ಸಿದ್ಧಯ್ಯಸ್ವಾಮಿ ಕುಕನೂರು
ರಾಯಚೂರು: ಒಂದು ತೊಟ್ಟು ರಕ್ತ ಜೀವ ಉಳಿಸಬಲ್ಲುದು. ಇಂತಹ ರಕ್ತದ ಅಗತ್ಯತೆಯನ್ನು ಮನವರಿಕೆ ಮಾಡುವುದರೊಂದಿಗೆ ಜೀವ ಉಳಿಸುವ ಮಹತ್ಕಾರ್ಯದಲ್ಲಿ ತೊಡಗಿಸಿಕೊಂಡಿವೆ ‘ವಾಟ್ಸ್‌ಆ್ಯಪ್ ಗ್ರೂಪ್’ಗಳು.
ಜಿಲ್ಲೆಯಲ್ಲಿ ನಿತ್ಯ ಒಂದಿಲ್ಲೊಂದು ಕಡೆ ರಕ್ತದ ಅಗತ್ಯತೆ ಏರ್ಪಡುತ್ತಲೇ ಇರುತ್ತದೆ. ಕೆಲವೊಮ್ಮೆ ರಕ್ತದ ಅಗತ್ಯತೆ ಹೆಚ್ಚಾಗಿರುತ್ತದೆ. ಸಕಾಲಕ್ಕೆ ರಕ್ತ ಸಿಗದಿದ್ದರೆ ಜೀವಕ್ಕೆ ಹಾನಿಯಾದ ನಿದರ್ಶನಗಳಿಗೇನೂ ಕಡಿಮೆಯಿಲ್ಲ. ಅಂಥ ವೇಳೆ ಜಾತಿ -ಧರ್ಮ-ಕುಲ ಭೇದ ಮೀರಿ ರಕ್ತದಾನ ಮಾಡಿ ಜೀವ ಉಳಿಸುತ್ತಿರುವ ಅನೇಕರು ತಮಗರಿವಿಲ್ಲದೇ ದೊಡ್ಡ ಸೇವೆ ನೀಡುತ್ತಿದ್ದು, ಇದಕ್ಕೆಲ್ಲ ‘ವಾಟ್ಸ್‌ಆ್ಯಪ್ ಗ್ರೂಪ್’ಗಳು ಕೊಂಡಿಯಂತೆ ಕೆಲಸ ಮಾಡುತ್ತಿವೆ.
ಅನೇಕ ಗ್ರೂಪ್‌ಗ್ಳಲ್ಲಿ ರಕ್ತದ ಅಗತ್ಯ ಇರುವವರು ಒಂದು ಸಂದೇಶ ಹಾಕಿದರೆ ಆ ಸಂದೇಶ ಕೆಲವೆಡೆ ಹರಿದಾಡಿ ಸಮೀಪದಲ್ಲಿರುವ ಯಾರಾದರೂ ಸ್ಪಂದಿಸುತ್ತಿದ್ದಾರೆ. ವಾಟ್ಸ್‌ಆ್ಯಪ್ ಸಂದೇಶ ನೋಡಿಯೇ ಬ್ಲಿಡ್ ಬ್ಯಾಂಕ್‌ಗೆ ತೆರಳಿ ರಕ್ತ ನೀಡಿದ್ದಾರೆ. ಅವರ ಸೇವೆ ಮೆಚ್ಚಿ ಬ್ಲಿಡ್ ಬ್ಯಾಂಕ್ ಶ್ಲಾಘನೀಯ ಪತ್ರ ನೀಡಿದೆ. ಇದು ಕೇವಲ ಒಂದು ಉದಾಹರಣೆಯಷ್ಟೇ. ನಿತ್ಯ ಒಂದಿಲ್ಲೊಂದು ಕಡೆ ಅಪರಿಚಿತರು ರಕ್ತದಾನ ಮಾಡಿ ಕಷ್ಟದಲ್ಲಿರುವವರಿಗೆ ನೆರವಾಗುತ್ತಿದ್ದಾರೆ.
