Advertisement

ಎಲ್ಲರೂ ಒಗ್ಗೂಡಿ ದೇಶ ಕಟ್ಟೋಣ

11:06 AM Aug 16, 2019 | Team Udayavani |

ರಾಯಚೂರು: ನಗರ ಸೇರಿದಂತೆ ಜಿಲ್ಲಾದ್ಯಂತ 73ನೇ ಸ್ವಾತಂತ್ರ್ಯ ದಿನವನ್ನು ಗುರುವಾರ ಸಡಗರ ಸಂಭ್ರಮದಿಂದ ಆಚರಿಸಲಾಯಿತು. ಸರ್ಕಾರಿ ಕಚೇರಿಗಳು, ಶಾಲಾ ಕಾಲೇಜುಗಳು, ಸಂಘ ಸಂಸ್ಥೆಗಳು, ವಿವಿಧ ಪಕ್ಷಗಳು ಸೇರಿದಂತೆ ಎಲ್ಲ ಕಡೆ ತಿರಂಗ ಧ್ವಜ ರಾರಾಜಿಸಿತು.

Advertisement

ಜಿಲ್ಲಾಡಳಿತದಿಂದ ನಗರದ ಡಿಎಆರ್‌ ಪೊಲೀಸ್‌ ಕವಾಯತು ಮೈದಾನದಲ್ಲಿ ಹಮ್ಮಿಕೊಂಡಿದ್ದ ಕಾರ್ಯಕ್ರಮದಲ್ಲಿ ಜಿಲ್ಲಾಧಿಕಾರಿ ಶರತ್‌ ಬಿ. ಧ್ವಜಾರೋಹಣ ನೆರವೇರಿಸಿದರು. ನಂತರ ಪದಾತಿ ದಳ, ಸ್ಕೌಟ್ಸ್‌, ಗೈಡ್ಸ್‌ ಮತ್ತು ವಿವಿಧ ಶಾಲಾ ಕಾಲೇಜುಗಳ ತಂಡಗಳಿಂದ ಗೌರವ ವಂದನೆ ಸ್ವೀಕರಿಸಿದರು.

ಈ ವೇಳೆ ಮಾತನಾಡಿದ ಜಿಲ್ಲಾಧಿಕಾರಿ ಬಿ. ಶರತ್‌, ಭಾರತ ವಿಶ್ವಮಟ್ಟದಲ್ಲಿ ದೊಡ್ಡ ರಾಷ್ಟ್ರವಾಗಿ ಗುರುತಿಸಿಕೊಂಡಿದ್ದು, ದೇಶದೊಳಗೂ ಸಮಾನತೆ, ಪ್ರತಿಯೊಬ್ಬರಿಗೂ ಸಾಮಾಜಿಕ ಭದ್ರತೆ ಒದಗಿಸುವ ನಿಟ್ಟಿನಲ್ಲಿ ಎಲ್ಲರೂ ಶ್ರಮಿಸಬೇಕು. ದೇಶ ಕಟ್ಟುವ ಕೆಲಸಕ್ಕೆ ಪ್ರತಿಯೊಬ್ಬರು ಕೈ ಜೋಡಿಸಬೇಕು. ದೇಶಕ್ಕೆ ಸ್ವಾತಂತ್ರ್ಯ ಸಿಗಲು ಅನೇಕ ಮಹನೀಯರು ತಮ್ಮ ಜೀವವನ್ನೆ ಪಣಕ್ಕಿಟ್ಟಿದ್ದು, ಅವರ ಕೊಡುಗೆಯನ್ನು ಎಲ್ಲರೂ ಸ್ಮರಿಸುವ ಅಗತ್ಯವಿದೆ ಎಂದರು.

ಈ ವರ್ಷ ಜಿಲ್ಲೆಯ ಎರಡು ನದಿಗಳಿಗೆ ನೆರೆ ಅಪ್ಪಳಿಸಿ ಸಾಕಷ್ಟು ಹಾನಿಯಾಗಿದೆ. ಕೃಷ್ಣಾ, ತುಂಗಭದ್ರಾ ನದಿಗಳ ಪ್ರವಾಹದಿಂದ ಸಮಸ್ಯೆಯಾಗಿದೆ. ಆದರೆ, ಇಂಥ ಕ್ಲಿಷ್ಟ ಸನ್ನಿವೇಶದಲ್ಲೂ ಜಿಲ್ಲಾಡಳಿತ ದಿಟ್ಟ ಕ್ರಮ ಕೈಗೊಂಡು ಜನ ಮತ್ತು ಜಾನುವಾರು ರಕ್ಷಿಸಿದೆ. ಹಾನಿಗೊಳಗಾದ ರಾಯಚೂರು, ದೇವದುರ್ಗ ಮತ್ತು ಲಿಂಗಸುಗೂರು ತಾಲೂಕುಗಳನ್ನು ಪ್ರವಾಹ ಪೀಡಿತ ಎಂದು ಸರ್ಕಾರ ಘೋಷಿಸಿವೆ ಎಂದರು.

