Advertisement

ಸ್ಟ್ರಾಂಗ್‌ ರೂಮ್‌ನಲ್ಲಿ ಅಭ್ಯರ್ಥಿಗಳ ಭವಿಷ್ಯ ಭದ್ರ

05:23 PM Apr 25, 2019 | Naveen |

ರಾಯಚೂರು: ಕಳೆದ ಕೆಲ ದಿನಗಳಿಂದ ಹಿಡಿದಿದ್ದ ಲೋಕಸಭೆ ಚುನಾವಣೆ ಗುಂಗು ಬಿಟ್ಟು ಹೋಗಿದ್ದು, ಈಗ ಎಲ್ಲರ ಚಿತ್ತ ಫಲಿತಾಂಶದತ್ತ ನೆಟ್ಟಿದೆ. ಇತ್ತ ಅಭ್ಯರ್ಥಿಗಳ ಭವಿಷ್ಯ ಸ್ಟ್ರಾಂಗ್‌ ರೂಮ್‌ಗಳಲ್ಲಿ ಭದ್ರವಾಗಿದೆ.

Advertisement

ಮಂಗಳವಾರ ಜಿಲ್ಲಾದ್ಯಂತ ಮತದಾನ ಪ್ರಕ್ರಿಯೆ ಮುಗಿದಿದ್ದು, ಮತಯಂತ್ರಗಳನ್ನು ನಗರದ ಎಲ್ವಿಡಿ ಮತ್ತು ಎಸ್‌ಆರ್‌ಪಿಯು ಕಾಲೇಜಿನ ಕೊಠಡಿಗಳಲ್ಲಿರುವ ಸ್ಟ್ರಾಂಗ್‌ರೂಮ್‌ಗಳ‌ಲ್ಲಿ ಸೇರಿಸಿ ಬೀಗ ಜಡಿಯಲಾಯಿತು. ರಾಯಚೂರು ಲೋಕಸಭೆ ಕ್ಷೇತ್ರ ವ್ಯಾಪ್ತಿಯ ಎಂಟು ವಿಧಾನಸಭೆ ಕ್ಷೇತ್ರಗಳಾದ ರಾಯಚೂರು ನಗರ, ರಾಯಚೂರು ಗ್ರಾಮೀಣ, ಮಾನ್ವಿ, ಲಿಂಗಸುಗೂರು, ದೇವದುರ್ಗ ಮತ್ತು ಯಾದಗಿರಿ ಜಿಲ್ಲೆಯ ಯಾದಗಿರಿ, ಸುರಪುರ ಮತ್ತು ಶಹಾಪುರ ಕ್ಷೇತ್ರಗಳ ಎಲ್ಲ ಮತಗಟ್ಟೆಗಳ ಮತಯಂತ್ರಗಳನ್ನು ಬಿಗಿ ಭದ್ರತೆಯಲ್ಲಿ ಸ್ಟ್ರಾಂಗ್‌ ರೂಮ್‌ ಸೇರಿಸಲಾಯಿತು.

ಯಾವುದೇ ಆಹಿತಕರ ಘಟನೆಗಳಿಗೆ ಆಸ್ಪದವಾಗದಂತೆ ಶಾಂತಿ ಸುವ್ಯವಸ್ಥೆ ಕಾಪಾಡುವ ಹಿತದೃಷ್ಟಿಯಿಂದ ಮಂಗಳವಾರ ರಾತ್ರಿ 7ರಿಂದ ಮೇ 24ರ ಬೆಳಗ್ಗೆ 7 ರವರೆಗೆ ರಾಯಚೂರು ನಗರದ ಎಲ್ವಿಡಿ ಮತ್ತು ಎಸ್‌.ಆರ್‌.ಪಿ.ಯು. ಕಾಲೇಜುಗಳ ಪ್ರದೇಶ ವ್ಯಾಪ್ತಿಯ ಸುತ್ತಮುತ್ತಲಿನ 100 ಮೀ. ವ್ಯಾಪ್ತಿಯಲ್ಲಿ ಕಲಂ 144 ರನ್ವಯ ನಿಷೇಧಾಜ್ಞೆ ಜಾರಿಗೊಳಿಸಲಾಗಿದೆ. ಎಲ್ಲ ಸ್ಟ್ರಾಂಗ್‌ ರೂಮ್‌ಗಳಿಗೆ ಅಗತ್ಯ ಭದ್ರತಾ ಸಿಬ್ಬಂದಿಯನ್ನು ನಿಯೋಜಿಸಲಾಗಿದೆ. ಎಲ್ಲ ಕಡೆ ಸಿಸಿ ಕ್ಯಾಮೆರಾಗಳನ್ನು ಅಳವಡಿಸಲಾಗಿದೆ.

