಗೆ ಸಿಬ್ಬಂದಿಯೇ ದಾಖಲೆ ತೆಗೆದುಕೊಂಡು ಹೋಗಬೇಕಾದ ಸ್ಥಿತಿ ಇದೆ. ಸಿಬ್ಬಂದಿ ಕೊರತೆ ಮಧ್ಯೆಯೇ ಇಂಥ ಹೆಚ್ಚುವರಿ ಕೆಲಸಗಳು ಇಲಾಖೆಯನ್ನು ಮತ್ತಷ್ಟು ಬಡವಾಗಿಸಿದೆ.

ಮೇಲುಸ್ತುವಾರಿ ಮರೆ: ಸರ್ಕಾರದ ಯೋಜನೆಗಳ ಸಮರ್ಪಕ ಅನುಷ್ಠಾನ ಮುಖ್ಯವಾಗಿದೆ. ಅದನ್ನು ಪರಿಶೀಲಿಸಬೇಕಾದ ಸಿಬ್ಬಂದಿಗೆ ಕೆಲಸದ ಹೊರೆ ಹೆಚ್ಚುತ್ತಿದೆ. ಹೀಗಾಗಿ ಅಂಗನವಾಡಿಗಳಲ್ಲಿ ಮಕ್ಕಳಿಗೆ ಎಷ್ಟರ ಮಟ್ಟಿಗೆ ಆಹಾರ ನೀಡುತ್ತಿದ್ದಾರೆ ಎಂಬುದನ್ನು ಸರಿಯಾಗಿ ಪರಿಶೀಲಿಸುವವರೇ ಇಲ್ಲದಾಗಿದೆ. ಇದೇ ಕಾರಣಕ್ಕೆ ಜಿಲ್ಲೆಯಲ್ಲಿ ವರ್ಷದಿಂದ ವರ್ಷಕ್ಕೆ ಅಪೌಷ್ಟಿಕತೆ ಸಮಸ್ಯೆ ಹೆಚ್ಚುತ್ತಿದೆ ಎಂಬುದು ಅಧಿಕಾರಿಗಳ ಅನಿಸಿಕೆ.

ನಾನು ಜಿಪಂ ಸಹಾಯಕ ಕಾರ್ಯದರ್ಶಿಯಾಗಿದ್ದು, ಮಹಿಳಾ ಮಕ್ಕಳ ಇಲಾಖೆಗೆ ಪ್ರಭಾರ ಉಪನಿರ್ದೇಶಕರನ್ನಾಗಿ ನಿಯೋಜಿಸಲಾಗಿದೆ. ಇಲಾಖೆಯಲ್ಲಿ ಸಾಕಷ್ಟು ಹುದ್ದೆಗಳು ಖಾಲಿ ಇರುವುದು ನಿಜ. ಇರುವ ಸಿಬ್ಬಂದಿಯಿಂದಲೇ ಸಾಧ್ಯವಾದಷ್ಟು ಉತ್ತಮ ಕೆಲಸ ಮಾಡಲಾಗುತ್ತಿದೆ.
ಜಯಲಕ್ಷ್ಮೀ,
ಪ್ರಭಾರ ಉಪನಿರ್ದೇಶಕರು, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ

Advertisement

Udayavani is now on Telegram. Click here to join our channel and stay updated with the latest news.

Next