Advertisement

ಕಾಂಗ್ರೆಸ್‌ ವೇಗಕ್ಕೆ ಬಿಜೆಪಿ ಅಭ್ಯರ್ಥಿ ಕಡಿವಾಣ!

05:18 PM May 01, 2019 | Naveen |

ರಾಯಚೂರು: ಕಳೆದ ಲೋಕಸಭೆ ಚುನಾವಣೆಯಲ್ಲಿ ಕಾಂಗ್ರೆಸ್‌ಗೆ ಒಲವು ತೋರಿದ್ದ ಲಿಂಗಸುಗೂರು ಕ್ಷೇತ್ರದ ಮತದಾರ ಈ ಬಾರಿ ಬದಲಾವಣೆ ಬಯಸಿರುವುದು ಮೇಲ್ನೋಟಕ್ಕೆ ಕಂಡು ಬರುತ್ತಿದೆ. ಹಾಲಿ ಸಂಸದರ ವಿರೋಧಿ ಅಲೆ, ಬಿಜೆಪಿ ಅಭ್ಯರ್ಥಿ ಸ್ಥಳೀಯರು ಎಂಬ ಒಲವು ಮತದಾನದ ಮೇಲೆ ಪರಿಣಾಮ ಬೀರುವ ಲಕ್ಷಣ ತೋರುತ್ತಿವೆ.

Advertisement

ಲಿಂಗಸುಗೂರು ಕ್ಷೇತ್ರ ಹಿಂದೆ ಜೆಡಿಎಸ್‌ ತೆಕ್ಕೆಯಲ್ಲಿತ್ತು. ಈಗ ಕಾಂಗ್ರೆಸ್‌ ಅಧಿಕಾರದಲ್ಲಿದೆ. ಆದರೂ ಬಿಜೆಪಿ ಅಭ್ಯರ್ಥಿ ರಾಜಾ ಅಮರೇಶ್ವರ ನಾಯಕರು ಸ್ಥಳೀಯರು ಎಂಬ ಅಭಿಮಾನ ಹೆಚ್ಚು ಕೆಲಸ ಮಾಡಿದೆ. ಇದೇ ಕಾರಣಕ್ಕೆ ಗುರುಗುಂಟಾ, ಗೆಜ್ಜಲಗಟ್ಟಾ ಎರಡು ಜಿಪಂ ಕ್ಷೇತ್ರಗಳು ಸಂಪೂರ್ಣ ಬಿಜೆಪಿಯತ್ತ ವಾಲಿವೆ ಎನ್ನಲಾಗುತ್ತಿದೆ. ಅದರ ಜತೆಗೆ ಕಾಂಗ್ರೆಸ್‌ ಪ್ರಾಬಲ್ಯದ ಕ್ಷೇತ್ರಗಳಲ್ಲೂ ಬಿಜೆಪಿ ಪೈಪೋಟಿ ನೀಡಿದೆ ಎನ್ನಲಾಗುತ್ತಿದೆ.

