ಸಿದ್ಧಯ್ಯಸ್ವಾಮಿ ಕುಕನೂರು
ರಾಯಚೂರು: ಒಂದೆಡೆ ರಾಜ್ಯದಲ್ಲಿ ಸರ್ಕಾರಗಳು ನೆಲೆ ಕಂಡುಕೊಳ್ಳಲು ಹರಸಾಹಸ ಪಡುತ್ತಿದ್ದರೆ, ಮತ್ತೂಂದೆಡೆ ಸಾಲ ಮನ್ನಾ ಫಲಾನುಭವಿಗಳು ಗೊಂದಲಕ್ಕೆ ಸಿಲುಕುವಂಥ ಸ್ಥಿತಿ ನಿರ್ಮಾಣವಾಗಿದೆ.
ಸಾಲ ಮನ್ನಾದ ನಿರೀಕ್ಷೆಯಲ್ಲೇ ವರ್ಷಾನುಗಟ್ಟಲೇ ಮರುಪಾವತಿಸದೇ ಕುಳಿತಿರುವ ರೈತರಿಗೆ ಮುಂದೇನು ಎಂಬ ಆತಂಕ ಕಾಡುತ್ತಿದೆ. ವಿಳಂಬ ಮಾಡಿ ಅನಗತ್ಯ ಬಡ್ಡಿ ಕಟ್ಟುವ ಪ್ರಮೇಯ ಎದುರಾದರೆ ಏನು ಗತಿ ಎಂಬುದು ರೈತರ ಪ್ರಶ್ನೆ.
ಹಿಂದಿನ ದೋಸ್ತಿ ಸರ್ಕಾರ 2 ಲಕ್ಷ ರೂ. ಕೃಷಿ ಸಾಲ ಮನ್ನಾ ಮಾಡುವುದಾಗಿ ಘೋಷಿಸಿತ್ತು. ಆದರೆ, ನಾನಾ ಷರತ್ತುಗಳಿಂದ ಸಾಕಷ್ಟು ರೈತರು ಯೋಜನೆಯಿಂದ ವಂಚಿತರಾಗಿದ್ದರು. ಅರ್ಹರಿಗೆ ಸೌಲಭ್ಯ ಸಿಕ್ಕಿಲ್ಲ ಎಂಬ ಮಾತು ಕೇಳಿ ಬಂದಿದ್ದವು. ಯಾರಿಗೆ ಸಾಲ ಮನ್ನಾ ಆಗಿದೆ ಎಂಬ ಬಗ್ಗೆ ರೈತರ ಬಳಿಯೇ ಸ್ಪಷ್ಟ ಉತ್ತರವಿಲ್ಲ. ಈಗ ಹೊಸ ಸರ್ಕಾರ ಬಂದಿದ್ದು, ಹಿಂದಿನ ಸರ್ಕಾರದ ಯೋಜನೆಯನ್ನೇ ಯಥಾ ರೀತಿ ಜಾರಿಗೊಳಿಸುವುದೋ ಇಲ್ಲಾ ಬದಲಾಯಿಸುವುದೋ ಎಂಬ ನಿರೀಕ್ಷೆ ಮೂಡಿದೆ.