ಇನ್ನು ಉದ್ಯೋಗ ಖಾತ್ರಿಯಡಿ 73.73 ಲಕ್ಷ ಮಾನವ ದಿನಗಳನ್ನು ಸೃಜಿಸಿ, 168.75 ಕೋಟಿ ರೂ. ಕೂಲಿ ನೀಡಲಾಗಿದೆ. ವೈಯಕ್ತಿಕ ಕಾಮಗಾರಿಗಳ ಪೈಕಿ 254 ದನದ ಕೊಟ್ಟಿಗೆಗಳನ್ನು, 672 ಕೃಷಿ ಹೊಂಡಗಳು ಮತ್ತು 298 ಜಮೀನು ಅಭಿವೃದ್ಧಿ ಕಾಮಗಾರಿ ಕೈಗೊಳ್ಳಲಾಗಿದೆ. ಸಮುದಾಯ ಕಾಮಗಾರಿಗಳ ಪೈಕಿ 125 ಚೆಕ್‌ ಡ್ಯಾಂಗಳನ್ನು ನಿರ್ಮಿಸಲಾಗಿದೆ. ನರೇಗಾ ಯೋಜನೆ ಅನುಷ್ಠಾನದಲ್ಲಿ ಕಳೆದ ಸಾಲಿನಲ್ಲಿ ಜಿಲ್ಲೆ ರಾಜ್ಯದಲ್ಲಿ ಮೊದಲ ಸ್ಥಾನ ಪಡೆದಿರುವುದು ಹೆಮ್ಮೆ ಎಂದರು.

Advertisement

ಎಚ್ಕೆಆರ್‌ಡಿಬಿ ಮೈಕ್ರೋ ಯೋಜನೆಯಡಿ 161 ಕೋಟಿ ರೂ. ಹಾಗೂ ಮ್ಯಾಕ್ರೋ ಯೋಜನೆಯಡಿ 70 ಕೋಟಿ ರೂ.ಗಳ ಕ್ರಿಯಾ ಯೋಜನೆಗೆ ಅನುಮೋದನೆ ನೀಡಲಾಗಿದೆ. ಜಿಲ್ಲೆಗೆ 1,946 ಕುಡಿಯುವ ನೀರಿನ ಕಾಮಗಾರಿಗಳು ಮಂಜೂರಾಗಿದ್ದು, 1,341 ಮುಗಿದಿದ್ದು, 126 ಪ್ರಗತಿಯಲ್ಲಿರುತ್ತವೆ. ಅದಕ್ಕಾಗಿ 34.60 ಕೋಟಿ ರೂ. ಅನುದಾನ ಬಿಡುಗಡೆಯಾಗಿದ್ದು, 16.35 ಕೋಟಿ ರೂ. ಖರ್ಚಾಗಿದೆ. ಜಿಲ್ಲೆಯಲ್ಲಿ 34 ಬಹುಗ್ರಾಮ ಕುಡಿಯುವ ನೀರಿನ ಯೋಜನೆಗಳಿದ್ದು, ಅವುಗಳಲ್ಲಿ 21 ಪೂರ್ಣಗೊಂಡಿವೆ. 7 ಯೋಜನೆಗಳು ವಿವಿಧ ಹಂತದಲ್ಲಿ ಪ್ರಗತಿಯಲ್ಲಿರುತ್ತವೆ ಎಂದು ಹೇಳಿದರು.

ಅಭಿವೃದ್ಧಿ ಸಾಧ್ಯತೆಗಳ ಹಲವಾರು ಮಜಲು ಹೊಂದಿರುವ ಜಿಲ್ಲೆಯಾಗಿ ಮಾರ್ಪಟ್ಟಿದೆ. ಕೃಷಿಯಲ್ಲಿ ಸಮೃದ್ಧಿ, ತೋಟಗಾರಿಕೆಗೆ ಅವಕಾಶ, ಹೊಸ ಉದ್ದಿಮೆಗಳನ್ನು ಆಕರ್ಷಿಸುವ ಶಕ್ತಿ ಜಿಲ್ಲೆಗಿದೆ. ಜಿಲ್ಲಾಡಳಿತವು ಜನರ ಆಶೋತ್ತರಗಳಿಗೆ ಮಿಡಿಯುತ್ತ, ಅಭಿವೃದ್ಧಿ ಪರ ಚಿಂತನೆ ನಡೆಸುತ್ತಾ ಸಾಗಿದೆ. ಸರ್ಕಾರದ ಈ ಯತ್ನಕ್ಕೆ ಸಾರ್ವಜನಿಕರು ಕೈಗೂಡಿಸಿದಾಗ ಮಾತ್ರ ಆಶಯ ಕಾಣುವುದು ಸಾಧ್ಯ ಎಂದರು.

ಸಂಸದ ರಾಜಾ ಅಮರೇಶ್ವರ ನಾಯಕ, ಎಂಎಲ್ಸಿಗಳಾದ ಎನ್‌.ಎಸ್‌.ಬೋಸರಾಜ್‌, ಬಸವರಾಜ ಪಾಟೀಲ ಇಟಗಿ, ಜಿಪಂ ಸಿಇಒ ಲಕ್ಷ್ಮೀಕಾಂತರೆಡ್ಡಿ, ಎಸ್‌ಪಿ ಡಾ| ಸಿ.ಬಿ.ವೇದಮೂರ್ತಿ, ಅಪರ ಜಿಲ್ಲಾಧಿಕಾರಿ ಗೋವಿಂದರೆಡ್ಡಿ ಸೇರಿ ಇತರರು ಪಾಲ್ಗೊಂಡಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next