Advertisement

2.5 ಕೋಟಿ ರೂ. ಗ್ರಂಥಾಲಯ ಕರ ಬಾಕಿ!

02:53 PM Oct 18, 2019 | Naveen |

ರಾಯಚೂರು: ಸಾರ್ವಜನಿಕರಿಂದ ಸಂಗ್ರಹಿಸಿರುವ ತೆರಿಗೆಯಲ್ಲಿ ಶೇ.6ರಷ್ಟನ್ನು ಗ್ರಂಥಾಲಯ ನಿರ್ವಹಣೆಗೆ ನೀಡಬೇಕು ಎಂಬ ನಿಯಮವನ್ನು ಜಿಲ್ಲೆಯ ಸ್ಥಳೀಯ ಸಂಸ್ಥೆಗಳು ಗಾಳಿಗೆ ತೂರಿವೆ. ಬರೋಬ್ಬರಿ 2.5 ಕೋಟಿ ರೂ. ಕರ ಬಾಕಿ ಉಳಿಸಿಕೊಂಡಿದ್ದು, ಗ್ರಂಥಾಲಯಗಳು ನಿರ್ವಹಣೆ ಸಂಕಷ್ಟ ಎದುರಿಸುತ್ತಿವೆ.

Advertisement

ನಗರಸಭೆ, ಪುರಸಭೆ, ಪಟ್ಟಣ ಪಂಚಾಯಿತಿ ಹಾಗೂ ಗ್ರಾಮ ಪಂಚಾಯಿತಿಗಳು ಸಂಗ್ರಹಿಸುವ ತೆರಿಗೆಯಲ್ಲಿ ಶೇ.6ರಷ್ಟನ್ನು ಗ್ರಂಥಾಲಯಗಳ ನಿರ್ವಹಣೆಗೆ ನೀಡಬೇಕಿದೆ. ಅದರಲ್ಲಿ ಸ್ಥಳೀಯ ಸಂಸ್ಥೆಗಳು ಶೇ.2ರಷ್ಟನ್ನು ಸೇವಾ ಶುಲ್ಕ ಎಂದು ಕಡಿತಗೊಳಿಸಿ ಉಳಿದ ಹಣವನ್ನು ಪಾವತಿಸಬೇಕು. ಆದರೆ, ಜಿಲ್ಲೆಯಲ್ಲಿ ಅಂದಾಜು 3 ಕೋಟಿ ರೂ. ಗ್ರಂಥಾಲಯ ಕರ ಸಂಗ್ರಹವಾಗುತ್ತಿದ್ದು, ಅದರಲ್ಲಿ ಕನಿಷ್ಠ 2 ಕೋಟಿ ರೂ. ಗ್ರಂಥಾಲಯಗಳ ನಿರ್ವಹಣೆಗೆಂದೇ ನೀಡಬೇಕಿದೆ. ಆದರೆ, ಈಗ ಕೇವಲ 40 ಲಕ್ಷ ರೂ. ಮಾತ್ರ ನೀಡುತ್ತಿದ್ದು, ಅದರಿಂದ ಯಾವುದೇ ಹೊಸ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲು ಆಗುತ್ತಿಲ್ಲ.

ಸ್ಪಂದಿಸದ ಮುಖ್ಯಾಧಿಕಾರಿಗಳು: ವರ್ಷ ಮುಗಿಯುತ್ತ ಬಂದರೂ ಯಾವ ಸ್ಥಳೀಯ ಸಂಸ್ಥೆಯಿಂದಲೂ ಬಿಡಿಗಾಸು ಬಂದಿಲ್ಲ ಎನ್ನುತ್ತಾರೆ ಗ್ರಂಥಾಲಯಾ ಧಿಕಾರಿ. ಸಿಂಧನೂರು ನಗರಸಭೆಯಿಂದಲೇ 70 ಲಕ್ಷ ರೂ. ಬಾಕಿ ಬರಬೇಕಿದೆ. ರಾಯಚೂರು ನಗರಸಭೆ 30 ಲಕ್ಷ ರೂ. ಪಾವತಿಸಬೇಕಿದ್ದರೆ, ಮಾನ್ವಿ ಪುರಸಭೆಯಿಂದ 25 ಲಕ್ಷ ರೂ., ದೇವದುರ್ಗ ಪಟ್ಟಣ ಪಂಚಾಯಿತಿಯಿಂದ 25
ಲಕ್ಷ ರೂ. ಹಾಗೂ ಲಿಂಗಸುಗೂರು ಪುರಸಭೆಯಿಂದ 12 ಲಕ್ಷ ರೂ. ಬಾಕಿ ಬರಬೇಕಿದೆ. ಈ ಕುರಿತು ಯೋಜನಾ ನಿರ್ದೇಶಕರು ಎಲ್ಲ ಸ್ಥಳೀಯ ಸಂಸ್ಥೆಗಳ ಮುಖ್ಯಾಧಿಕಾರಿಗಳ ಜತೆ ಈಗಾಗಲೇ ಸಾಕಷ್ಟು ಪತ್ರ ವ್ಯವಹಾರ ನಡೆಸಿದ್ದಾರೆ. ಆದರೂ ಯಾರೊಬ್ಬರು ಕೂಡ ಸ್ಪಂದಿಸಿಲ್ಲ.

