Advertisement

ಶುದ್ಧ ಕುಡಿಯುವ ನೀರಿನ ಘಟಕ ದುರಸ್ತಿಗೆ ಒತ್ತಾಯ

01:08 PM Jul 20, 2019 | Team Udayavani |

ರಾಯಚೂರು: ಜಿಲ್ಲಾದ್ಯಂತ ಇರುವ ಶುದ್ಧ ಕುಡಿಯುವ ನೀರಿನ ಘಟಕಗಳು ಸರಿಯಾಗಿ ಕಾರ್ಯನಿರ್ವಹಿಸುತ್ತಿಲ್ಲ. ಅವುಗಳ ದುರಸ್ತಿ ಕಾರ್ಯವನ್ನು ಕೂಡಲೇ ಅಧಿಕಾರಿಗಳು ಕೈಗೊಳ್ಳಬೇಕು ಎಂದು ಜಿ ಪಂ ಸದಸ್ಯರು ಒತ್ತಾಯಿಸಿದರು.

Advertisement

ನಗರದ ಜಿಪಂ ಜಲ ನಿರ್ಮಲ ಸಭಾಂಗಣದಲ್ಲಿ ಶುಕ್ರವಾರ ನಡೆದ ಸಾಮಾನ್ಯ ಸ್ಥಾಯಿ ಸಮಿತಿ 2019-20ನೇ ಸಾಲಿನ ಕ್ರಿಯಾ ಯೋಜನೆ ಸಿದ್ಧಪಡಿಸುವ ಸಭೆಯಲ್ಲಿ ಅವರು ಮಾತನಾಡಿದರು.

ಘಟಕಗಳ ದುರಸ್ತಿ ಕಾರ್ಯ ಕೈಗೊಳ್ಳದೇ ನಿರ್ಲಕ್ಷ್ಯಧೋರಣೆ ಅನುಸರಿಸಿದರೆ ಗ್ರಾಮೀಣ ಭಾಗದ ಜನರು ಅನಿವಾರ್ಯವಾಗಿ ಕಲುಷಿತ ನೀರು ಕುಡಿಯಬೇಕಾಗುತ್ತದೆ ಎಂದು ಸಮಸ್ಯೆಯನ್ನು ಸಭೆಗೆ ಗಮನಕ್ಕೆ ತಂದರು.

ಜಿಲ್ಲೆಯಲ್ಲಿ 617 ಶುದ್ಧ ಕುಡಿಯುವ ನೀರಿನ ಘಟಕ ಸ್ಥಾಪನೆಗೆ ಕೋಟ್ಯಂತರ ಅನುದಾನ ವೆಚ್ಚ ಮಾಡಲಾಗಿದೆ. ಆದರೆ, ಈ ಘಟಕಗಳಿಂದ ಜನರಿಗೆ ಅನುಕೂಲವಾಗುತ್ತಿಲ್ಲ. ಏನಾದರೂ ತಾಂತ್ರಿಕ ಸಮಸ್ಯೆ ಪರಿಹರಿಸಲು ಸಂಬಂಧಿಸಿದ ಇಲಾಖೆ ಅಧಿಕಾರಿಗಳು ಕ್ರಮ ಕೈಗೊಳ್ಳಬೇಕು ಎಂದು ಸದಸ್ಯರು ಸೂಚಿಸಿದರು.

ಜಿಲ್ಲಾದ್ಯಂತ 18 ಸ್ಮಾರ್ಟ್‌ಕ್ಲಾಸ್‌ಗಳ ಆರಂಭಕ್ಕಾಗಿ ಕ್ರಿಯಾಯೋಜನೆ ಈಗಾಗಲೇ ಸಿದ್ಧಪಡಿಸಲಾಗಿದೆ. ಹೈದರಾಬಾದ್‌ ಕರ್ನಾಟಕ ಪ್ರದೇಶ ಅಭಿವೃದ್ಧಿ ಮಂಡಳಿಯಿಂದ (ಎಚ್ಕೆಆರ್‌ಡಿಬಿ) 50.12 ಲಕ್ಷ ರೂ. ಅನುದಾನ ಬಿಡುಗಡೆಯಾಗಿದೆ ಎಂದು ಸಾರ್ವಜನಿಕ ಶಿಕ್ಷಣ ಇಲಾಖೆ ಉಪನಿರ್ದೇಶಕ ನಂದನೂರು ಸಭೆಯಲ್ಲಿ ವಿವರಿಸಿದರು.

