ರಾಯಚೂರು: ಮುಂಗಾರು ಹಂಗಾಮಿನಲ್ಲಿ ಬಿತ್ತನೆ ಮಾಡಿ ಮಳೆಗಾಗಿ ವಿವಿಧ ಪೂಜೆ ಮಾಡಿದರೂ ಕೃಪೆ ತೋರದ ವರುಣ ಈಗ ಬೆಳೆದು ನಿಂತ ಬೆಳೆ ಹಾಳಾಗುವಷ್ಟು ಸುರಿಯುತ್ತಿದ್ದಾನೆ. ಇದರಿಂದ ರೈತರು ಮತ್ತೆ ಸಂಕಷ್ಟದಲ್ಲಿ ಕಾಲದೂಡುವಂತಾಗಿದೆ. ಕಳೆದ ಕೆಲ ದಿನಗಳಿಂದ ಜಿಲ್ಲೆಯಲ್ಲಿ ಬಿಟ್ಟು ಬಿಡದೆ ಮಳೆ ಸುರಿಯುತ್ತಿದೆ. ಹಿಂಗಾರು ಹಂಗಾಮಿಗೆ ಮಳೆ ಅಗತ್ಯವಿತ್ತು. ಕೆಲ ದಿನಗಳ ಹಿಂದೆ ಬಿತ್ತನೆಗೆ ಬೇಕಾಗುವಷ್ಟು ಮಳೆ ಬಂದಿದೆ. ರೈತರ ಮೊಗದಲ್ಲಿ ಸಂತಸ ಮೂಡಿತ್ತು. ಆದರೆ, ಈಗ ಬಿಟ್ಟು ಬಿಡದೆ ಸುರಿಯತ್ತಿರುವುದರಿಂದ ಈಗಾಗಲೇ ಬೆಳೆದು ನಿಂತಿರುವ ತೊಗರಿ, ಹತ್ತಿ, ಉಳ್ಳಾಗಡ್ಡಿ ಸೇರಿ ಇನ್ನಿತರ ಬೆಳೆಗಳು ಕೊಳೆಯುವ ಹಂತ ತಲುಪಿವೆ.
ಈಗಾಗಲೇ ಕೆಲವೆಡೆ ಜಮೀನುಗಳಲ್ಲಿ ನೀರು ನಿಂತು ಕಾಂಡ ಕೊಳೆಯುತ್ತಿದ್ದರೆ, ಇನ್ನೂ ಕೆಲವೆಡೆ ಹತ್ತಿ ನೆಲಕ್ಕೊರಗಿ ಮಣ್ಣಾಗುತ್ತಿದೆ. ತೊಗರಿ ಹೂ ಬಿಡುವ ಹೊತ್ತಲ್ಲಿ ಹೀಗೆ ಮಳೆ ಸುರಿದ ಪರಿಣಾಮ ಗಿಡ ಕೆಂಪಾಗಿ ಹೂ ಉದುರುತ್ತಿವೆ. ಇನ್ನೂ ಹಿಂಗಾರು ಹಂಗಾಮಿನಲ್ಲಿ ಜೋಳ ಬಿತ್ತಲು ಹೊಲ ಹಸನು ಮಾಡಿಕೊಂಡ ರೈತರಿಗೆ ಕಸ ಹೆಚ್ಚಾಗುವ ಭೀತಿ ಶುರುವಾಗಿದೆ.
ಮುಂಗಾರು ಹಂಗಾಮಿನಲ್ಲಿ ಅಗತ್ಯದಷ್ಟು ಸರಿಯಾಗಿ ಬಾರದ ಕಾರಣ ಕೆಲವೆಡೆ ರೈತರು ಬೆಳೆ ಕೆಡಿಸಿ ಹಿಂಗಾರಿಗೆ ಸಿದ್ಧತೆ ಮಾಡಿಕೊಂಡಿದ್ದರು. ಆದರೆ, ಅಲ್ಪಸ್ವಲ್ಪ ಮಳೆಗೆ ಬೆಳೆದಿದ್ದರಿಂದ ಅನೇಕರು ಹಾಗೆ ಬಿಟ್ಟಿದ್ದರು. ಅದಕ್ಕೆ ಪುಷ್ಟಿ ನೀಡುವಂತೆ ಮಳೆ ಬಂದ ಕಾರಣ ರೈತರೂ ಹಿಗ್ಗಿದ್ದರು. ಆದರೆ, ಈಗ ಬೇಡ ಎಂದರೂ ಬಿಡದಷ್ಟು ಮಳೆ ಸುರಿಯುವ ಕಾರಣ ಬೆಳೆಗೆ ಕುತ್ತುಂಟಾಗಿದೆ.
ನೀರು ನಿಂತು ಹಸಿ ಹೆಚ್ಚಳ: ಕಳೆದ ಎರಡ್ಮೂರು ದಿನಗಳಿಂದ ಬಿಟ್ಟು
ಬಿಡದಂತೆ ಮಳೆ ಸುರಿದ ಪರಿಣಾಮ ಎರೆಭೂಮಿಗಳಲ್ಲಿ ಹಸಿ ಪ್ರಮಾಣ ಹೆಚ್ಚಾಗಿದೆ. ಇದರಿಂದ ಕಾಂಡ ಕೊಳೆಯುತ್ತಿದೆ. ಹತ್ತಿ, ತೊಗರಿ, ಉಳ್ಳಾಗಡ್ಡಿ ಬೆಳೆ ಅಪಾಯಕ್ಕೆ ಸಿಲುಕಿದೆ. ರೈತರು ಜಮೀನಿನಲ್ಲಿ ನೀರು ನಿಲ್ಲದಂತೆ ನೋಡಿಕೊಂಡರೂ ಪ್ರಯೋಜನವಾಗುತ್ತಿಲ್ಲ.
ಇಳುವರಿಗೆ ಕುತ್ತು: ಒಂದೆಡೆ ಮಾರುಕಟ್ಟೆಯಲ್ಲಿ ಉಳ್ಳಾಗಡ್ಡಿ ದರ ಹಾವು ಏಣಿಯಾಟವಾಡುತ್ತಿದೆ. ಮುಕ್ತ ಮಾರುಕಟ್ಟೆಯಲ್ಲಿ ಉಳ್ಳಾಗಡ್ಡಿ ಬೆಲೆ ಗಗನಕ್ಕೇರಿದರೂ ಎಪಿಎಂಸಿಗಳಲ್ಲಿ ರೈತರಿಗೆ ಲಾಭ ಸಿಗುತ್ತಿಲ್ಲ. ಇಂಥ ವೇಳೆ ಉತ್ತಮ ಇಳುವರಿ ಬಾರದಿದ್ದಲ್ಲಿ ವರ್ತಕರು
ಉತ್ಪನ್ನ ತಿರಸ್ಕರಿಸುವ ಸಾಧ್ಯತೆಗಳಿವೆ. ಇದು ರೈತರನ್ನು ಆತಂಕಕ್ಕೆಡೆ ಮಾಡಿದೆ. ಇನ್ನೂ ತೊಗರಿ, ಹತ್ತಿ ಕೂಡ ಎಕರೆ 3-4 ಕ್ವಿಂಟಲ್ ಬಾರದಿದ್ದಲ್ಲಿ ರೈತರಿಗೆ ಖರ್ಚು ಮಾಡಿದ ಹಣ ಮರಳಿ ಪಡೆಯುವುದು ಕಷ್ಟವಾಗಲಿದೆ.