ರಾಯಚೂರು: ಜುರಾಲಾ ಜಲಾಶಯದ ಹಿನ್ನೀರಿನಿಂದ ಮುಳುಗಡೆಯಾದ ಪ್ರದೇಶಗಳ ಅಭಿವೃದ್ಧಿಗೆ ಹಣ ಬಿಡುಗಡೆಯಾದರೂ ಅದನ್ನು ಬಳಸದೆ ಕಾಲಕ್ಷೇಪ ಮಾಡಲಾಗುತ್ತಿದೆ. ವಾರದೊಳಗೆ ಹಣದ ಸ್ಪಷ್ಟ ವಿವರಣೆ ನೀಡದಿದ್ದಲ್ಲಿ ಜಿಲ್ಲಾಧಿಕಾರಿ ಕಚೇರಿಗೆ ಮುತ್ತಿಗೆ ಹಾಕಿ ಪ್ರತಿಭಟನೆ ನಡೆಸಲಾಗುವುದು ಎಂದು ಮಾಜಿ ಶಾಸಕ ಎ.ಪಾಪಾರೆಡ್ಡಿ ಗಡುವು ನೀಡಿದರು.
ನಗರದ ಪತ್ರಿಕಾ ಭವನದಲ್ಲಿ ಗುರುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, 1978ನೇ ಇಸ್ವಿಯಲ್ಲಿ ರಾಜ್ಯದ ಮುಖ್ಯಮಂತ್ರಿ ದೇವರಾಜ ಅರಸ್ ಹಾಗೂ ಆಂಧ್ರಪ್ರದೇಶ ಸಿಎಂ ಚನ್ನಾರೆಡ್ಡಿ ನೇತೃತ್ವದಲ್ಲಿ ಯೋಜನೆ ಜಾರಿಗೊಂಡಿತ್ತು. ಇದರಿಂದ ಕೃಷ್ಣ ನದಿ ಪಾತ್ರದ ಕೆಲ ಹಳ್ಳಿಗಳು, ಪ್ರಮುಖ ದೇವಸ್ಥಾನಗಳಿಗೆ ಮುಳುಗಡೆ ಭೀತಿ ಎದುರಾಯಿತು. ಈ ಬಗ್ಗೆ ನಾನು ಶಾಸಕನಾಗಿದ್ದಾಗ ರಾಜ್ಯದ ಮುಖ್ಯ ಕಾರ್ಯದರ್ಶಿ ಜತೆ ಚರ್ಚಿಸಿ ಈ ಸ್ಥಳಗಳ ಅಭಿವೃದ್ಧಿಗೆ ಒತ್ತಾಯಿಸಿದ್ದೆ. ಆಗ ಆಂಧ್ರ ಸರ್ಕಾರ ಪರಿಹಾರ ಹಣ ಬಿಡುಗಡೆ ಮಾಡಿತ್ತು ಎಂದು ವಿವರಿಸಿದರು.
ನನ್ನ ಅವಧಿ ಬಳಿಕ ಮೂವರು ಶಾಸಕರು ಆಯ್ಕೆಯಾಗಿದ್ದಾರೆ. ಈ ಹಿಂದೆ ರಾಜಾ ಅಮರಪ್ಪ ನಾಯಕ, ತಿಪ್ಪರಾಜ ಹವಾಲ್ದಾರ್ ಈ ಬಗ್ಗೆ ಪ್ರಶ್ನಿಸಲೇ ಇಲ್ಲ. ಈಗ ಆಯ್ಕೆಯಾಗಿರುವ ದದ್ದಲ್ ಬಸನಗೌಡ ಕೂಡ ಒಂದು ವರ್ಷವಾದರೂ ಈ ಸ್ಥಳಗಳ ಬಗ್ಗೆ ಚಕಾರ ಎತ್ತುತ್ತಿಲ್ಲ ಎಂದು ದೂರಿದರು.
ಈ ದೇವಸ್ಥಾನಗಳಿಗೆ ಸಂಪರ್ಕ ಕಲ್ಪಿಸಿ ಅಲ್ಲಿ ಪ್ರವಾಸೋದ್ಯಮಕ್ಕೆ ಅವಕಾಶ ಮಾಡಿಕೊಡಬೇಕು. ಈ ಭಾಗ ಸಂಪೂರ್ಣ ಬರಕ್ಕೆ ತುತ್ತಾಗಿರುವ ಕಾರಣ ಇದರಿಂದ ಅನುಕೂಲವಾಗಲಿದೆ ಎಂದು ತಿಳಿಸಲಾಗಿತ್ತು. ಆದರೆ, ಈವರೆಗೂ ಅದು ಆಗದಿರುವುದು ವಿಪರ್ಯಾಸ ಎಂದು ಬೇಸರ ವ್ಯಕ್ತಪಡಿಸಿದರು.
ಇದು ಸರ್ಕಾರಕ್ಕೆ ಸಂಬಂಧಿಸಿದ ಕಾಮಗಾರಿಯಲ್ಲ. ಸಂಪೂರ್ಣ ಅಧಿಕಾರ ಜಿಲ್ಲಾಧಿಕಾರಿ ಹಾಗೂ ಕ್ಷೇತ್ರದ ಶಾಸಕರದ್ದಾಗಿದೆ. ಹೀಗಾಗಿ ಒಂದು ವಾರದೊಳಗೆ ಕಾಮಗಾರಿ ಸಂಪೂರ್ಣ ವಿವರ, ಹಣದ ವಿವರ ಸ್ಪಷ್ಟಪಡಿಸಬೇಕು. ಕಾಮಗಾರಿ ಯಾವಾಗ ಆರಂಭಿಸಲಾಗುತ್ತದೆ ಎಂಬುದನ್ನು ತಿಳಿಸಬೇಕು. ಇಲ್ಲವಾದರೆ ಜಿಲ್ಲಾಧಿಕಾರಿ ಕಚೇರಿಗೆ ಮುತ್ತಿಗೆ ಹಾಕಿ ಪ್ರತಿಭಟನೆ ನಡೆಸಬೇಕಾಗುತ್ತದೆ ಎಂದು ಎಚ್ಚರಿಸಿದರು.
ನಾರಾಯಣಪುರ ಬಲದಂಡೆ ಕಾಲುವೆ ಯೋಜನೆ ಮೂಲ ನೀಲನಕ್ಷೆಯಂತೆ ಸಾಗದೆ ಮನಬಂದಂತೆ ತೆಗೆದುಕೊಂಡು ಹೋಗಲಾಗಿದೆ. ಗದ್ವಾಲ್ ರಸ್ತೆ ಮೂಲಕ ಸಾಗಬೇಕಿದ್ದ ಕಾಲುವೆಯನ್ನು ಶಾಖವಾದಿ ಮಾರ್ಗವಾಗಿ ತೆಗೆದುಕೊಂಡು ಹೋಗಲಾಗಿದೆ. ಈ ಬಗ್ಗೆ ಹೇಳುವವರು ಕೇಳುವವರು ಇಲ್ಲದಂತಾಗಿದೆ ಎಂದು ಆಕ್ಷೇಪ ವ್ಯಕ್ತಪಡಿಸಿದರು.
ಮುಖಂಡರಾದ ತಿಮ್ಮಪ್ಪ ನಾಯಕ, ವೆಂಕಟೇಶ, ವೆಂಕಟರಾವ್, ಶರಣಪ್ಪ ಹನುಮಂತರೆಡ್ಡಿ, ಬಸಾರೆಡ್ಡಿ, ಸೂಗೂರಪ್ಪ, ರಂಗಾರೆಡ್ಡಿ ಇತರರು ಇದ್ದರು.