Advertisement

ಸಂಸ್ಥಾನ ದೊರೆಗೆ ಒಲಿದ ಸಂಸದ ಸ್ಥಾನ

02:58 PM May 24, 2019 | Naveen |

ರಾಯಚೂರು: ಗುರುಗುಂಟಾ ಸಂಸ್ಥಾನದ ದೊರೆ ರಾಜಾ ಅಮರೇಶ್ವರ ನಾಯಕರಿಗೆ ಸಂಸತ್‌ ಪ್ರವೇಶ ಭಾಗ್ಯ ಕಲ್ಪಿಸುವ ಮೂಲಕ ಕ್ಷೇತ್ರದ ಮತದಾರರು ಜೋರಾಗಿಯೇ ಈ ಬಾರಿ ಆಶೀರ್ವದಿಸಿದ್ದಾರೆ.

Advertisement

ಪರಿಶಿಷ್ಟ ಪಂಗಡಕ್ಕೆ ಮೀಸಲಾದ ರಾಯಚೂರು ಲೋಕಸಭೆ ಕ್ಷೇತ್ರದಲ್ಲಿ ನಾಯಕರ ಕದನ ಏರ್ಪಟ್ಟಿತ್ತು. ಹಾಲಿ ಸಂಸದ ಬಿ.ವಿ.ನಾಯಕರಂತೆ ರಾಜಾ ಅಮರೇಶ್ವರ ನಾಯಕರು ಕೂಡ ಸಭ್ಯತೆಗೆ ಹೆಸರಾದ ವ್ಯಕ್ತಿ. ಅದರ ಜತೆಗೆ ಆಗೊಮ್ಮೆ ಈಗೊಮ್ಮೆ ಮುನ್ನೆಲೆಗೆ ಬಂದು ಅಧಿಕಾರ ಅನುಭವಿಸಿದ ಅವರನ್ನು ಜಿಲ್ಲೆಯ ಜನ ಸ್ವೀಕರಿಸಿದ್ದೂ ಉಂಟು ತಿರಸ್ಕರಿಸಿದ್ದೂ ಉಂಟು.

ಸಂಸ್ಥಾನದ ದೊರೆಗಳಾದ ಅವರಿಗೆ ಆಡಳಿತಾತ್ಮಕ ಚಿಂತನೆಗಳ ಜತೆಗೆ ರಾಜಕೀಯ ಪಟ್ಟುಗಳನ್ನು ಅರಿಯಲು ಹೆಚ್ಚು ಕಾಲ ಬೇಕಾಗಲಿಲ್ಲ. ಹೀಗಾಗಿ 1989ರಲ್ಲಿಯೇ ಅವರು ಲಿಂಗಸುಗೂರು ವಿಧಾನಸಭೆ ಕ್ಷೇತ್ರದಿಂದ ಸ್ಪರ್ಧಿಸಿ ಗೆದ್ದಿದ್ದರು. ಬಳಿಕ 1999ರಲ್ಲಿ ಕಲ್ಮಲ ಕ್ಷೇತ್ರದಿಂದ ಸ್ಪರ್ಧಿಸಿ ಗೆಲುವು ದಾಖಲಿಸಿದ್ದರು. ಅಚ್ಚರಿ ವಿಷಯವೆಂದರೆ ಎರಡು ಬಾರಿಯೂ ಸಚಿವ ಸ್ಥಾನ ಲಭಿಸಿತ್ತು. ಆಗ ಅವರು ಅನೇಕ ಜನಪರ ಯೋಜನೆಗಳನ್ನು ಜಾರಿಗೊಳಿಸುವ ಮೂಲಕ ಮನೆ ಮಾತಾಗಿದ್ದರು. ಅದರಲ್ಲಿ ರಾಂಪುರ ಏತ ನೀರಾವರಿ ಯೋಜನೆಯ ಫಲವನ್ನು ಜನ ಇಂದು ಅನುಭವಿಸುತ್ತಿದ್ದಾರೆ.

ಕಾಂಗ್ರೆಸ್‌, ಜೆಡಿಎಸ್‌ನಲ್ಲಿ ಓಡಾಡಿಕೊಂಡಿದ್ದ ಅವರು ಜೆಡಿಎಸ್‌ನಿಂದ 2004ರಲ್ಲಿ ಸ್ಪರ್ಧಿಸಿ ಸೋತಿದ್ದರು. 2013ರಲ್ಲೂ ಗ್ರಾಮೀಣ ಕ್ಷೇತ್ರದಿಂದ ಸ್ಪರ್ಧಿಸಿ ಸೋಲನುಭವಿಸಿದ್ದರು. ಆದರೆ, ಕಳೆದ 2018ರಲ್ಲಿ ವಿಧಾನಸಭೆ ಚುನಾವಣೆಯಿಂದ ದೂರ ಉಳಿದಿದ್ದರು. 2019ರ ಲೋಕಸಭೆ ಚುನಾವಣೆಯಲ್ಲಿ ರಾಯಚೂರು ಕ್ಷೇತ್ರದಲ್ಲಿ ಬಿಜೆಪಿಯಲ್ಲಿ ಸಮರ್ಥ ಅಭ್ಯರ್ಥಿ ಇಲ್ಲದಿರುವುದು ರಾಜಾ ಅಮರೇಶ್ವರ ನಾಯಕರ ರಾಜಕೀಯ ಬದುಕಿನ ಮತ್ತೂಂದು ಪರ್ವಕ್ಕೆ ನಾಂದಿ ಹಾಡಿದಂತಾಗಿದೆ. ಹಲವು ಹೊಸ ಚಿಂತನೆಗಳೊಂದಿಗೆ ಜನರ ಮುಂದೆ ಬಂದಿರುವ ಅವರ ಮೇಲೆಯೂ ಕ್ಷೇತ್ರದ ಜನ ಅಪಾರ ವಿಶ್ವಾಸ ಹೊಂದಿದ್ದಾರೆ. ಆದರೆ, ತಮಗೆ ಸಿಕ್ಕಿರುವ ಈ ಅಧಿಕಾರವನ್ನು ಹೇಗೆ ಬಳಸಿಕೊಳ್ಳುವರು ಎಂದು ಕಾದು ನೋಡಬೇಕಿದೆ.

Advertisement

Udayavani is now on Telegram. Click here to join our channel and stay updated with the latest news.

Next