ಜಿಲ್ಲಾ ಚುನಾವಣಾಧಿಕಾರಿಯೂ ಆಗಿರುವ ಜಿಲ್ಲಾಧಿಕಾರಿ ಶರತ್‌ ಬಿ., ಅಪರ ಜಿಲ್ಲಾಧಿಕಾರಿ ಟಿ.ವೆಂಕಟೇಶ ಸೇರಿ ಜಿಲ್ಲಾಮಟ್ಟದ ಅಧಿಕಾರಿಗಳು ಹಾಗೂ ಚುನಾವಣಾ ಸಿಬ್ಬಂದಿ ಸ್ಥಳಕ್ಕೆ ಭೇಟಿ ನೀಡಿ ಪ್ರಕ್ರಿಯೆಯನ್ನು ವೀಕ್ಷಿಸಿದರು.

ಮತದಾನ ವಿವರ: ರಾಯಚೂರು ಲೋಕಸಭೆ ಕ್ಷೇತ್ರಕ್ಕೆ ಮಂಗಳವಾರ ನಡೆದ ಚುನಾವಣೆಯಲ್ಲಿ ಶೇ. 57.91ರಷ್ಟು ಮತದಾನವಾಗಿದೆ. ಕ್ಷೇತ್ರ ವ್ಯಾಪ್ತಿಯಲ್ಲಿ ಒಟ್ಟು 19,27,758 ಮತದಾರರ ಪೈಕಿ 11,16,431 ಜನ ತಮ್ಮ ಹಕ್ಕು ಚಲಾಯಿಸಿದ್ದಾರೆ.

Advertisement

ಸುರಪುರ ಕ್ಷೇತ್ರದಲ್ಲಿ 81,064 ಪುರುಷರು ಮತ್ತು 77,623 ಮಹಿಳೆಯರು ಮತದಾನ ಮಾಡಿದ್ದಾರೆ. ಶಹಾಪುರ ಕ್ಷೇತ್ರದಲ್ಲಿ 68,955 ಪುರುಷರು, 63,203 ಮಹಿಳೆಯರು ಹಕ್ಕು ಚಲಾಯಿಸಿದ್ದಾರೆ. ಯಾದಗಿರಿ ಕ್ಷೇತ್ರದಲ್ಲಿ 68,523 ಪುರುಷರು ಮತ್ತು 65,541 ಮಹಿಳೆಯರು, ರಾಯಚೂರು ಗ್ರಾಮೀಣ ಕ್ಷೇತ್ರದಲ್ಲಿ 71,289 ಪುರುಷರು, 72,272 ಮಹಿಳೆಯರು ಮತದಾನ ಮಾಡಿದ್ದಾರೆ. ರಾಯಚೂರು ನಗರ ಕ್ಷೇತ್ರದಲ್ಲಿ 65,304 ಪುರುಷರು, 61,279 ಮಹಿಳೆಯರು ಮತದಾನ ಮಾಡಿದ್ದಾರೆ. ಮಾನ್ವಿ ಕ್ಷೇತ್ರದಲ್ಲಿ 69,950 ಪುರುಷರು, 66,176 ಮಹಿಳೆಯರು, ದೇವದುರ್ಗ ಕ್ಷೇತ್ರದಲ್ಲಿ 70,865 ಪುರುಷರು, 67,591 ಮಹಿಳೆಯರು ಮತದಾನ ಮಾಡಿದ್ದಾರೆ. ಲಿಂಗಸುಗೂರು ಕ್ಷೇತ್ರದಲ್ಲಿ 75,202 ಪುರುಷರು ಮತ್ತು 71,575 ಮಹಿಳೆಯರು ಮತ ಚಲಾಯಿಸಿದ್ದಾರೆ ಎಂದು ಜಿಲ್ಲಾ ಚುನಾವಣಾಧಿಕಾರಿ ಶರತ್‌ ಬಿ. ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next