Advertisement

ಉದ್ಯೋಗ ಸೃಜಿಸಿದರೆ ಕಲ್ಯಾಣ ಕರ್ನಾಟಕ ಪ್ರಗತಿ

11:34 AM Oct 13, 2019 | Team Udayavani |

ರಾಯಚೂರು: ಈ ಭಾಗದಲ್ಲಿ ಕೈಗಾರಿಕೆ ವೃದ್ಧಿಯಾಗಿ ಅದರಿಂದ ಯುವಕರಿಗೆ ಉದ್ಯೋಗ ಸಿಗುವಂತಾದಾಗ ಮಾತ್ರ ಕಲ್ಯಾಣ ಕರ್ನಾಟಕ ಪದಕ್ಕೆ ಅರ್ಥ ಬರಲಿದೆ ಎಂದು ಜಿಲ್ಲಾ ಪಂಚಾಯಿತಿ ಅಧ್ಯಕ್ಷೆ ಆದಿಮನಿ ವೀರಲಕ್ಷ್ಮೀ ಅಭಿಪ್ರಾಯಪಟ್ಟರು.

Advertisement

ನಗರದ ಜಿಲ್ಲಾ ಪಂಚಾಯಿತಿ ಸಭಾಂಗಣದಲ್ಲಿ ಕರ್ನಾಟಕ ವಾಣಿಜ್ಯ ಮತ್ತು ಕೈಗಾರಿಕೆ ಮಹಾಸಂಸ್ಥೆ ಹಾಗೂ ಜಿಲ್ಲಾ ವಾಣಿಜ್ಯೋದ್ಯಮ ಸಂಘದ ಸಹಯೋಗದಲ್ಲಿ ಶನಿವಾರ ಆಯೋಜಿಸಿದ್ದ ಸಮಾವೇಶ ಹಾಗೂ ವಿಚಾರ ಸಂಕಿರಣ ಉದ್ಘಾಟಿಸಿ ಅವರು ಮಾತನಾಡಿದರು. ಕೈಗಾರಿಕೆಗಳಿಂದ ಉದ್ಯೋಗ ಸೃಜನೆಗೆ ಮೊದಲಾದ್ಯತೆ ಸಿಗಬೇಕು. ಇಂದು ಯುವಕರಿಗೆ ಕೆಲಸ ಸಿಗದೆ ಪರದಾಡುವಂತಾಗಿದೆ. ಎಸ್ಸೆಸ್ಸೆಲ್ಸಿ ಮತ್ತು ಬಿಕಾಂ ಓದಿದವರಿಗೂ ವ್ಯತ್ಯಾಸ ಇಲ್ಲದ ವಾತಾವರಣ ನಿರ್ಮಾಣವಾಗಿದೆ. ಕೈಗಾರಿಕೆಗಳಿಗೆ ಸರ್ಕಾರ ಸಾಕಷ್ಟು ಸೌಲಭ್ಯ ನೀಡುತ್ತಿದ್ದು, ಅದನ್ನು ಸರಿಯಾಗಿ ಬಳಸಿಕೊಳ್ಳಬೇಕು ಎಂದರು.

ಕೈಗಾರಿಕೆ ವೃದ್ಧಿಗೆ ಬೇಕಿರುವ ಎಲ್ಲ ಸೌಲಭ್ಯ ಕಲ್ಪಿಸಲು ನಾವು ಬದ್ಧರಿದ್ದೇವೆ. ನೀವು ರೈತರಿಗೆ ಏನು ಬೇಕು ಎಂಬುದನ್ನು ಅರಿತು ಅಂಥ ಕೈಗಾರಿಕೆ ಸ್ಥಾಪಿಸಿ. ಅಂದಾಗ ಕಲ್ಯಾಣ ಕರ್ನಾಟಕದ ಪ್ರಗತಿ ಸಾಧ್ಯವಾಗಲಿದೆ ಎಂದರು.

ಜಿಲ್ಲಾಧಿಕಾರಿ ಆರ್‌.ವೆಂಕಟೇಶಕುಮಾರ ಮಾತನಾಡಿ, ಅಭಿವೃದ್ಧಿ ಎನ್ನುವುದು ಯಾವುದೋ ಒಂದು ಕಡೆ ಆಗುವುದಲ್ಲ. ಹಿಂದುಳಿದ ಜಿಲ್ಲೆಗಳ ಪ್ರಗತಿ ಆದಾಗಲೇ ಸಮಗ್ರ ಅಭಿವೃದ್ಧಿಗೆ ಅರ್ಥ ಬರಲಿದೆ. ಈಗಾಗಲೇ ಎರಡು ಜಿಲ್ಲೆಗಳನ್ನು ಕೇಂದ್ರ ಸರ್ಕಾರದ ನೀತಿ ಆಯೋಗ ಅಭಿವೃದ್ಧಿಗೆ ಆಯ್ಕೆ ಮಾಡಿದೆ. ಅಲ್ಲಿ ಎಲ್ಲ ವಿಷಯಗಳ ಚರ್ಚೆ ನಡೆದರೂ ವಾಣಿಜ್ಯ ವಿಭಾಗದ ಚರ್ಚೆಯಾಗಿರಲಿಲ್ಲ. ಈ ಕಾರ್ಯಕ್ರಮ ಅದಕ್ಕೆ ಪೂರಕವಾಗಿದೆ ಎಂದರು.

