Advertisement

ಕೃಷ್ಣಾರ್ಭಟಕ್ಕೆ ಜನ ತತ್ತರ

10:42 AM Aug 03, 2019 | Naveen |

ರಾಯಚೂರು: ಮಹಾರಾಷ್ಟ್ರದಲ್ಲಿ ಸುರಿದ ಭಾರೀ ಮಳೆಗೆ ಜಿಲ್ಲೆಯ ಕೃಷ್ಣಾ ನದಿ ಧುಮ್ಮುಕ್ಕಿ ಹರಿಯುತ್ತಿದೆ. ನದಿ ದಡದ ಹಳ್ಳಿಗಳಲ್ಲಿ ಪ್ರವಾಹ ಭೀತಿ ಎದುರಾಗಿದೆ.

Advertisement

ಯಾದಗಿರಿ ಜಿಲ್ಲೆ ನಾರಾಯಣಪುರ ಜಲಾಶಯದಿಂದ ಸತತ ಮೂರ್‍ನಾಲ್ಕು ದಿನಗಳಿಂದ ಸರಾಸರಿ ಎರಡು ಲಕ್ಷ ಕ್ಯೂಸೆಕ್‌ ನೀರನ್ನು ನದಿಗೆ ಹರಿಸಲಾಗುತ್ತಿದ್ದು, ಅಪಾಯ ಮಟ್ಟ ಮೀರಿ ಹರಿಯುತ್ತಿದೆ.

ಲಿಂಗಸುಗೂರು, ದೇವದುರ್ಗ, ರಾಯಚೂರು ತಾಲೂಕಿನ ಕೃಷ್ಣಾ ನದಿ ದಡದಲ್ಲಿ ಜಿಲ್ಲಾಡಳಿತ ಕಟ್ಟೆಚ್ಚರ ವಹಿಸಿದೆ. ಜನರಿಗೆ ಈಗಾಗಲೇ ಪ್ರಕಟಣೆ ಮೂಲಕ ಎಚ್ಚರಿಕೆ ನೀಡಲಾಗಿದೆ. ಲಿಂಗಸುಗೂರಿನ ಕೆಲ ನಡುಗಡ್ಡೆಗಳ ಜನರನ್ನು ಸ್ಥಳಾಂತರಿಸಲಾಗಿದೆ. ಹೂವಿನಹೆಡಗಿ, ಶೀಲಹಳ್ಳಿ ಸೇತುವೆಗಳ ಸಂಪರ್ಕವನ್ನು ಕಳೆದೆರಡು ದಿನಗಳಿಂದ ತಾತ್ಕಾಲಿಕವಾಗಿ ರದ್ದುಗೊಳಿಸಲಾಗಿದೆ.

ಮಾಹಿತಿ ಸಂಗ್ರಹ: ನದಿಗೆ ಬಿಡುತ್ತಿರುವ ನೀರಿನ ಮಟ್ಟದ ಕ್ಷಣ ಕ್ಷಣದ ಮಾಹಿತಿಯನ್ನು ಪಡೆಯುತ್ತಿರುವ ಜಿಲ್ಲಾಡಳಿತ, ಎಲ್ಲಿಯೂ ಅಹಿತಕರ ಘಟನೆಗೆ ಆಸ್ಪದ ನೀಡದಂತೆ ಕಟ್ಟುನಿಟ್ಟಿನ ಸೂಚನೆ ನೀಡಿದೆ. ಜೀವಕ್ಕೆ ಅಪಾಯ ಸೂಚಿಸುವ ಸ್ಥಳಗಳಲೆಲ್ಲ ಸೂಕ್ತ ಪೊಲೀಸ್‌ ಬಂದೋಬಸ್ತ್ ಕಲ್ಪಿಸಿದೆ. ಕೆಲವೆಡೆ ಪ್ರಯಾಣಕ್ಕೆ ನಿಷೇಧ ಹೇರಲಾಗಿದೆ. ಇನ್ನೂ ತಹಶೀಲ್ದಾರ್‌, ಎಸಿ, ಸ್ಥಳೀಯ ಪೊಲೀಸರು, ಕ್ಷೇತ್ರದ ಜನಪ್ರತಿನಿಧಿಗಳು ಸ್ಥಳಗಳಿಗೆ ಭೇಟಿ ನೀಡಿ ಮಾಹಿತಿ ಪಡೆಯುತ್ತಿದ್ದಾರೆ.

