ರಾಯಚೂರು: ಕಳೆದ ಐದು ತಿಂಗಳಿಂದ ತೊಗರಿಯನ್ನು ಖರೀದಿಸಿ ಹಣ ಪಾವತಿಸದೆ ಸರ್ಕಾರ ಅನಗತ್ಯ ವಿಳಂಬ ನೀತಿ ಅನುಸರಿಸುತ್ತಿದ್ದು, ಕೂಡಲೇ ಹಣ ಪಾವತಿಗೆ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿ ಕರ್ನಾಟಕ ರಾಜ್ಯ ರೈತರ ಸಂಘ ಹಾಗೂ ಹಸಿರು ಸೇನೆ ಸದಸ್ಯರು ಮಂಗಳವಾರ ಪ್ರತಿಭಟನೆ ನಡೆಸಿದರು
ಬಳಿಕ ಜಿಲ್ಲಾಧಿಕಾರಿ ಕಚೇರಿ ಅಧಿಕಾರಿಗೆ ಮನವಿ ಸಲ್ಲಿಸಿ, ಕಳೆದ ಜ.25ರಂದು ರೈತರಿಂದ ತೊಗರಿ ಖರೀದಿ ಕೇಂದ್ರಗಳಲ್ಲಿ ತೊಗರಿ ಖರೀದಿಸಲಾಗಿದೆ. ಆದರೆ, ಬೆಂಬಲ ಬೆಲೆ ನಿರೀಕ್ಷೆಯಲ್ಲಿ ನೂರಾರು ರೈತರು ತೊಗರಿ ಮಾರಿದ್ದು, ಈವರೆಗೂ ಬಾಕಿ ಹಣ ಪಾವತಿಯಾಗಿಲ್ಲ. ಖಾಸಗಿ ವರ್ತಕರಿಗೆ ಮಾರಿದರೆ ಕೂಡಲೇ ಹಣ ಪಾವತಿಯಾಗುತ್ತಿದ್ದು, ಸರ್ಕಾರವೇ ಸಕಾಲಕ್ಕೆ ನೀಡದಿರುವುದು ರೈತರನ್ನು ಚಿಂತೆಗೀಡು ಮಾಡಿದೆ ಎಂದು ದೂರಿದರು.
ಸರ್ಕಾರದ ಖರೀದಿ ಕೇಂದ್ರದಲ್ಲಿ ತೊಗರಿ ಮಾರಿ ನಾಲ್ಕು ತಿಂಗಳಾದರೂ ಈವರೆಗೂ ಹಣ ಜಮೆಯಾಗಿಲ್ಲ. ಇನ್ನೇನು ಮುಂಗಾರು ಶುರುವಾಗುತ್ತಿದ್ದು, ರೈತರಿಗೆ ನಾನಾ ಖರ್ಚುಗಳು ಎದುರಾಗಿವೆ. ಸಕಾಲಕ್ಕೆ ಹಣ ಸಿಗದಿದ್ದರೆ ಪುನಃ ಖಾಸಗಿ ವರ್ತಕರ ಬಳಿಯೇ ಸಾಲ ಮಾಡಬೇಕಿದೆ. ಹೀಗಾಗಿ ಕೂಡಲೇ ಬಾಕಿ ಹಣ ಪಾವತಿಸುವ ಮೂಲಕ ರೈತರನ್ನು ಸಂಕಷ್ಟದಿಂದ ಪಾರು ಮಾಡಬೇಕು ಎಂದು ಒತ್ತಾಯಿಸಿದರು.
ಉದ್ಯೋಗ ಖಾತರಿ ಯೋಜನೆಯಡಿ ಕೆಲಸಕ್ಕಾಗಿ ಸಲ್ಲಿಕೆಯಾದ ಅರ್ಜಿಗಳ ವಿಲೇವಾರಿ ಮಾಡದ ಅಧಿಕಾರಿಗಳ ವಿರುದ್ಧ ಕ್ರಮ ಜರುಗಿಸಬೇಕು. ಅಗತ್ಯದಷ್ಟು ಕೂಲಿ ನೀಡುವ ಮೂಲಕ ಸರ್ಕಾರಕ್ಕೆ ಅನುಕೂಲ ಮಾಡಿಕೊಡಬೇಕು ಎಂದು ಒತ್ತಾಯಿಸಿದರು. ತಕ್ಷಣಕ್ಕೆ ಬಾಕಿ ಹಣ ಪಾವತಿಯಾಗದಿದ್ದಲ್ಲಿ ಜಿಲ್ಲಾಧಿಕಾರಿ ಕಚೇರಿ ಎದುರು ತೀವ್ರತರ ಹೋರಾಟಕ್ಕೆ ಮುಂದಾಗುವುದಾಗಿ ಪ್ರತಿಭಟನಾಕಾರರು ಎಚ್ಚರಿಸಿದರು.
ಸಂಘದ ಜಿಲ್ಲಾಧ್ಯಕ್ಷ ಎನ್.ಲಕ್ಷ್ಮಣಗೌಡ ಕಡಗಂದೊಡ್ಡಿ, ಜಿಲ್ಲಾ ಉಪಾಧ್ಯಕ್ಷ ನರಸರೆಡ್ಡಿ, ಕೆ.ವೀರೇಶಗೌಡ ಕಡಗಂದೊಡ್ಡಿ, ದೇವರಾಜ ನಾಯಕ ಮಮದಾಪುರ, ಹುಲಿಗೆಪ್ಪ ಜಾಲಿಬೆಂಚಿ ಗಚ್ಚಿನಮನೆ, ತಿಮ್ಮಪ್ಪ ಬಾಪುರು, ನಾಗರಾಜ, ಗೋವಿಂದ ಕುಕ್ಕಲ ಕ್ಯಾಂಪ್, ಹುಸೇನ ನೆಲೆಹಾಳ, ಲಾಜರ್ ನೆಲಹಾಳ ಸೇರಿ ಅನೇಕರಿದ್ದರು.