ಕ್ಷೇತ್ರದಲ್ಲಿ 2,42,004 ಮತದಾರರಿದ್ದು, 1,46,777 ಮತಗಳು ಚಲಾವಣೆ ಆಗಿವೆ. ಕಳೆದ ಬಾರಿಗೆ ಹೋಲಿಸಿದರೆ ಈ ಬಾರಿ ಹೆಚ್ಚು ಮತದಾನವಾಗಿರುವುದು ವಿಶೇಷ. ಹಾಲಿ ಸಂಸದ ಬಿ.ವಿ.ನಾಯಕ ಕ್ಷೇತ್ರಕ್ಕೆ ಕಾಲಿಟ್ಟಿಲ್ಲ. ಯಾವುದೇ ಅಭಿವೃದ್ಧಿ ಯೋಜನೆಗಳು ಜಾರಿಗೊಳಿಸಿಲ್ಲ ಎಂಬ ಆಕ್ರೋಶ ಹೆಚ್ಚಾಗಿದ್ದು, ಸಾಕಷ್ಟು ವಿರೋಧಿ ಅಲೆ ಕೂಡ ಸೃಷ್ಟಿಯಾಗಿತ್ತು. ಹೀಗಾಗಿ ಸ್ಥಳೀಯ ಕಾಂಗ್ರೆಸ್‌, ಜೆಡಿಎಸ್‌ ನಾಯಕರು ಪ್ರಚಾರಕ್ಕೆ ತೆರಳಿದಾಗ ಜನರ ಪ್ರಶ್ನೆಗಳಿಗೆ ಉತ್ತರಿಸಲಾಗದೆ ಮುಜುಗರ ಎದುರಿಸಿದ ಪ್ರಸಂಗವೂ ನಡೆದಿವೆ. ಇದು ಬಿಜೆಪಿಗೆ ವರವಾಗಿ ಪರಿಣಮಿಸಿದ್ದು, ಕ್ಷೇತ್ರದ ಮಟ್ಟಿಗೆ ಬಿಜೆಪಿ ಮುನ್ನಡೆ ಸಾಧಿಸುವ ಸಾಧ್ಯತೆಗಳಿವೆ. ಕಳೆದ ಲೋಕಸಭೆ ಚುನಾವಣೆಯಲ್ಲಿ ಈ ಕ್ಷೇತ್ರ ಕಾಂಗ್ರೆಸ್‌ಗೆ 11 ಸಾವಿರಕ್ಕೂ ಅಧಿಕ ಲೀಡ್‌ ನೀಡಿತ್ತು.

ಮೈತ್ರಿಯ ಸಾಧಕ ಬಾಧಕ: ಈ ಕ್ಷೇತ್ರದಲ್ಲೂ ಮೈತ್ರಿ ನಿರೀಕ್ಷಿತ ಮಟ್ಟದಲ್ಲಿ ಯಶಸ್ಸು ಕಂಡಿಲ್ಲ ಎನ್ನಲಾಗುತ್ತಿದೆ. ವರಿಷ್ಠರ ಸೂಚನೆ ಮೇರೆಗೆ ಮುಖಂಡರು ಹೊಂದಾಣಿಕೆ ಮಾಡಿಕೊಂಡರೂ ಸ್ಥಳೀಯ ಮಟ್ಟದ ಕಾರ್ಯಕರ್ತರು ಒಗ್ಗೂಡಿಲ್ಲ. ಅಲ್ಲದೇ, ಕಾಂಗ್ರೆಸ್‌ ನಾಯಕರು ಚುನಾವಣೆ ಮುನ್ನ ಕೊನೆ ಎರಡು ದಿನಗಳಲ್ಲಿ ಜೆಡಿಎಸ್‌ ನಾಯಕರನ್ನು ಗಣನೆಗೆ ತೆಗೆದುಕೊಳ್ಳಲಿಲ್ಲ ಎಂಬ ಮಾತುಗಳು ಕೇಳಿ ಬಂದಿವೆ. ಇನ್ನು ಜೆಡಿಎಸ್‌ ಪರಾಜಿತ ಅಭ್ಯರ್ಥಿ ಸಿದ್ಧು ಬಂಡಿ ಸೇರಿದಂತೆ ಅನೇಕ ನಾಯಕರು ಸಾಕಷ್ಟು ಪ್ರಚಾರ ನಡೆಸಿದ್ದರೂ ಅವು ಮತಗಳಾಗಿ ಪರಿವರ್ತಿಸುವುದು ಕಷ್ಟ ಎಂದೇ ಹೇಳಲಾಗುತ್ತಿದೆ.