ಈಗಾಗಲೇ ಸಾಲ ಮನ್ನಾ ಬಗ್ಗೆ ಸಮ್ಮಿಶ್ರ ಸರ್ಕಾರ ಸಾಕಷ್ಟು ಮಾಹಿತಿ ಸಂಗ್ರಹಿಸಿ ದಾಖಲೆ ಬಿಡುಗಡೆ ಮಾಡಿತ್ತು. ಈಚೆಗೆ ಗ್ರಾಮ ವಾಸ್ತವ್ಯಕ್ಕೆಂದು ಜಿಲ್ಲೆಗೆ ಬಂದಿದ್ದ ಎಚ್.ಡಿ.ಕುಮಾರಸ್ವಾಮಿ ರಾಯಚೂರು ಜಿಲ್ಲೆಗೆ 272.22 ಕೋಟಿ ರೂ. ಸಾಲ ಮನ್ನಾದ ಹಣ ಜಮಾ ಮಾಡಲಾಗಿದೆ. ಆದರೆ, ಜಿಲ್ಲೆಯ ಸಹಕಾರಿ ಬ್ಯಾಂಕ್‌ಗಳಲ್ಲಿ 52,038 ಫಲಾನುಭವಿಗಳಿದ್ದು, 254 ಕೋಟಿ ರೂ. ಸಾಲವಿದ್ದರೆ, ವಾಣಿಜ್ಯ ಬ್ಯಾಂಕ್‌ಗಳಲ್ಲಿ 1,23,462 ಫಲಾನುಭವಿಗಳಿದ್ದು, 1600 ಕೋಟಿ ರೂ. ಸಾಲ ಬಾಕಿ ಇದೆ. ಕೆಲ ಸಹಕಾರಿ ಬ್ಯಾಂಕ್‌ಗಳಲ್ಲಿ ಮಾತ್ರ ರೈತರ ಸಾಲ ಮನ್ನಾ ಆಗಿದೆ ಎಂಬ ಮಾಹಿತಿ ಬಿಟ್ಟರೆ ರಾಷ್ಟ್ರೀಕೃತ ಬ್ಯಾಂಕ್‌ಗಳಲ್ಲಿ ಮನ್ನಾ ಆದ ಉದಾಹರಣೆ ಕಡಿಮೆ. ಯಾವೊಬ್ಬ ರೈತ ಕೂಡ ನನಗೆ ಸಂಪೂರ್ಣ ಸಾಲ ಮನ್ನಾ ಆಗಿದೆ ಎಂದು ಹೇಳಿಕೊಂಡ ನಿದರ್ಶನ ಕಡಿಮೆ. ಬದಲಿಗೆ ಅಕ್ಕಪಕ್ಕದ ಜಿಲ್ಲೆಗಳಲ್ಲಿ ಖಾತೆಗೆ ಜಮಾ ಮಾಡಿದ್ದ ಸಾಲ ಮನ್ನಾ ಹಣ ಮರಳಿ ಹೋಗಿದೆ ಎಂಬ ಸುದ್ದಿಗಳು ಕೇಳಿ ಬಂದರೆ, ಜಿಲ್ಲೆಯಲ್ಲಿ ಸಾಲ ಲೆಕ್ಕ ಚುಕ್ತಾ ಮಾಡಿಕೊಳ್ಳಲು ಬನ್ನಿ ಎಂದು ಬ್ಯಾಂಕ್ ಅಧಿಕಾರಿಗಳು ನೋಟಿಸ್ ನೀಡುವ ಪರಿಪಾಟ ಮುಂದುವರಿದಿದೆ.
ಷರತ್ತುಗಳಿಂದ ವಂಚನೆ: ಹಿಂದಿನ ಸರ್ಕಾರ ಸಾಲ ಮನ್ನಾ ಮಾಡಲು ವಿಧಿಸಿದ ನಾನಾ ಷರತ್ತುಗಳು ಸಾಕಷ್ಟು ರೈತರನ್ನು ಸಾಲ ಮನ್ನಾದಿಂದ ವಂಚನೆಗೊಳಗಾಗುವಂತೆ ಮಾಡಿದ್ದವು. 2009ರ ಈಚೆಗೆ ಹಾಗೂ 2016 ರೊಳಗೆ ಪಡೆದ ಸಾಲ ಮಾತ್ರ ಮನ್ನಾ ಆಗಲಿದೆ. ಸಾಲ ಮರುಪಾವತಿಸಿದವರಿಗೆ ಕೇವಲ 25 ಸಾವಿರ ರೂ. ನೀಡುವುದು, ಸಹಕಾರಿ ಮತ್ತು ರಾಷ್ಟ್ರೀಕೃತ ಬ್ಯಾಂಕ್‌ಗಳು ಎರಡರಲ್ಲೂ ಸಾಲ ಇದ್ದರೆ ಸಹಕಾರಿ ಬ್ಯಾಂಕ್‌ಗಳಲ್ಲಿ ಮಾತ್ರ ಮನ್ನಾ ಆಗುತ್ತದೆ ಎಂಬಂಥ ಷರತ್ತುಗಳಿಂದ ಸಾಕಷ್ಟು ರೈತರು ಯೋಜನೆಯಿಂದ ಹೊರಗುಳಿಯಬೇಕಾಯಿತು. ಇನ್ನು ದಾಖಲೆ ಸಲ್ಲಿಸುವ ವೇಳೆ ಪಡಿತರ ಚೀಟಿ ಕಡ್ಡಾಯ ಸಲ್ಲಿಸಬೇಕೆಂಬ ನಿಯಮ ಕೂಡ ಕೆಲ ರೈತರನ್ನು ಯೋಜನೆಯಿಂದ ವಂಚನೆಗೊಳಗಾಗುವಂತೆ ಮಾಡಿತು.
