Advertisement

ಉಪನ್ಯಾಸಕರ ನೇಮಕಾತಿಯಲ್ಲಿ ಹೈಕ ಭಾಗಕ್ಕೆ ಅನ್ಯಾಯ

03:07 PM Jun 07, 2019 | Team Udayavani |

ರಾಯಚೂರು: ಕಾಲೇಜು ಉಪನ್ಯಾಸಕರ ನೇಮಕಾತಿಯಲ್ಲಿ ಕರ್ನಾಟಕ ಪರೀಕ್ಷಾ ಪ್ರಾಧಿಕಾರದ ನಡೆಯಿಂದ ಹೈದರಾಬಾದ್‌ ಕರ್ನಾಟಕ ಭಾಗದ ಅಭ್ಯರ್ಥಿಗಳಿಗೆ ವಂಚನೆಯಾಗುತ್ತಿದ್ದು, ಈ ಕುರಿತು ನಿಯೋಗ ತೆಗೆದುಕೊಂಡು ಹೋಗಿ ಪ್ರಾಧಿಕಾರದ ಅಧ್ಯಕ್ಷರಿಗೆ ಹಾಗೂ ಮುಖ್ಯಮಂತ್ರಿಗೆ ಮನವರಿಕೆ ಮಾಡುವುದಾಗಿ ಹೈದರಾಬಾದ್‌ ಕರ್ನಾಟಕ ಹೋರಾಟ ಸಮಿತಿ ರಾಜ್ಯ ಉಪಾಧ್ಯಕ್ಷ ಡಾ| ರಜಾಕ್‌ ಉಸ್ತಾದ್‌ ತಿಳಿಸಿದರು.

Advertisement

ನಗರದ ಪತ್ರಿಕಾ ಭವನದಲ್ಲಿ ಗುರುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಕರ್ನಾಟಕ ಪರೀಕ್ಷಾ ಪ್ರಾಧಿಕಾರವು ಉಪನ್ಯಾಸಕರ ನೇಮಕಾತಿ ಹಿನ್ನೆಲೆಯಲ್ಲಿ 1:2 ಅನುಪಾತದಡಿ ಮೆರಿಟ್ ಪಟ್ಟಿ ಪ್ರಕಟಿಸಿದೆ. ಇದರಲ್ಲಿ ಸಾಮಾನ್ಯ ವಿಭಾಗದ ಕೋಟಾದಡಿ ಮಾತ್ರ ಹೈ-ಕ ಅಭ್ಯರ್ಥಿಗಳನ್ನು ಪರಿಗಣಿಸಿ, ಉಳಿದ ಜಾತಿ ಮೀಸಲಾತಿ ಕೋಟಾದಡಿ ಪರಿಗಣಿಸಿಲ್ಲ. ರಾಜ್ಯಮಟ್ಟದಲ್ಲಿ ಅತೀ ಹೆಚ್ಚು ಅಂಕ ಪಡೆದರೂ ಸ್ಥಳೀಯ ವೃಂದದ ಪಟ್ಟಿಗೆ ಸೇರಿಸುವ ಮೂಲಕ ಅವಕಾಶ ವಂಚಿತರನ್ನಾಗಿ ಮಾಡಲಾಗುತ್ತಿದೆ ಎಂದು ದೂರಿದರು.

