ರಾಯಚೂರು: ಕೃಷ್ಣಾ ನದಿಗೆ ಬುಧವಾರ 4.50 ಲಕ್ಷ ಕ್ಯೂಸೆಕ್ ನೀರು ಹರಿಸಿದ್ದು, ನದಿ ಪಾತ್ರದ ಕೆಲ ಹಳ್ಳಿಗಳಿಗೆ ನೀರು ನುಗ್ಗಿ ಅವಾಂತರ ಸೃಷ್ಟಿಸಿದರೆ, ಅಪಾರ ಪ್ರಮಾಣದ ಬೆಳೆ ಹಾನಿಯಾಗಿ ರೈತರು ಸಂಕಷ್ಟಕ್ಕೆ ಸಿಲುಕುವಂತೆ ಮಾಡಿದೆ.
ಜಲಾಶಯದಿಂದ ನದಿಗೆ ಬಿಡುತ್ತಿರುವ ನೀರಿನ ಪ್ರಮಾಣ ದಿನೇ ದಿನೆ ಹೆಚ್ಚಾಗುತ್ತಿರುವ ಕಾರಣ ಜಿಲ್ಲಾಡಳಿತ ರಕ್ಷಣಾ ಕಾರ್ಯ ಮತ್ತಷ್ಟು ಚುರುಕುಗೊಳಿಸಿದೆ. ತೀರ ಅಪಾಯ ಎದುರಿಸುತ್ತಿರುವ ಹಳ್ಳಿಗಳ ಜನರನ್ನು ಅಧಿಕಾರಿಗಳು ಸ್ಥಳಾಂತರ ಮಾಡಿಸುತ್ತಿದ್ದಾರೆ. ಬುಧವಾರ ದೇವದುರ್ಗ ತಾಲೂಕಿನ ಗೂಗಲ್ ಬ್ರಿಡ್ಜ್ ಬಳಿ ನೀರು ನುಗ್ಗಿ ಹೊಟೇಲ್, ಮನೆಗಳಿಗೆಲ್ಲ ನೀರು ಬಂದಿದೆ. ಅಲ್ಲಿನ ಜನರನ್ನು ಅಧಿಕಾರಿಗಳು ಸುರಕ್ಷಿತ ಸ್ಥಳಕ್ಕೆ ಕಳುಹಿಸಿದರು.
ಬುಧವಾರ ಮಧ್ಯಾಹ್ನದ 3ಕ್ಕೆ ಹೊತ್ತಿಗೆ 4.32 ಲಕ್ಷ ಕ್ಯೂಸೆಕ್ ನೀರು ಹರಿಸಲಾಗಿತ್ತು. ಸಂಜೆ ವೇಳೆ ಆ ಪ್ರಮಾಣ 4.50 ಲಕ್ಷ ತಲುಪಿತು. ಗುರುವಾರ ಅದು 4.75 ಲಕ್ಷ ಕ್ಯೂಸೆಕ್ ಆಗಬಹುದು ಎಂದು ಅಂದಾಜಿಸಿದ್ದಾರೆ. ಅಧಿಕಾರಿಗಳು. ನದಿ ಪಾತ್ರದ 52 ಹಳ್ಳಿಗಳಿಗೆ ಪ್ರವಾಹ ಭೀತಿಯಿದ್ದು, ಆ ಗ್ರಾಮಗಳಿಗೆ ಗ್ರಾಪಂ ಅಭಿವೃದ್ಧಿ ಅಧಿಕಾರಿಗಳು, ಗ್ರಾಮ ಲೆಕ್ಕಾಧಿಕಾರಿಗಳನ್ನು ನಿಯೋಜಿಸಲಾಗಿದೆ. ರಾತ್ರಿ ಕೂಡ ಅಲ್ಲಿಯೇ ಉಳಿಯುವಂತೆ ಜಿಲ್ಲಾಡಳಿತ ನಿರ್ದೇಶನ ನೀಡಿದೆ.
ದೇವದುರ್ಗ ತಾಲೂಕಿನ ನದಿ ತೀರದ ಮ್ಯಾದರಗೋಳ ಗ್ರಾಮದ 13 ಜನರನ್ನು ಸುರಕ್ಷಿತ ಸ್ಥಳಗಳಿಗೆ ಸ್ಥಳಾಂತರಿಸಲಾಗಿದೆ. ರಾಯಚೂರು ತಾಲೂಕಿನ ಗುರ್ಜಾಪುರ ಗ್ರಾಮದ ಬ್ರಿಡ್ಜ್ ಕಂ ಬ್ಯಾರೇಜ್ ಸಂಪೂರ್ಣ ಮುಳುಗಡೆಯಾಗಿದ್ದು, ಅದಕ್ಕೆ ಸಂಪರ್ಕ ಕಲ್ಪಿಸುವ ರಸ್ತೆಗಳಲ್ಲಿ ಬೊಂಗಾಗಳು ಬಿದ್ದಿದ್ದು, ಅಪಾಯದ ಮುನ್ಸೂಚನೆ ನೀಡಿದೆ. ನದಿ ತೀರದ ಭತ್ತದ ಗದ್ದೆಗಳಿಗೆ ನೀರು ನುಗ್ಗಿ ಸಾಕಷ್ಟು ಹಾನಿಯಾಗಿದೆ.