ನಿಯಮ ಸಡಿಲಿಕೆ ನಿರೀಕ್ಷೆ: ರಾಜ್ಯದಲ್ಲಿ ಬಿಜೆಪಿ ಸರ್ಕಾರ ಆಡಳಿತಕ್ಕೆ ಬಂದಿದ್ದು, ಯಶಸ್ವಿಯಾಗಿ ಮುಂದುವರಿದಿದ್ದೇ ಆದಲ್ಲಿ ಸಾಲ ಮನ್ನಾ ಯೋಜನೆ ಲಾಭ ಸಿಕ್ಕೇ ಸಿಗುತ್ತದೆ ಎಂಬ ವಿಶ್ವಾಸದಲ್ಲಿದೆ ರೈತಾಪಿ ವರ್ಗ. ಏಕೆಂದರೆ ಕೇಂದ್ರದಲ್ಲಿ ಕೂಡ ಬಿಜೆಪಿ ಸರ್ಕಾರ ಆಡಳಿತದಲ್ಲಿದ್ದು, ಹಿಂದೆ ಬಿ.ಎಸ್.ಯಡಿಯೂರಪ್ಪ ಒಂದು ಲಕ್ಷ ರೂ. ಸಾಲ ಮನ್ನಾ ಮಾಡುವ ಭರವಸೆ ನೀಡಿದ್ದರು. ಕೆಲ ನಿಯಮಗಳಿಂದ ಸಾಲ ಮನ್ನಾ ಯೋಜನೆಯಿಂದ ವಂಚಿತರಾದ ರೈತರಿಗೆ ಅನುಕೂಲ ಕಲ್ಪಿಸುವ ನಿಟ್ಟಿನಲ್ಲಿ ಹೊಸ ಸರ್ಕಾರ ನಿಯಮ ಸಡಿಲಿಕೆ ಮಾಡಬಹುದೇ ಎಂಬ ವಿಶ್ವಾಸ ರೈತರಲ್ಲಿದೆ.
ಹಿಂದಿನ ಸರ್ಕಾರ ಸಾಲ ಮನ್ನಾ ಯೋಜನೆಯನ್ನು ಅವೈಜ್ಞಾನಿಕವಾಗಿ ಜಾರಿಗೊಳಿಸಿತು. 2ಲಕ್ಷ ರೂ. ಮನ್ನಾ ಮಾಡುವುದಾಗಿ ಹೇಳಿ ಅನಗತ್ಯ ಷರತ್ತುಗಳನ್ನು ಒಡ್ಡುವ ಮೂಲಕ ಸಾಕಷ್ಟು ರೈತರನ್ನು ವಂಚಿಸಿತು. ಸಾಲ ಮನ್ನಾ ಯೋಜನೆಗೆ ಸಂಪುಟದಲ್ಲಿ ಒಪ್ಪಿಗೆ ಪಡೆದ ಕಾರಣ ಹೊಸ ಸರ್ಕಾರ ಅದನ್ನು ಜಾರಿ ಮಾಡಲೇಬೇಕು. ಅದರ ಜತೆ ಎಲ್ಲ ರೈತರು ಯೋಜನೆಗೊಳಪಡುವಂತೆ ನಿಯಮಗಳನ್ನು ಸಡಿಲಿಕೆ ಮಾಡಬೇಕು. ಕೇಂದ್ರದಲ್ಲೂ ಬಿಜೆಪಿ ಅಧಿಕಾರದಲ್ಲಿರುವ ಕಾರಣ ಅನಗತ್ಯ ವಿಳಂಬ ಮಾಡದೆ ಎಲ್ಲ ರೈತರ ಕೃಷಿ ಸಾಲ ಮನ್ನಾ ಮಾಡಬೇಕು.
•
ಚಾಮರಸ ಮಾಲಿಪಾಟೀಲ,
ರಾಜ್ಯ ಗೌರವಾಧ್ಯಕ್ಷ, ರೈತ ಸಂಘ ಹಾಗೂ ಹಸಿರು ಸೇನೆ