ಪೇಪರ್‌ ಖರೀದಿಗೂ ಹಣವಿಲ್ಲ: ಜಿಲ್ಲೆಯಲ್ಲಿ 158 ಗ್ರಾಮ ಪಂಚಾಯಿತಿಗಳಲ್ಲಿ ಗ್ರಂಥಾಲಯಗಳಿದ್ದರೆ, 12 ನಗರ ಗ್ರಂಥಾಲಯಗಳಿವೆ. 20 ಅಲೆಮಾರಿ ಸಮುದಾಯ ಗ್ರಂಥಾಲಯಗಳಿವೆ. ಅದರ ಜತೆಗೆ ವಾಚನಾಯಲಯಗಳನ್ನು ನಡೆಸಲಾಗುತ್ತಿದೆ. ಗ್ರಾಮ ಪಂಚಾಯಿತಿಗಳ ಗ್ರಂಥಾಲಯಗಳ ಸಿಬ್ಬಂದಿಗೆ ಈವರೆಗೆ ಸರ್ಕಾರದಿಂದಲೇ ವೇತನ ಜಾರಿಯಾಗುತ್ತಿತ್ತು. ಉಳಿದಂತೆ ತೆರಿಗೆ ಹಣದಿಂದ ನಿರ್ವಹಣೆ ಮಾಡಬೇಕಿತ್ತು. ಆದರೆ, ನಗರ ಗ್ರಂಥಾಲಯಗಳಲ್ಲಿ ಮಾತ್ರ ಕಾಯಂ ಸಿಬ್ಬಂದಿ ಹೊರತಾಗಿಸಿ ಉಳಿದ ಸಿಬ್ಬಂದಿ ವೇತನ ಸಹಿತ ಎಲ್ಲ ಖರ್ಚು ವೆಚ್ಚಗಳನ್ನು ತೆರಿಗೆ ಹಣದಲ್ಲೇ ನಿರ್ವಹಿಸಬೇಕು. ವಿದ್ಯುತ್‌ ಬಿಲ್‌ ಪಾವತಿ, ಸ್ವತ್ಛತೆ ಎಲ್ಲದಕ್ಕೂ ಹಣ ಬೇಕಿದೆ. ಹೆಚ್ಚುವರಿ ಪತ್ರಿಕೆಗಳನ್ನು ಖರೀದಿಸಬೇಕಾದರೂ ಹಣವಿಲ್ಲದ ಪರಿಸ್ಥಿತಿ ಎದುರಿಸುವಂತಾಗಿದೆ.

ಆಡಿಟ್‌ನಲ್ಲಿ ತಪ್ಪು ಮಾಹಿತಿ: ಎಲ್ಲ ಸ್ಥಳೀಯ ಸಂಸ್ಥೆಗಳು ಪ್ರತಿ ವರ್ಷ ಆಡಿಟ್‌ ಮಾಡಿಸುತ್ತವೆ. ಆಗ ಗ್ರಂಥಾಲಯ ತೆರಿಗೆ ಹಣವನ್ನು ದುರ್ಬಳಕೆ ಮಾಡಿಕೊಂಡಿರುವ ಬಗ್ಗೆ ತಿಳಿಸುತ್ತಿಲ್ಲ. ಕೋಟ್ಯಂತರ ರೂ. ಹಣದ ಬಗ್ಗೆ ಸ್ಪಷ್ಟ
ವಿವರ ನೀಡುತ್ತಿಲ್ಲ. ಇದು ಅಕ್ಷಮ್ಯ ಅಪರಾಧ ಎಂದು ಸರ್ಕಾರದ ಸುತ್ತೋಲೆಯಲ್ಲಿಯೇ ಇದೆ. ಆದರೂ ಸ್ಥಳೀಯ ಸಂಸ್ಥೆಗಳು ಮಾತ್ರ ಕಿಂಚಿತ್ತೂ ಲೆಕ್ಕಿಸುತ್ತಿಲ್ಲ ಎಂಬುದು ಗ್ರಂಥಾಲಯ ಅಧಿಕಾರಿಗಳ ವಿವರಣೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next