ಜಿಲ್ಲೆಯಲ್ಲಿ ಹೊಸ ಕೈಗಾರಿಕೆ ಸ್ಥಾಪನೆಗೆ ಸ್ಥಳಾಭಾವ ಕಾಡುತ್ತಿದೆ. ಸಿಂಗನೋಡಿ ಬಳಿ ಸ್ಥಳ ನಿಗದಿ ಮಾಡಿದ್ದು, ಸ್ವಾಧೀನಕ್ಕೆ ಈಗಾಗಲೇ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಕೆಯಾಗಿದೆ. ಅಲ್ಲದೇ, ಪ್ರತಿ ತಾಲೂಕಿನಲ್ಲೂ 50ರಿಂದ 100 ಎಕರೆ ಸ್ಥಳ ಕೈಗಾರಿಕೆ ಉದ್ದೇಶಗಳಿಗೆ ಪಡೆಯಬೇಕಿದೆ. ವಾಣಿಜ್ಯೋದ್ಯಮ ಸಂಘದ ಸದಸ್ಯರೇ ಸೂಕ್ತ ಸ್ಥಳ ಗುರುತಿಸಬೇಕು. ಈ ಭಾಗದಲ್ಲಿ ಕೌಶಲ್ಯಾಭಿವೃದ್ಧಿಗೆ ಆದ್ಯತೆ ನೀಡಬೇಕಿದೆ. ಅಂಥ ಕೇಂದ್ರಗಳ ಸ್ಥಾಪನೆಗೂ ಹೆಚ್ಚು ಒತ್ತು ನೀಡಬೇಕಿದೆ ಎಂದರು.

Advertisement

ರೈಸ್‌ ಮಿಲ್‌ ಮಾಲೀಕರ ಸಂಘದ ಅಧ್ಯಕ್ಷ ಎ.ಪಾಪಾರೆಡ್ಡಿ ಮಾತನಾಡಿ, ಈ ಭಾಗ ಕೃಷಿ ಕೇಂದ್ರಿತವಾಗಿದ್ದು, ಕೃಷಿ ಆಧಾರಿತ ಕೈಗಾರಿಕೆಗಳ ಬೆಳವಣಿಗೆಗೆ ಹೆಚ್ಚು ಒತ್ತು ನೀಡಬೇಕು. ಜಿಲ್ಲೆಯಲ್ಲಿ ಎರಡು ನದಿಗಳು ಹರಿಯುತ್ತಿದ್ದು, ಸಮಾನಾಂತರ ಜಲಾಶಯ ಪ್ರಮುಖ ಬೇಡಿಕೆಯಾಗಿದೆ. ವಾಣಿಜ್ಯೋದ್ಯಮ ಸಂಘ ಕೂಡ ಈ ನಿಟ್ಟಿನಲ್ಲಿ ಸರ್ಕಾರಕ್ಕೆ ಒತ್ತಾಯ ಮಾಡಬೇಕು. ಒಂದು ವೇಳೆ ಅದು ನಿರ್ಮಾಣಗೊಂಡರೆ ಜಿಲ್ಲೆಯಲ್ಲಿ ನಿರುದ್ಯೋಗ ಸಮಸ್ಯೆ ನಿವಾರಣೆ
ಆಗಲಿದೆ ಎಂದು ವಿಶ್ಲೇಷಿಸಿದರು.

ಎಫ್‌ಕೆಸಿಸಿಐ ಅಧ್ಯಕ್ಷ ಸಿ.ಆರ್‌.ಜನಾರ್ದನ ಮಾತನಾಡಿ, ಪ್ರತಿ ಜಿಲ್ಲೆಗೂ ಭೇಟಿ ನೀಡಿ ಅಲ್ಲಿನ ಉದ್ಯಮ ವಲಯ ಎದುರಿಸುತ್ತಿರುವ ಸಮಸ್ಯೆಗಳನ್ನು ಆಲಿಸುವಂತೆ ಸಂಸ್ಥೆಯ ನಿಯಮಗಳಲ್ಲೇ ಇದೆ. ಆ ನಿಟ್ಟಿನಲ್ಲಿ ಮೊದಲ ಭೇಟಿಯನ್ನು ರಾಯಚೂರು ಜಿಲ್ಲೆಯಿಂದ ಆರಂಭಿಸಲಾಗಿದೆ. ಉದ್ಯೋಗ ಸೃಷ್ಟಿಯೇ ನಮ್ಮ ಸಂಸ್ಥೆಯ ಧ್ಯೇಯ. ರೈತರ ಆದಾಯ ದ್ವಿಗುಣ ಮಾಡುವ ನಿಟ್ಟಿನಲ್ಲಿ ಉದ್ಯಮಿಗಳು ಬದ್ಧರಾಗಬೇಕು. ಇಲ್ಲಿನ ಉದ್ಯಮಿಗಳ ಬೇಡಿಕೆಗಳನ್ನು ಸರ್ಕಾರದ ಗಮನಕ್ಕೆ ತರಲಾಗುವುದು ಎಂದರು.

ವಾಣಿಜ್ಯೋದ್ಯಮ ಸಂಘದ ಜಿಲ್ಲಾಧ್ಯಕ್ಷ ತ್ರಿವಿಕ್ರಮ ಜೋಶಿ ಪ್ರಾಸ್ತಾವಿಕ ಮಾತನಾಡಿದರು. ಉಪಾಧ್ಯಕ್ಷ ಪೆರಿಕಲ್‌ ಎಂ. ಸುಂದರ, ಐ.ಎಸ್‌.ಪ್ರಸಾದ, ಕಾರ್ಯದರ್ಶಿ ಜಂಬಣ್ಣ, ಲೋಕರಾಜ್‌ ಸೇರಿದಂತೆ ಆರು ಜಿಲ್ಲೆಗಳ ಪ್ರತಿನಿಧಿಗಳು ಪಾಲ್ಗೊಂಡಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next