ರಾಯಚೂರು ತಾಲೂಕಿನ ಕಾಡ್ಲೂರು ಗ್ರಾಮದ ಶ್ರೀ ಉಪೇಂದ್ರತೀರ್ಥ ಕರಾರ್ಚಿತ ಪ್ರಾಣದೇವರ ದೇವಸ್ಥಾನ ಮುಳುಗಡೆಯಾದರೆ, ದೇವದುರ್ಗ ತಾಲೂಕಿನ ಕೊಪ್ಪರ ಗ್ರಾಮದ ಶ್ರೀ ಲಕ್ಷ್ಮೀ ನರಸಿಂಹ ದೇವರ ದೇವಸ್ಥಾನ ಮುಳುಗಡೆಯಾಗಿದೆ. ದೇವಸ್ಥಾನದ ಅರ್ಚಕರ ಮನೆ, ಕಲ್ಯಾಣ ಮಂಟಪ ಜಲಾವೃತಗೊಂಡಿದೆ. ಗೂಗಲ್ ಗ್ರಾಮದ ಶ್ರೀ ಅಲ್ಲಮ ಪ್ರಭುಲಿಂಗೇಶ್ವರ ದೇವಸ್ಥಾನದ ಗರ್ಭಗುಡಿ ಹಾಗೂ ಅಕ್ಕ ಪಕ್ಕದ ಅಂಗಡಿ ಮುಂಗಟ್ಟು, ಕಲ್ಯಾಣ ಮಂಟಪಕ್ಕೆ ನೀರು ನುಗ್ಗಿವೆ. ಪಂಪ್ ಸೆಟ್ ಮೂಲಕ ಗರ್ಭಗುಡಿಯ ನೀರನ್ನು ಹೊರಹಾಕಲಾಗುತ್ತಿದೆ. ಗೂಗಲ್ ಬ್ರಿಡ್ಜ್ ಹತ್ತಿರ ಹಾಕಿರುವ ಮೀನುಗಾರರ ಶೆಡ್‌ಗಳು ಮುಳುಗಿವೆ. ಮೀನುಗಾರರನ್ನು ಸುರಕ್ಷಿತ ಸ್ಥಳಕ್ಕೆ ಸ್ಥಳಾಂತರಗೊಳಿಸಲಾಗಿದೆ. ಅಲ್ಲದೇ ಗೂಗಲ್ ಬ್ರಿಡ್ಜ್ ಕಂ ಬ್ಯಾರೇಜ್ ಸಂಪೂರ್ಣ ಮುಳುಗಡೆಯಾಗಿದೆ.
ರಾಯಚೂರು ತಾಲ್ಲೂಕಿನ ಕಾಡ್ಲೂರು-ಅರಷಿಣಗಿ, ಗುರ್ಜಾಪುರ, ಮದರಕಲ್, ಯಮನೂರು ಸೇರಿ ಐದು ಗ್ರಾಮಗಳಿಗೆ ರಸ್ತೆ ಸಂಪರ್ಕ ಕಡಿತಗೊಂಡಿದೆ. ಈ ಗ್ರಾಮಸ್ಥರು ಹಾಗೂ ವಿದ್ಯಾರ್ಥಿಗಳು ಶಾಲಾ ಕಾಲೇಜಿಗೆ ತೆರಳಲು ಪರದಾಡುತ್ತಿದ್ದಾರೆ.
ಗೂಗಲ್ ಬ್ರಿಡ್ಜ್ ಕಂ ಬ್ಯಾರೇಜ್ ಸೇರಿದಂತೆ ನದಿ ಪಾತ್ರದ ಅಪಾಯಕರ ಸ್ಥಳಗಳಲ್ಲಿ ಪ್ಯಾರಾ ಮಿಲಿಟರಿ ಪಡೆ ಕಾರ್ಯ ನಿರ್ವಹಿಸುತ್ತಿದೆ. ಲಿಂಗಸುಗೂರು ತಾಲೂಕಿನ ಕೃಷ್ಣಾನದಿಯ ಟಣಮನಕಲ್ ಗ್ರಾಮ ನಡುಗಡ್ಡೆಯಾಗಿದೆ. ಗುರಗುಂಟಾ ಗ್ರಾಮದಿಂದ ಸಂಪರ್ಕ ಕಲ್ಪಿಸುವ ಸೇತುವೆ ಮುಳುಗಡೆಯಾಗಿದೆ.