ಭದ್ರತೆಗೆ ಒತ್ತು: ಇನ್ನೂ ನದಿಗಳಲ್ಲಿ ನೀರಿನ ಹರಿವು ಹೆಚ್ಚಾಗಿದ್ದು, ಕೆಲ ಹಳ್ಳಿಗಳ ಜನರ ರಕ್ಷಣೆಗೆ ವಿಶೇಷ ತಂಡ ನಿಯೋಜಿಸಲಾಗಿದೆ. ಬೋಟ್ ಹಾಗೂ ಲೈಫ್‌ ಜಾಕೆಟ್‌ಗಳ ವ್ಯವಸ್ಥೆ ಮಾಡಲಾಗಿದೆ. ರಾಯಚೂರು ತಾಲೂಕು ಕುರುವಪುರ, ನಾರದಗಡ್ಡೆಗಳಗೆ ತೆಪ್ಪಗಳಲ್ಲಿ ತೆರಳುವ ಜನರಿಗೆ ಲೈಫ್‌ ಜಾಕೆಟ್ ವ್ಯವಸ್ಥೆ ಮಾಡಲಾಗಿದೆ. ನೀರಿನ ಮಟ್ಟ ಹೆಚ್ಚಾಗಿರುವ ಕಾರಣ ನದಿಗಳಿಗೆ ಇಳಿಯದಂತೆ ಜನರಿಗೆ ಎಚ್ಚರಿಕೆ ನೀಡಲಾಗುತ್ತಿದೆ.

Advertisement

ರೈತರಿಗೆ ಕಷ್ಟ: ನದಿ ಡದಲ್ಲಿ ಕೃಷಿ ಮಾಡುತ್ತಿದ್ದ ರೈತರ ಜಮೀನುಗಳಿಗೆ ನೀರು ಹರಿದ ಪರಿಣಾಮ ಕೆಲವೆಡೆ ನಾಟಿ ಮಾಡಿದ್ದ ಭತ್ತ ಹಾಳಾಗಿದೆ. ಆದರೆ, ಇನ್ನೂ ಇದು ಆರಂಭಿಕ ಹಂತವಾಗಿದ್ದರಿಂದ ಅಷ್ಟೇನು ಹಾನಿ ಸಂಭವಿಸಿಲ್ಲ. ಆದರೆ, ಕೆಲವೆಡೆ ಪಂಪ್‌ಸೆಟ್‌ಗಳು ನೀರಲ್ಲಿ ಮುಳುಗಿ ರೈತರಿಗೆ ಸಮಸ್ಯೆ ತಂದೊಡ್ಡಿವೆ. ಆದರೆ, ಜಲಾಶಯದ ನೀರಿನ ಮಟ್ಟ ತಗ್ಗಿದ ಮೇಲೆ ನಾಟಿ ಮಾಡುವ ಉದ್ದೇಶದಿಂದ ಸಾಕಷ್ಟು ರೈತರು ಇನ್ನೂ ನಾಟಿ ಮಾಡಿಲ್ಲ.

20 ಗೇಟ್‌ಗಳಿಂದ ನೀರು:

ನಾರಾಯಣಪುರ ಜಲಾಶಯದಿಂದ ಕಳೆದೆರಡು ದಿನಗಳಿಂದ 20 ಗೇಟ್‌ಗಳ ಮೂಲಕ ನಿರಂತರವಾಗಿ ನೀರು ಹರಿಸಲಾಗುತ್ತಿದೆ. ಶುಕ್ರವಾರ ಸಂಜೆ ಆಲಮಟ್ಟಿಯಿಂದ ನಾರಾಯಣಪುರ ಜಲಾಶಯಕ್ಕೆ 2.30 ಲಕ್ಷ ಕ್ಯೂಸೆಕ್‌ ನೀರು ಹರಿಸಲಾಗುತ್ತಿತ್ತು. ಹೀಗಾಗಿ ನಾರಾಯಣಪುರದಿಂದ ಕೃಷ್ಣಾ ನದಿಗೆ 2.25 ಲಕ್ಷ ಕ್ಯೂಸೆಕ್‌ ನೀರು ಹರಿಸಲಾಗುತ್ತಿದೆ. ಮಹಾರಾಷ್ಟ್ರದಲ್ಲಿ ಮಳೆ ಮುಂದುವರಿದ ಪರಿಣಾಮ ನೀರಿನ ಒಳಹರಿವು ಇನ್ನೂ ಕೆಲ ದಿನ ಮುಂದುವರಿಯುವ ಸಾಧ್ಯತೆಗಳಿವೆ.

Advertisement

Udayavani is now on Telegram. Click here to join our channel and stay updated with the latest news.

Next