ಇದರಿಂದ ಹೈ-ಕ ಭಾಗದ ಕಡಿಮೆ ಅಂಕ ಪಡೆದ ಅಭ್ಯರ್ಥಿಗಳು ಮೆರಿಟ್ ಪಟ್ಟಿಯಿಂದ ಹೊರಗುಳಿಯುವಂತಾಗಿದೆ. 2015ರಲ್ಲಿ ಪದವಿ ಕಾಲೇಜಿನ ಸಹಾಯಕ ಪ್ರಾಧ್ಯಾಪಕರ ಹುದ್ದೆ ಭರ್ತಿ ಮಾಡುವಾಗ ಮೊದಲು ಹೈ-ಕ ಭಾಗದ ಅಭ್ಯರ್ಥಿಗಳನ್ನು ಸ್ಥಳೀಯ ವೃಂದದಲ್ಲಿ ಖಾಲಿ ಇರುವ ಹುದ್ದೆಗಳಲ್ಲಿ ಮಾತ್ರ ಪರಿಗಣಿಸಿ ಮೆರಿಟ್ ಪಟ್ಟಿಯನ್ನು ಪ್ರಕಟಿಸಲಾಗಿತ್ತು. 2016ರ ಆದೇಶದ ನಂತರ ಮೆರಿಟ್ ಪಟ್ಟಿ ಬದಲಿಸಿ ಮೆರಿಟ್ ಇರುವಂಥ ಹೈ-ಕದ ಅಭ್ಯರ್ಥಿಗಳನ್ನು ಮಿಕ್ಕುಳಿದ ವೃಂದದ ಪಟ್ಟಿಯಲ್ಲಿ ಪರಿಗಣಿಸಲಾಗಿತ್ತು. ಇದರಿಂದ 140 ಅಭ್ಯರ್ಥಿಗಳು ಆಯ್ಕೆಯಾಗಿದ್ದರು. ಇದನ್ನು ಪ್ರಶ್ನಿಸಿ ಇತರೆ ಪ್ರದೇಶದ ಅಭ್ಯರ್ಥಿಗಳು ಕರ್ನಾಟಕ ಆಡಳಿತಾತ್ಮಕ ನ್ಯಾಯಮಂಡಳಿಗೆ ಹೈ-ಕದ 314 ಅಭ್ಯರ್ಥಿಗಳ ವಿರುದ್ಧ ದೂರು ದಾಖಲಿಸಿ ನೇಮಕಾತಿ ತಡೆಹಿಡಿದಿದ್ದರು. ಕೊನೆಗೆ ಕೆಎಟಿ ಹೈ-ಕ ಅಭ್ಯರ್ಥಿಗಳ ಪರ ತೀರ್ಪು ನೀಡಿದ್ದರಿಂದ 314 ಅಭ್ಯರ್ಥಿಗಳು ಸಹಾಯಕ ಪ್ರಾಧ್ಯಾಪಕರಾಗಿ ನೇಮಕಗೊಂಡಿದ್ದಾರೆ. ಮಿಕ್ಕುಳಿದ ವೃಂದದಲ್ಲಿ ಆಯ್ಕೆಯಾಗಲು ಅರ್ಹರು ಎಂದು ಕೆಎಟಿ ತಿಳಿಸಿದ್ದರೂ ಕರ್ನಾಟಕ ಪರೀಕ್ಷಾ ಪ್ರಾಧಿಕಾರ ಸರ್ಕಾರ ಹಾಗೂ ಕೆಎಟಿ ತೀರ್ಪಿನ ವಿರುದ್ಧ ನಡೆಯುತ್ತಿದೆ ಎಂದು ದೂರಿದರು. ಸಮಿತಿ ಸದಸ್ಯರಾದ ಡಾ| ಶರಣಬಸವ ಪಾಟೀಲ ಜೋಳದಹೆಡಗಿ, ಮಹ್ಮದ್‌ ರಫಿ ಇದ್ದರು.

ಕೆಇಎ ಪ್ರಕಟಿಸಿರುವ ಮೆರಿಟ್ ಪಟ್ಟಿಯನ್ನು ರದ್ದುಗೊಳಿಸಿ ಸರ್ಕಾರದ ಆದೇಶದಂತೆ ಹಾಗೂ ಕೆಎಟಿ ತೀರ್ಪಿನಂತೆ ಹೈ-ಕ ಅಭ್ಯರ್ಥಿಗಳನ್ನು ಮೆರಿಟ್ ಆಧಾರದ ಮೇಲೆ ಮಿಕ್ಕುಳಿದ ವೃಂದದಲ್ಲಿ ಪರಿಗಣಿಸಿ ಹೊಸದಾಗಿ ಮೆರಿಟ್ ಪಟ್ಟಿಯನ್ನು ಪ್ರಕಟಿಸಬೇಕು.
ಡಾ| ರಜಾಕ್‌ ಉಸ್ತಾದ್‌
ಹೈಕ ಹೋರಾಟ ಸಮಿತಿ ರಾಜ್ಯ ಉಪಾಧ್ಯಕ್ಷ

Advertisement

Udayavani is now on Telegram. Click here to join our channel and stay updated with the latest news.

Next