Advertisement

ಶಹಾಪುರದಲ್ಲಿ ರಾಯಚೂರಿಗಿಂತ ಕಲಬುರಗಿಯದ್ದೇ ಸದ್ದು

11:38 AM May 03, 2019 | Naveen |

ಯಾದಗಿರಿ: ರಾಯಚೂರು ಲೋಕಸಭೆ ವ್ಯಾಪ್ತಿಯ ಶಹಾಪುರ ವಿಧಾನಸಭೆ ಕ್ಷೇತ್ರದಲ್ಲಿ ತನ್ನ ಕ್ಷೇತ್ರಕ್ಕಿಂತ ಹೆಚ್ಚು ನೆರೆಯ ಕಲಬುರಗಿ ಲೋಕಸಭೆ ಕ್ಷೇತ್ರದ ಕುರಿತು ಹೆಚ್ಚು ಚರ್ಚೆ ನಡೆಯುತ್ತಿದೆ.

Advertisement

ಶಹಾಪುರದಲ್ಲಿಯೂ ಮಲ್ಲಿಕಾರ್ಜುನ ಖರ್ಗೆ ಅಭಿಮಾನಿ ವಲಯದಲ್ಲಿ ಖರ್ಗೆ ಅವರು ಡಜನ್‌ ಬಾರಿ ಗೆಲುವು ಸಾಧಿಸಬೇಕು ಎನ್ನುವ ಬಯಕೆ ಇದ್ದು, ಕಲಬುರಗಿಯ ಫಲಿತಾಂಶದ ಮೇಲೆಯೇ ಇಲ್ಲಿನ ಜನ ಚಿತ್ತನೆಟ್ಟಿದೆ.

2014ರ ಲೋಕಸಭೆ ಚುನಾವಣೆಯಲ್ಲಿ ಕಾಂಗ್ರೆಸ್‌ನಿಂದ ಸ್ಪರ್ಧಿಸಿ ಬಿ.ವಿ. ನಾಯಕ ಸಂಸದರಾಗಿ ಆಯ್ಕೆಯಾಗಿದ್ದರೂ ಶಹಾಪುರ ಮತಕ್ಷೇತ್ರದಲ್ಲಿ ಅಂದು ಬಿಜೆಪಿಗೆ ಐದು ಸಾವಿರ ಮತಗಳ ಲೀಡ್‌ ಬಂದಿತ್ತು. ಆಗ ಬಿಜೆಪಿ ಅಭ್ಯರ್ಥಿಯಾಗಿ ದೇವದುರ್ಗದ ಶಿವನಗೌಡ ನಾಯಕ ಸ್ಪರ್ಧಿಸಿ ಕೆಲವೇ ಮತಗಳ ಅಂತರದಿಂದ ಸೋಲು ಅನುಭವಿಸಿದ್ದು ಬಿಜೆಪಿ ಪರ ಅನುಕಂಪವೂ ಕೆಲಸ ಮಾಡಲಿದೆ ಎನ್ನುವುದು ಇಲ್ಲಿನ ಮತದಾರರ ಲೆಕ್ಕಾಚಾರ.

ಕಳೆದ ಬಾರಿ ಕೆಲವೇ ಮತಗಳ ಅಂತರದಿಂದ ರಾಯಚೂರು ಲೋಕಸಭೆ ಕಳೆದುಕೊಂಡಿದ್ದ ಬಿಜೆಪಿ, ಈ ಬಾರಿ ಭರ್ಜರಿ ಗೆಲುವು ಸಾಧಿಸುವ ಹುಮ್ಮಸ್ಸಿನಲ್ಲಿ ಪ್ರಚಾರ ನಡೆಸಿದ್ದು, ಶಹಾಪುರ ಕ್ಷೇತ್ರದಲ್ಲಿಯೂ ಪ್ರಧಾನಿ ಮೋದಿ ಅಲೆ ಕೆಲಸ ಮಾಡಲಿದೆ ಎನ್ನಲಾಗಿದೆ. ದೇಶದ ವಿಚಾರವೂ ಪ್ರಮುಖ ಪಾತ್ರವಹಿಸಿದ್ದರಿಂದ ಕನಿಷ್ಠ 15 ಸಾವಿರ ಮತಗಳ ಲೀಡ್‌ ಬರಬಹುದು ಎನ್ನುವ ಮಾತುಗಳು ರಾಜಕೀಯ ವಲಯದಲ್ಲಿ ಕೇಳಿಬರುತ್ತಿದೆ.

