ರಾಯಚೂರು: ರಾಯಚೂರು ಲೋಕಸಭೆ ಚುನಾವಣೆಗೆ ಹಗಲಿರುಳೆನ್ನದೆ ಶ್ರಮಿಸಿದ ಅಭ್ಯರ್ಥಿಗಳು, ಮತದಾನ ಮುಗಿದ ಮರುದಿನ ರಿಲ್ಯಾಕ್ಸ್ ಮೂಡ್‌ನಲ್ಲಿದ್ದದ್ದು ಕಂಡುಬಂತು. ಬಿಜೆಪಿ ಅಭ್ಯರ್ಥಿ ರಾಜಾ ಅಮರೇಶ್ವರ ನಾಯಕ ಮತ್ತು ಕಾಂಗ್ರೆಸ್-ಜೆಡಿಎಸ್ ಅಭ್ಯರ್ಥಿ ಬಿ.ವಿ.ನಾಯಕ ತಮ್ಮ ಕುಟುಂಬ, ಕಾರ್ಯಕರ್ತರೊಂದಿಗೆ ಕಾಲ ಕಳೆಯುವ ಮೂಲಕ ವಿಶ್ರಾಂತಿ ಪಡೆದರು.
ಬಿಜೆಪಿಯ ರಾಜಾ ಅಮರೇಶ್ವರ ನಾಯಕ ನಗರದ ಐಡಿಎಸ್‌ಎಂಟಿ ಬಡಾವಣೆಯಲ್ಲಿನ ತಮ್ಮ ನಿವಾಸದಲ್ಲಿ ಬೆಳಗ್ಗೆ ಪತ್ನಿ ಮಕ್ಕಳ ಜತೆ ಕಾಲ ಕಳೆದರು. ದಿನಪತ್ರಿಕೆಗಳ ಮೇಲೆ ಕಣ್ಣಾಡಿಸಿ ಚುನಾವಣೆ ವರದಿಗಳನ್ನು ಗಮನಿಸಿದರು. ಕುಟುಂಬ ಸದಸ್ಯರೊಂದಿಗೆ ಉಪಹಾರ, ಚಹಾ, ಮಜ್ಜಿಗೆ ಸೇವಿಸಿ ಕಾಲ ಕಳೆದರು.
ಬೆಳಗ್ಗೆಯಿಂದಲೆನೇ ಕ್ಷೇತ್ರದ ಕಾರ್ಯಕರ್ತರು ಅಭ್ಯರ್ಥಿ ಮನೆಗೆ ಎಡತಾಕುತ್ತಿದ್ದರು. ಕೆಲಕಾಲ ಬೆಂಬಲಿಗರ ಜತೆ ಮಾತುಕತೆ ನಡೆಸಿದ ಅವರು, ಕ್ಷೇತ್ರಗಳಲ್ಲಿ ನಡೆದ ಮತದಾನ ಪ್ರಕ್ರಿಯೆ ಬಗ್ಗೆ ಮಾಹಿತಿ ಪಡೆದರು. ಕೆಲ ಕ್ಷೇತ್ರಗಳಿಗೆ ಅವರೇ ಖುದ್ದು ಫೋನಾಯಿಸಿ ವಿಚಾರಿಸುತ್ತಿದ್ದರೆ, ಇನ್ನೂ ಕೆಲವೆಡೆ ಅವರಿಗೆ ಕರೆಗಳು ಬರುತ್ತಿದ್ದವು. ಈ ವೇಳೆ ಪ್ರತಿಕ್ರಿಯಿಸಿದ ಅವರು, ಕಳೆದ ಕೆಲ ದಿನಗಳಿಂದ ವಿಶ್ರಾಂತಿ ಇಲ್ಲದೇ ಓಡಾಟದ ಕೆಲಸವಿತ್ತು. ಈಗ ನಿರುಮ್ಮಳರಾಗಿದ್ದೇವೆ. ಮತದಾನ ಪ್ರಮಾಣ ಚನ್ನಾಗಿ ಆಗಿದ್ದು, ಗೆಲ್ಲುವ ವಿಶ್ವಾಸವಿದೆ ಎಂದರು.
ಸುರಪುರಕ್ಕೆ ತೆರಳಿದ ಬಿ.ವಿ.ನಾಯಕ: ಕಾಂಗ್ರೆಸ್-ಜೆಡಿಎಸ್ ಮೈತ್ರಿ ಅಭ್ಯರ್ಥಿ ಬಿ.ವಿ.ನಾಯಕ ಕೂಡ ಬುಧವಾರ ರಿಲ್ಯಾಕ್ಸ್ ಮೂಡ್‌ನಲ್ಲಿದ್ದರು. ಚುನಾವಣೆ ಪ್ರಕ್ರಿಯೆ ಮುಗಿಸಿಕೊಂಡು ತಡರಾತ್ರಿ ಮನೆಗೆ ಬಂದ ಅವರು, ಬೆಳಗ್ಗೆ ತಡವಾಗಿ ಎದ್ದು ಕುಟುಂಬ ಸದಸ್ಯರ ಜತೆ ಕಾಲ ಕಳೆದರು.
ಬೆಳಗ್ಗೆ 11 ಗಂಟೆವರೆಗೆ ಮನೆಯಲ್ಲಿಯೇ ಇದ್ದ ಬಿ.ವಿ.ನಾಯಕ ಮಡದಿ, ಮಕ್ಕಳೊಂದಿಗೆ ಕಾಲ ಕಳೆದರು. ಬಳಿಕ ಮನೆಗೆ ಬಂದ ಕಾರ್ಯಕರ್ತರ ಜತೆಗೆ ಕೆಲಕಾಲ ಚರ್ಚಿಸಿದರು. ನಂತರ ಲಿಂಗಸುಗೂರಿನಲ್ಲಿರುವ ಶಾಸಕ ಡಿ.ಎಸ್.ಹೂಲಗೇರಿ ಅವರ ಮನೆಗೆ ಹೋಗಿ ಚುನಾವಣೆ ಬಗ್ಗೆ ಮಾಹಿತಿ ಪಡೆದರು. ಈ ವೇಳೆ ಅಲ್ಲಿನ ಮುಖಂಡರೊಂದಿಗೆ ಮಾತುಕತೆ ನಡೆಸಿದರು. ಮಧ್ಯಾಹ್ನ ಲಿಂಗಸುಗೂರಿನಿಂದ ಸುರಪುರಕ್ಕೆ ತೆರಳಿದ ಅವರು, ಅಲ್ಲಿ ಸಂಬಂಧಿಕರ ನಿಶ್ಚಿತಾರ್ಥ ಸಮಾರಂಭದಲ್ಲಿ ಪಾಲ್ಗೊಂಡರು ಎಂಬ ಮಾಹಿತಿ ಇದೆ.