ಅಭಿವೃದ್ಧಿ ಕೆಲಸಗಳ ರಕ್ಷೆ: ಬಿಜೆಪಿ ಅಭ್ಯರ್ಥಿ ರಾಜಾ ಅಮರೇಶ್ವರ ನಾಯಕ ಅವರು ಈ ಕ್ಷೇತ್ರದ ಸಂಸ್ಥಾನದ ದೊರೆಗಳ ವಂಶದವರು. ಈ ಹಿಂದೆ ಇದೇ ಕ್ಷೇತ್ರದಿಂದ ಗೆದ್ದು ಬಂಧಿಖಾನೆ ಸಚಿವರೂ ಆಗಿದ್ದರು. ನಂದವಾಡಗಿ ಯೋಜನೆಗೆ ತಮ್ಮ ಅವಧಿಯಲ್ಲಿಯೇ ಪ್ರಸ್ತಾವನೆ ಸಲ್ಲಿಸಿದ್ದರು. ರಾಂಪುರ ಏತ ನೀರಾವರಿ ಯೋಜನೆಗೆ ಸಾಕಷ್ಟು ಶ್ರಮಿಸಿದ್ದಾರೆ. ಅಲ್ಲದೇ, ನಷ್ಟದಲ್ಲಿದ್ದ ಹಟ್ಟಿ ಚಿನ್ನದ ಗಣಿ ಲಾಕ್‌ಔಟ್ ಆದಾಗ ಇವರ ಶ್ರಮದಿಂದಲೇ ಅದನ್ನು ಪುನಾರಂಭಿಸಲಾಯಿತು. ತಮ್ಮ ಅವಧಿಯಲ್ಲಿ ಸಾಕಷ್ಟು ಅಭಿವೃದ್ಧಿ ಕೆಲಸ ಕಾರ್ಯಗಳನ್ನು ಮಾಡಿದ್ದಾರೆ ಎಂಬ ಒಲವು ಮತದಾರರಲ್ಲಿದೆ. ಆದರೆ, ಇದೇ ವೇಳೆ ಹಾಲಿ ಸಂಸದರು ಕ್ಷೇತ್ರಕ್ಕೆ ಹೆಚ್ಚಿನ ಕೊಡುಗೆ ನೀಡಿಲ್ಲ ಎಂಬ ಟೀಕೆಗಳು ಬಿಜೆಪಿಗೆ ವರವಾಯಿತು.

Advertisement

ಫಲಿಸೀತೆ ಕಾಂಗ್ರೆಸ್‌ ತಂತ್ರ: ಕ್ಷೇತ್ರದಲ್ಲಿ ಮುನ್ನಡೆ ಸಾಧಿಸಬೇಕು ಎಂಬ ಕಾರಣಕ್ಕೆ ಕಾಂಗ್ರೆಸ್‌ ಸಾಕಷ್ಟು ತಂತ್ರ ಹೆಣೆಯಿತು. ಅಭ್ಯರ್ಥಿ ಬಿ.ವಿ.ನಾಯಕರ ಸಂಬಂಧಿ ಸತೀಶ ಜಾರಕಿಹೊಳಿ ಕ್ಷೇತ್ರದಲ್ಲಿ ಠಿಕಾಣಿ ಹೂಡಿ ಯೋಜನೆಗಳನ್ನು ರೂಪಿಸಿದ್ದರು. ಅಲ್ಲದೇ, ಹಾಲಿ ಶಾಸಕರು ಕೂಡ ಕಾಂಗ್ರೆಸ್‌ನವರೇ ಆಗಿದ್ದು, ಅವರು ಸಾಕಷ್ಟು ಪ್ರಭಾವ ಬೀರಿದ್ದಾರೆ. ಆದರೆ, ಮೋದಿ ಅಲೆ ಮಧ್ಯೆ ಅವರ ತಂತ್ರಗಳು ಎಷ್ಟರ ಮಟ್ಟಿಗೆ ಕೆಲಸ ಮಾಡಿವೆ ಎಂಬುದನ್ನು ಕಾದು ನೋಡಬೇಕು. ಅಲ್ಲದೇ, ಇಲ್ಲಿ ಆರ್‌ಎಸ್‌ಎಸ್‌ ಪ್ರಭಾವವಿದ್ದು, ಅದು ಬಿಜೆಪಿಗೆ ಅನುಕೂಲ ಮಾಡಿಕೊಟ್ಟಿದೆ.

Advertisement

Udayavani is now on Telegram. Click here to join our channel and stay updated with the latest news.

Next