ಕೊಟ್ಟು ಪಡೆಯುವ ಪದ್ಧತಿ: ರಕ್ತದ ಅಗತ್ಯತೆ ಹೆಚ್ಚಲು ಮುಖ್ಯ ಕಾರಣ ಸಂಗ್ರಹ ಕೊರತೆ. ಎಲ್ಲ ಬ್ಯಾಂಕ್‌ಗಳಲ್ಲಿ ಹಣ ನೀಡಿ ರಕ್ತ ಪಡೆಯಬೇಕು. ಇಲ್ಲವೇ ಪರ್ಯಾಯವಾಗಿ ರಕ್ತ ನೀಡಿ ನಮಗೆ ಬೇಕಾದ ಗ್ರೂಪ್ ರಕ್ತ ಪಡೆಯಬೇಕು. ಕೆಲವೊಮ್ಮೆ ಓ ನೆಗೆಟಿವ್‌ನಂಥ ಅಪರೂಪದ ರಕ್ತ ಸಿಗುವುದು ತುಂಬಾ ವಿರಳ. ಅಂಥ ಕಡೆ ಹಣ ನೀಡಿದರೂ ಸಿಗುವುದು ಕಷ್ಟ. ಆಗ ನಮ್ಮ ರಕ್ತ ನೀಡಿ ಪರ್ಯಾಯ ರಕ್ತ ಪಡೆಯಬೇಕಿದೆ. ಇದು ಎಲ್ಲ ಆಸ್ಪತ್ರೆ ಬ್ಯಾಂಕ್‌ಗಳಲ್ಲಿ ನಡೆಯುತ್ತಿದೆ. ಇನ್ನು ಡೆಂಘೀ ಜ್ವರದಿಂದ ಬಳಲುವ ರೋಗಿಗಳಿಗೆ ಪ್ಲೇಟ್ಲೆಟ್ಸ್ ದಿಢೀರ್ ಕುಸಿತ ಕಾಣುವ ಸಾಧ್ಯತೆ ಇರುತ್ತದೆ. ಆ ಕ್ಷಣಕ್ಕೆ ತುರ್ತಾಗಿ ರಕ್ತ ಏರಿಸುವ ಸನ್ನಿವೇಶ ನಿರ್ಮಾಣವಾಗುತ್ತದೆ. ಅಂಥ ಕಡೆ ರಕ್ತದ ಅಗತ್ಯತೆ ತೀವ್ರವಾಗಿರುತ್ತದೆ ಎನ್ನುತ್ತಾರೆ ಬ್ಲಿಡ್ ಬ್ಯಾಂಕ್ ಸಿಬ್ಬಂದಿ.
ಯಾವುದೋ ಕೆಲಸದ ನಿಮಿತ್ತ ರಾಯಚೂರಿಗೆ ಆಗಮಿಸಿದ್ದೆವು. ವಾಟ್ಸ್‌ಆ್ಯಪ್‌ನಲ್ಲಿ ಓ ಪಾಸಿಟಿವ್ ರಕ್ತ ಬೇಕಿದೆ ಎಂಬ ಮಾಹಿತಿ ನೋಡಿ ನಗರದ ರಾಯಚೂರು ಬ್ಲಿಡ್ ಬ್ಯಾಂಕ್‌ನಲ್ಲಿ ರಕ್ತದಾನ ಮಾಡಿದೆವು. ರಕ್ತದಾನದಿಂದ ಮತ್ತೂಬ್ಬರ ಜೀವ ಉಳಿಯುತ್ತದೆ ಎಂದರೆ ಅದಕ್ಕಿಂತ ಒಳ್ಳೆಯ ಕೆಲಸ ಏನಿದೆ.
•
ಚನ್ನಬಸಯ್ಯ ಮಠಪತಿ,
ಗಬ್ಬೂರು ಗ್ರಾಪಂ ಅಧ್ಯಕ್ಷ
ಈಚೆಗೆ ಯುವಕರು ಮೊಬೈಲ್ ಸಂದೇಶ ನೋಡಿ ರಕ್ತದಾನ ಮಾಡಲು ಮುಂದೆ ಬರುತ್ತಿರುವುದು ನಿಜಕ್ಕೂ ಒಳ್ಳೆಯ ಬೆಳವಣಿಗೆ. ಶನಿವಾರ ಕೂಡ ತುರ್ತು ಅಗತ್ಯ ಎಂದು ಒಂದು ಸಂದೇಶ ಹಾಕಿದ್ದಕ್ಕೆ ನಾಲ್ವರು ಬಂದು ರಕ್ತದಾನ ಮಾಡಿದರು. ಅವರಿಗೆ ಅಭಿನಂದನೆ ಪತ್ರ ನೀಡಿ ಗೌರವಿಸಲಾಯಿತು. ರಕ್ತದಾನ ಮಹತ್ವ ಇನ್ನೂ ಹೆಚ್ಚಿನ ಮಟ್ಟದಲ್ಲಿ ಆಗಬೇಕು.
•
ವೀರರಾಜು,
ಮುಖ್ಯಸ್ಥ, ರಾಯಚೂರು ಬ್ಲಿಡ್ ಬ್ಯಾಂಕ್