ನಗರದ ಹೊಟೇಲ್, ದಾಬಾಗಳಲ್ಲಿ ಕಲಬುರಗಿ ಲೋಕಸಭೆ ಕಾಂಗ್ರೆಸ್‌ ಅಭ್ಯರ್ಥಿ ಡಾ| ಮಲ್ಲಿಕಾರ್ಜುನ ಖರ್ಗೆ ಮತ್ತು ಬಿಜೆಪಿಯ ಡಾ| ಉಮೇಶ ಜಾಧವ ಬಗ್ಗೆ ಹೆಚ್ಚಿನ ಚರ್ಚೆಗಳು ನಡೆಯುತ್ತಿವೆ. ಅಲ್ಲದೇ ಇವರಿಬ್ಬರು ಎಷ್ಟು ಅಂತರದಿಂದ ಗೆಲ್ಲಲ್ಲಿದ್ದಾರೆ ಎನ್ನುವ ಕುರಿತು ಕೆಲವೊಂದು ಕಡೆ ಅಭಿಮಾನಿಗಳು ಬೆಟ್ಟಿಂಗ್‌ನಲ್ಲಿಯೂ ತೊಡಗಿರುವುದು ಕಂಡು ಬಂದಿದೆ.

Advertisement

ರಾಜ್ಯದಲ್ಲಿ ಮೈತ್ರಿ ಸರ್ಕಾರವಿದ್ದರೂ ಶಹಾಪುರದಲ್ಲಿ ಮೈತ್ರಿ ಅಭ್ಯರ್ಥಿ ಪರ ಇಲ್ಲಿನ ಜೆಡಿಎಸ್‌ ನಾಯಕರು ಪ್ರಚಾರಕ್ಕೆ ಇಳಿದಿಲ್ಲ. ಹೀಗಾಗಿ ಇಲ್ಲಿ ಮೈತ್ರಿ ಅಭ್ಯರ್ಥಿಗೆ ಹೊಡೆತ ಬೀಳಬಹುದೇ ಎನ್ನುವ ಅಂಶ ಗಮನ ಸೆಳೆದಿದೆ. 2018ರ ವಿಧಾನಸಭೆ ಚುನಾವಣೆಯಲ್ಲಿ ಜೆಡಿಎಸ್‌ನಿಂದ ಸ್ಪರ್ಧಿಸಿದ್ದ ಅಮೀನರಡ್ಡಿ ಯಾಳಗಿ 23 ಸಾವಿರ ಮತಗಳನ್ನು ಪಡೆದಿದ್ದರು. ಅವರನ್ನು ಮನವೊಲಿಸುವಲ್ಲಿ ಬಹುತೇಕ ಕಾಂಗ್ರೆಸ್‌ ವಿಫಲವಾಗಿದೆ. ಹೀಗಾಗಿ ಜೆಡಿಎಸ್‌ ಮತಗಳು ಅನಾಯಾಸವಾಗಿ ಬಿಜೆಪಿಗೆ ಬರಲಿವೆ ಎಂದು ಜನರು ಚರ್ಚೆ ನಡೆಸುತ್ತಿದ್ದಾರೆ.

ಮಾಜಿ, ಹಾಲಿಗಳ ಭರ್ಜರಿ ಪ್ರಚಾರ
ಈ ಚುನಾವಣೆಯನ್ನು ಕಳೆದ ಬಾರಿಗಿಂತ ಶಾಸಕ ಶರಣಬಸಪ್ಪಗೌಡ ದರ್ಶನಾಪುರ ಪ್ರತಿಷ್ಠೆಯಾಗಿ ತೆಗೆದುಕೊಂಡಿದ್ದಾರೆ. ಅವರ ಪ್ರಚಾರದಿಂದ ಕ್ಷೇತ್ರದಿಂದ ಹೆಚ್ಚಿನ ಮತಗಳನ್ನು ಸೆಳೆಯಬಹುದು ಎನ್ನುವ ಮಾತು ಕೇಳಿ ಬರುತ್ತಿದೆ. ಮಾಜಿ ಶಾಸಕ ಗುರು ಪಾಟೀಲ ಶಿರವಾಳ ಸಾರ್ವಜನಿಕ ಸ್ಥಳವಾದ ಹೋಟೆಲ್ನಲ್ಲಿ ಮತದಾರರನ್ನು ಆಕರ್ಷಿಸಲು ತಿಂಡಿ ಸೇವಿಸಿ ಸುದ್ದಿಯಾಗಿದ್ದರು. ಅವರು ಕ್ಷೇತ್ರದಲ್ಲಿ ಹಿಡಿತ ಹೊಂದಿದ್ದು, ಈ ಬಾರಿ ಬಿಜೆಪಿ ಅಲೆಯಲ್ಲಿ ಹೆಚ್ಚಿನ ಜನರು ಕಮಲದತ್ತ ವಾಲಿರಬೇಕು ಎನ್ನುವ ಮಾತು ಕೇಳಿ ಬರುತ್ತಿದೆ.

ಅನೀಲ ಬಸೂದೆ

Advertisement

Udayavani is now on Telegram. Click here to join our channel and stay updated with the latest news.

Next