Advertisement

ರಾಯಚೂರಿಗಿಲ್ಲ ಬಿಡಿಗಾಸು ಅನುದಾನ

01:51 PM Aug 10, 2019 | Naveen |

ರಾಯಚೂರು: ಬರದಿಂದ ಕಂಗೆಟ್ಟ ಜಿಲ್ಲೆಯ ಜನರು ಈಗ ಕೃಷ್ಣಾ ನದಿ ನೆರೆಗೆ ಸಿಲುಕಿ ನಲಗುತ್ತಿದ್ದಾರೆ. ಆದರೆ, ಇಂಥ ವೇಳೆ ನೆರವಿಗೆ ಧಾವಿಸಬೇಕಾದ ಸರ್ಕಾರ ರಾಜ್ಯ ವಿಪತ್ತು ನಿರ್ವಹಣಾ ನಿಧಿ ವಿತರಣೆಯಲ್ಲೂ ತಾರತಮ್ಯ ತೋರಿದ್ದು, 100 ಕೋಟಿ ರೂ. ಬಿಡುಗಡೆ ಮಾಡಿ ಜಿಲ್ಲೆಗೆ ಬಿಡಿಗಾಸು ನೀಡಿಲ್ಲ.

Advertisement

ಕೃಷ್ಣಾ ಜಲಾನಯನ ಪ್ರದೇಶದಲ್ಲಿ ಸುರಿಯುತ್ತಿರುವ ಭಾರೀ ಮಳೆಗೆ ರಾಯಚೂರು ಜಿಲ್ಲೆ ಕೂಡ ತತ್ತರಿಸಿ ಹೋಗಿದೆ. ಕೃಷ್ಣಾ ನದಿ ತೀರದ 51 ಹಳ್ಳಿಗಳಿಗೆ ಆಪತ್ತು ಎದುರಾಗಿದೆ. ಸುಮಾರು 3 ಸಾವಿರ ಎಕರೆಗೂ ಅಧಿಕ ಪ್ರಮಾಣದ ಬೆಳೆ ಹಾನಿಯಾಗಿದೆ. ಇಂಥ ವೇಳೆ ಸರ್ಕಾರ ನೆರವಿಗಾಗಿ ನಿರೀಕ್ಷೆಗಣ್ಣಲ್ಲಿ ಕಾದು ಕುಳಿತ ಜನರಿಗೆ ಸರ್ಕಾರ ನಿರಾಸೆ ಮೂಡಿಸಿದೆ. ಈಗ ಸಂಭವಿಸಿದ ಪ್ರವಾಹದಿಂದ ಹಾನಿಗೊಳಗಾದವರಿಗೆ ಅಗತ್ಯ ನೆರವು ನೀಡಲು, ರಕ್ಷಣೆ ಕೈಗೊಳ್ಳಲು, ದುರಸ್ತಿ, ಪುನರ್ವಸತಿ ಸೇರಿ ಅಗತ್ಯ ಕಾರ್ಯಗಳಿಗೆ ರಾಜ್ಯ ಸರ್ಕಾರದ ವಿಪತ್ತು ನಿರ್ವಹಣಾ ನಿಧಿಯಡಿ 100 ಕೋಟಿ ರೂ. ಮಂಜೂರು ಮಾಡಿದೆ. ಆದರೆ, ಕೃಷ್ಣೆ ಪ್ರವಾಹದಿಂದ ಹಾನಿಗೊಳಗಾದ ಜಿಲ್ಲೆಗಳಲ್ಲಿ ರಾಯಚೂರು ಇದ್ದರೂ ಬಿಡಿಗಾಸು ನೀಡದೆ ಮಲತಾಯಿ ಧೋರಣೆ ಪ್ರದರ್ಶಿಸಲಾಗಿದೆ. ಪಕ್ಕದ ಯಾದಗಿರಿ ಜಿಲ್ಲೆಗೆ 5 ಕೋಟಿ ರೂ. ನೀಡಿದ್ದು, ಅದಕ್ಕಿಂತ ದೊಡ್ಡ ಜಿಲ್ಲೆಯಾದ ರಾಯಚೂರು ಕಾಣದಿರುವುದು ವಿಪರ್ಯಾಸ. ಅಚ್ಚರಿ ಎಂದರೆ ಜಿಲ್ಲೆಯಲ್ಲಿ ಉಂಟಾದ ಪ್ರವಾಹದ ಚಿತ್ರಣವನ್ನು ವೈಮಾನಿಕ ಸಮೀಕ್ಷೆ ಮೂಲಕ ಸಿಎಂ ಬಿ.ಎಸ್‌.ಯಡಿಯೂರಪ್ಪ ವೀಕ್ಷಣೆ ಮಾಡಿ ಹೋದ ಬಳಿಕವೂ ಜಿಲ್ಲೆಗೆ ಅನುದಾನ ಸಿಗದಿರುವುದು ಅಚ್ಚರಿ ಮೂಡಿಸಿದೆ. ಜಿಲ್ಲೆಯ 51 ಹಳ್ಳಿಗಳು, ಆರು ನಡುಗಡ್ಡೆಗಳು ಪ್ರವಾಹಕ್ಕೆ ನಲುಗಿ ಹೋಗಿವೆ. ಈಗಾಗಲೇ 483 ಜನರನ್ನು ಸುರಕ್ಷಿತವಾಗಿ ಸ್ಥಳಾಂತರಿಸಲಾಗಿದೆ. 273 ನಿರಾಶ್ರಿತರಿಗೆ ಊಟ ವಸತಿ ಸೌಲಭ್ಯ ಕಲ್ಪಿಸಲಾಗಿದೆ. ಇನ್ನೂ ಅನೇಕ ಸೇತುವೆಗಳು ಮುಳುಗಡೆಯಾಗಿ ನದಿ ಪಕ್ಕದ ಜಮೀನುಗಳಿಗೆ ನೀರು ನುಗ್ಗಿದೆ. ನದಿ ಪಾತ್ರದ ಹಳ್ಳಿಗಳ ಅನೇಕ ಅಂಗಡಿ ಮುಂಗಟ್ಟುಗಳಿಗೆ ಅಪಾಯ ಎದುರಾಗಿದೆ. ಅಲ್ಲದೇ, ಇಂದಿಗೂ ಪ್ರವಾಹ ನಿಲ್ಲದೇ ಹಾನಿಯಾಗುತ್ತಲೇ ಇದೆ. ಪ್ರವಾಹ ಭೀತಿ ಮುಂದುವರಿದ್ದು, ಇನ್ನೂ ಹೆಚ್ಚಿನ ಅನಾಹುತಗಳು ಸಂಭವಿಸುವ ಸಾಧ್ಯತೆ ಇದೆ.

Advertisement

Udayavani is now on Telegram. Click here to join our channel and stay updated with the latest news.

Next