ರಾಯಚೂರು: ಸುಮಾರು ಏಳೂವರೆ ದಶಕದಿಂದ ರಾಯಚೂರು-ಹೈದರಾಬಾದ್‌ಗೆ ಸಂಪರ್ಕ ಕೊಂಡಿಯಾಗಿರುವ ದೇವಸುಗೂರು ಸಮೀಪದ ಕೃಷ್ಣಾ ನದಿ ಸೇತುವೆ ಮತ್ತೆ ಶಿಥಿಲಗೊಂಡಿದ್ದು, ಭಾರೀ ವಾಹನಗಳ ಸಂಚಾರದಿಂದ ದಿನೇದಿನೇ ಆತಂಕ ಹೆಚ್ಚಾಗುತ್ತಿದೆ. ಕಳೆದೆರಡು ವರ್ಷಗಳ ಹಿಂದೆ ತಾತ್ಕಾಲಿಕ ದುರಸ್ತಿ ಮಾಡಿದ್ದರೂ ಈಗ ಮತ್ತದೇ ಸ್ಥಿತಿ ನಿರ್ಮಾಣವಾಗಿದೆ.
ರಾಯಚೂರಿನಿಂದ ಮಕ್ತಾಲ್, ಮೆಹಬೂಬ್‌ನಗರ, ಹೈದರಾಬಾದ್, ಯಾದಗಿರಿ ಸೇರಿದಂತೆ ವಿವಿಧೆಡೆಗೆ ಈ ಸೇತುವೆ ಮಾರ್ಗವಾಗಿಯೇ ತೆರಳಬೇಕಿದೆ. ಹೀಗಾಗಿ ನಿತ್ಯ ಸರಕು ಸರಂಜಾಮು ತುಂಬಿದ ಸಾವಿರಾರು ಭಾರೀ ವಾಹನಗಳು ಎಡೆಬಿಡದೆ ಓಡಾಡುತ್ತವೆ. ಇದರಿಂದ ಸೇತುವೆಗೆ ಒತ್ತಡ ಹೆಚ್ಚುತ್ತಿದೆ.
ಎರಡು ವರ್ಷಗಳ ಹಿಂದೆ ಸೇತುವೆ ಮೇಲ್ಪದರು ಸಂಪೂರ್ಣ ಕಿತ್ತು ಹೋಗಿತ್ತು. ಆಗ ಹೆದ್ದಾರಿ ಪ್ರಾಧಿಕಾರದವರು ಡಾಂಬರ್ ಹಾಕಿಸಿ ತಾತ್ಕಾಲಿಕ ದುರಸ್ತಿ ಕೈಗೊಂಡಿದ್ದರು. ಸುಮಾರು 45 ದಿನಗಳ ಕಾಲ ಈ ರಸ್ತೆ ಸಂಚಾರ ಸ್ಥಗಿತಗೊಳಿಸಲಾಗಿತ್ತು. ಆದರೆ, ಅದಾಗಿ ಕೇವಲ ಎರಡು ವರ್ಷ ಕೂಡ ಕಳೆದಿಲ್ಲ. ಆಗಲೇ ಮತ್ತೆ ಸೇತುವೆ ಮೇಲೆ ರಸ್ತೆಗಳಲ್ಲಿ ಗುಂಡಿಗಳು ಬಿದ್ದಿವೆ. ರಾಡ್‌ಗಳು ತೇಲಿದ್ದು, ಪ್ರಯಾಣಿಕರಿಗೆ ಕಂಟಕವಾಗಿ ಮಾರ್ಪಟ್ಟಿದೆ.
ಈಚೆಗೆ ಬಂದ ನೆರೆಯಿಂದ ಸಾಕಷ್ಟು ಪ್ರಮಾಣದ ನೀರು ಸೇತುವೆ ಮೇಲೆ ಹರಿದು ಹೋಗಿದ್ದು, ಸೇತುವೆ ಮೇಲೆ ಒತ್ತಡ ಬಿದ್ದಿದೆ. ಅಲ್ಲದೇ, ಕಲ್ಲಿನ ಕಟ್ಟಡ ಕೂಡ ಅಲಲ್ಲಿ ಬಿರುಕು ಬಿಟ್ಟಿದ್ದು, ಆತಂಕಕ್ಕೆಡೆ ಮಾಡಿದೆ. ಸಂಬಂಧಿಸಿದ ಅಧಿಕಾರಿಗಳು ಕೂಡಲೇ ಸೇತುವೆ ದುರಸ್ತಿ ಮಾಡುವುದರ ಜತೆಗೆ ನೂತನ ಸೇತುವೆ ನಿರ್ಮಾಣ ಕಾರ್ಯ ಕೈಗೊಳ್ಳಬೇಕಿದೆ.
ನಿಜಾಮರ ಕಾಲದ ಸೇತುವೆ: ನಿಜಾಮರ ಕಾಲದ ರಾಜಕುಮಾರ ನವಾಬ್ ಜವ್ವಾಹಜಾಹ್ ಬಹಾದ್ದೂರ್ ಅವರ ರಾಯಚೂರು ಪ್ರಯಾಣ ನಿಮಿತ್ತ ಈ ಸೇತುವೆ ನಿರ್ಮಿಸಲಾಗಿತ್ತು. 1933ರಲ್ಲಿ ಆರಂಭವಾದ ಈ ಸೇತುವೆ ಕಾಮಗಾರಿ 1944ರಲ್ಲಿ ಮುಕ್ತಾಯಗೊಂಡಿತ್ತು. ಆಗಿನ ಕಾಲದಲ್ಲಿ ಉತ್ತರ ಮತ್ತು ದಕ್ಷಿಣ ಭಾರತದ ಸಂಪರ್ಕ ಸಾಧಿಸುವ ಸೇತುವೆ ಎಂದೇ ಇದನ್ನು ಬಣ್ಣಿಸಲಾಗಿತ್ತು. ಜೋದಿ ಸೇತುವೆ (ಸಿರಾತ್-ಎ-ಜೋದಿ) ಎಂದೇ ನಾಮಕರಣ ಮಾಡಲಾಗಿತ್ತು. 2488 ಅಡಿ ಉದ್ದ, 20 ಅಡಿ ಅಗಲ, 60 ಅಡಿ ಎತ್ತರದ ಈ ಸೇತುವೆ ಸಂಪೂರ್ಣ ಕಲ್ಲಿನಿಂದ ನಿರ್ಮಾಣಗೊಂಡಿದೆ. ಆಗಿನ ಕಾಲಕ್ಕೆ 13,28,500 ಹಾಲಿ ನಾಣ್ಯಗಳ ವೆಚ್ಚದಲ್ಲಿ ಈ ಸೇತುವೆ ನಿರ್ಮಿಸಲಾಗಿತ್ತು.