ಸುರಪುರ: ರಾಯಚೂರು ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ರಾಜಾ ಅಮರೇಶ್ವರ ನಾಯಕ ಗೆಲುವು ಸಾಧಿಸುತ್ತಿದ್ದಂತೆ ಶಾಸಕ ನರಸಿಂಹ ನಾಯಕ (ರಾಜುಗೌಡ) ಹರ್ಷ ವ್ಯಕ್ತಪಡಿಸಿದ್ದಾರೆ.
ಮತ ಎಣಿಕೆ ಕೇಂದ್ರದಿಂದ ಹೊರ ಬಂದ ಶಾಸಕ ರಾಜುಗೌಡ ಮತ್ತು ಅಭ್ಯರ್ಥಿ ರಾಜಾ ಅಮರೇಶ್ವರ ನಾಯಕ ಹಾಗೂ ಪಕ್ಷದ ಮುಖಂಡ ಎನ್. ಶಂಕ್ರೆಪ್ಪ ಮತ್ತು ಇತರರಿಗೆ ಕಾರ್ಯಕರ್ತರು ಗುಲಾಲ ಎರಚಿ ಸಂಭ್ರಮಿಸಿದರು.
ಈ ವೇಳೆ ಶಾಸಕ ನರಸಿಂಹ ನಾಯಕ ರಾಜುಗೌಡ ಪತ್ರಿಕೆಯೊಂದಿಗೆ ಮಾತನಾಡಿ, ನೀರಿಕ್ಷೆಯಂತೆ ರಾಯಚೂರ ಲೋಕಭಾ ಕ್ಷೇತ್ರದಲ್ಲಿ ನಮ್ಮ ಅಭ್ಯರ್ಥಿ ರಾಜಾ ಅಮರೇಶ್ವರ ನಾಯಕ ಗೆಲುವು ಸಾಧಿಸಿರುವುದು ಹರ್ಷ ತಂದಿದೆ. ಮತದಾರ ಪ್ರಭುಗಳ ಆಶೀರ್ವಾದ ಮತ್ತು ಕಾರ್ಯಕರ್ತರ ಪರಿಶ್ರಮವೇ ಅಭ್ಯರ್ಥಿ ಗೆಲುವಿಗೆ ಕಾರಣ ಎಂದರು.
ಕಾಂಗ್ರೆಸ್ ಭದ್ರಕೋಟೆಯಾಗಿದ್ದ ರಾಯಚೂರ ಲೋಕಸಭೆ ಕ್ಷೇತ್ರದಲ್ಲಿ ನಮ್ಮ ಅಭ್ಯರ್ಥಿ ಗೆಲುವು ಸಾಧಿಸಿದ್ದು ಖುಷಿ ನೀಡಿದೆ. ಈ ನಮ್ಮ ಗೆಲುವು ಕ್ಷೇತ್ರದ ಮತದಾರ ಪ್ರಭುಗಳಿಗೆ ಸಂದ ಜಯವಾಗಿದೆ. ಕ್ಷೇತ್ರದ ಮತದಾರರು ನಮ್ಮ ಮೇಲೆ ವಿಶ್ವಾಸವಿಟ್ಟು ನಮ್ಮ ಅಭ್ಯರ್ಥಿ ಗೆಲುವಿಗೆ ಸಹಕರಿಸಿದ್ದಾರೆ.ಅವರ ನಂಬಿಕೆ, ವಿಶ್ವಾಸಕ್ಕೆ ದಕ್ಕೆ ತರದೆ ಕ್ಷೇತ್ರದ ಅಭಿವೃದ್ಧಿಗೆ ರಾಜಾ ಅಮರೇಶ್ವರ ನಾಯಕ ಶ್ರಮಿಸುತ್ತಾರೆ ಎಂಬ ಭರವಸೆ ಇದೆ ಎಂದು ವಿಶ್ವಾಸ ವ್ಯಕ್ತ ಪಡಿಸಿದರು.
ಕಾಂಗ್ರೆಸ್ ಮುಕ್ತ ರಾಜ್ಯ ನಿರ್ಮಾಣ ಮಾಡಬೇಕು. ದೇಶದಲ್ಲಿ ನರೇಂದ್ರ ಮೋದಿ ಅವರನ್ನು ಮತ್ತೂಮ್ಮೆ ಪ್ರಧಾನಿಯನ್ನಾಗಿ ಮಾಡಬೇಕು ಎಂಬುದು ಪಕ್ಷದ ಸಂಕಲ್ಪವಾಗಿತ್ತು. ಈ ದಿಶೆಯಲ್ಲಿ ರಾಜ್ಯದಲ್ಲಿ ಮಾಜಿ ಮುಖ್ಯಮಂತ್ರಿ ಪಕ್ಷದ ರಾಜ್ಯಧ್ಯಕ್ಷ ಬಿ.ಎಸ್. ಯಡಿಯೂರಪ್ಪನವರ ಮಾರ್ಗ ದರ್ಶನದಲ್ಲಿ ಪಕ್ಷದ ಎಲ್ಲಾ ಮುಖಂಡರು ಒಟ್ಟಾಗಿ ಕೆಲಸ ಮಾಡಿದ್ದೇವೆ. ಈ ಹಿನ್ನೆಲೆಯಲ್ಲಿ ಪಕ್ಷ ಅಭೂತಪೂರ್ವ ಗೆಲುವು ಸಾಧಿಸಲು ಸಾಧ್ಯವಾಯಿತು ಎಂದು ತಿಳಿಸಿದರು.