Advertisement

ಸ್ಮಾರ್ಟ್‌ಕ್ಲಾಸ್‌ಗೆ ಅಗತ್ಯವಾಗುವ ಉಪಕರಣ ಖರೀದಿಸಲು ಟೆಂಡರ್‌ ಆಹ್ವಾನಿಸಲಾಗಿದೆ. ಬೆಂಗಳೂರಿನ ಕಿಯೋನಿಕ್ಸ್‌ ಸಂಸ್ಥೆಗೆ ಸ್ಮಾರ್ಟ್‌ಕ್ಲಾಸ್‌ ಆರಂಭಿಸುವ ಗುತ್ತಿಗೆ ನೀಡಲಾಗಿದೆ ಎಂದು ವಿವರಿಸಿದರು.

ಜಿಪಂ ಉಪಾಧ್ಯಕ್ಷೆ ಗೀತಾ ಕರಿಯಪ್ಪ ವಜ್ಜಲ ಮಾತನಾಡಿ, ಸ್ಮಾರ್ಟ್‌ಕ್ಲಾಸ್‌ಗಳನ್ನು ಜಿಲ್ಲೆಯಲ್ಲಿ ಯಾವ ಯಾವಕಡೆಗೆ ಆರಂಭವಾಗುತ್ತಿವೆ ಎಂಬುದರ ಮಾಹಿತಿಯನ್ನು ಜಿಪಂ ಸದಸ್ಯರ ಗಮನ ತರಬೇಕು ಎಂದು ಸೂಚಿಸಿದರು.

ಮಕ್ಕಳಿಗೆ ಬೋಧನೆಗೆ ಯಾವುದೇ ಸಮಸ್ಯೆಯಾಗದಂತೆ ಪಠ್ಯಪುಸ್ತಕಗಳನ್ನು ನಿಗದಿತ ಸಮಯಕ್ಕೆ ಸರಬರಾಜು ಆಗಬೇಕು ಎಂದು ಸೂಚಿಸಿದರು.

ಜಿಲ್ಲೆಯು ಎಸ್‌ಎಸ್‌ಎಲ್ಸಿ ಫಲಿತಾಂಶದಲ್ಲಿ 30ನೇ ಸ್ಥಾನಕ್ಕೆ ಇಳಿಕೆಯಾಗಿದೆ. ಈ ಬಗ್ಗೆ ಗಮನಹರಿಸಬೇಕು. ಜಿಲ್ಲೆಯಲ್ಲಿ ಉತ್ತಮ ಗುಣಮಟ್ಟ ಶಿಕ್ಷಣ ಒದಗಿಸಲು ಕ್ರಮ ಅನುಸರಿಸಬೇಕು. ಜಿಲ್ಲೆಯ ವಿದ್ಯಾರ್ಥಿಗಳ ಫಲಿತಾಂಶ ಉತ್ತಮವಾಗುವ ಹಿನ್ನೆಲೆಯಲ್ಲ ಜಿಲ್ಲೆಯ ಎಲ್ಲ ಕ್ಷೇತ್ರ ಶಿಕ್ಷಣಾಧಿಕಾರಿಗಳು ಗಮನಹರಿಸಬೇಕು ಎಂದು ಸೂಚನೆ ನೀಡಿದರು.

ಜಿಪಂ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಲಕ್ಷ್ಮೀಕಾಂತ ರೆಡ್ಡಿ, ಸ್ಥಾಯಿ ಸಮಿತಿ ಸದಸ್ಯ ಶರಣಬಸವ ಪಾಟೀಲ, ಜಿಪಂ ಸದಸ್ಯರಾದ ದುರುಗಪ್ಪ, ಕಿರಿಲಿಂಗಪ್ಪ ಹಾಗೂ ಜಿಲ್ಲಾ ಮಟ್ಟದ ಅಧಿಕಾರಿಗಳು ಸಭೆಯಲ್ಲಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next