Advertisement
ನಗರದ ಹಮ್‌ದದ್‌ರ್ ಶಾಲಾ ಆವರಣದಲ್ಲಿ ಬುಧವಾರ ಏರ್ಪಡಿಸಿದ್ದ ತಾರಾನಾಥ ಶಿಕ್ಷಣ ಸಂಸ್ಥೆ ಹಾಗೂ ಹಮ್‌ದದ್‌ರ್ ಶಾಲೆ ಶತಮಾನೋತ್ಸವ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು. ಸಾಧಕರಿಗೆ ಬಡತನ, ಕಷ್ಟಗಳು ಮುಖ್ಯವಾಗುವುದೇ ಇಲ್ಲ. ತಾರಾನಾಥ ಕೂಡ ತಮ್ಮ ಕಷ್ಟದ ಬದುಕಿನಲ್ಲೂ ಅಂದು ನೆಟ್ಟ ಸಸಿ ಹೆಮ್ಮರವಾಗಿ ಬೆಳೆದು ನಿಂತಿದೆ. ಕಷ್ಟ-ಸುಖ ಯಾವಾಗಲೂ ಕ್ಷಣಿಕ. ಆದರೆ, ವ್ಯಕ್ತಿತ್ವ ಸಂಪಾದಿಸಿದರೆ ಅದು ಯಾವಾಗಲೂ ಪ್ರಖರವಾಗಿ ಬೆಳೆಯುತ್ತಲೇ ಸಾಗುತ್ತದೆ. ಅದಕ್ಕೆ ಉತ್ತಮ ಉದಾಹರಣೆಯೇ ತಾರಾನಾಥರು ಎಂದರು.
Related Articles
Advertisement
ಸಾನ್ನಿಧ್ಯ ವಹಿಸಿದ್ದ ಮಂತ್ರಾಲಯದ ಶ್ರೀ ರಾಘವೇಂದ್ರ ಸ್ವಾಮಿ ಮಠದ ಪೀಠಾಧಿಪತಿ ಶ್ರೀ ಸುಬುಧೇಂದ್ರ ತೀರ್ಥರು ಮಾತನಾಡಿ, ಇಂದು ಶಿಕ್ಷಣ ಸುಖದಿಂದ ಕೂಡಿರಬೇಕು ಎಂದು ಬಯಸುತ್ತಾರೆ. ಆದರೆ, ಯಾವ ಶಿಕ್ಷಣ ಕಠಿಣವಾಗಿರುವುದೋ ಅದಕ್ಕೆ ಮೌಲ್ಯ ಹೆಚ್ಚು. ಇಂದು ಎಸಿ ತರಗತಿಗಳಲ್ಲಿ ಅತ್ಯುತ್ತಮ ಪೀಠೊಪಕರಗಣಗಳ ಮಧ್ಯೆ ಶಿಕ್ಷಣ ಕಲಿಸುವ ಪದ್ಧತಿ ಹೆಚ್ಚು. ಸಮಾಜದ ಕೆಳ ಹಂತದವರಿಗೆ ಶಿಕ್ಷಣ ನೀಡುವ ಅಗತ್ಯವಿದೆ ಎಂಬ ಉದ್ದೇಶದಿಂದ ತಾರಾನಾಥರು ಶುರು ಮಾಡಿದ ಶಿಕ್ಷಣ ಸಂಸ್ಥೆ ಇಂದು ಸಾವಿರಾರು ಮಕ್ಕಳಿಗೆ ವಿದ್ಯಾದಾನ ಮಾಡುತ್ತಿದೆ. ಇದು ಹೀಗೆ ನಿರಂತರವಾಗಿ ಸಾಗಲಿ ಎಂದು ಆಶಿಸಿದರು.
ತಾರಾನಾಥ ಶಿಕ್ಷಣ ಸಂಸ್ಥೆ ಅಧ್ಯಕ್ಷ ಪಾರಸಮಲ್ ಸುಖಾಣಿ ಅಧ್ಯಕ್ಷತೆ ವಹಿಸಿದ್ದರು. ಕಾರ್ಯದರ್ಶಿ ಮಸ್ಕಿ ನಾಗರಾಜ, ಆಡಳಿತ ಮಂಡಳಿ ಸದಸ್ಯ ಅಂಬಾಪತಿ ಪಾಟೀಲ ಇದ್ದರು.
ಸಮಾರಂಭಕ್ಕೂ ಮುನ್ನ ಬೆಳಗ್ಗೆ ಪುರುಷ ಹಾಗೂ ಮಹಿಳೆಯರ ಮ್ಯಾರಾಥಾನ್ ಸ್ಪರ್ಧೆ ನಡೆಯಿತು. ಬಳಿಕ ಶಾಲಾ ಆವರಣದಲ್ಲಿ ಸ್ಥಾಪಿಸಿದ ಪಂ| ತಾರಾನಾಥರ ಪುತ್ಥಳಿಯನ್ನು ಗಣ್ಯರು ಲೋಕಾರ್ಪಣೆ ಮಾಡಿದರು.
ಮಾಜಿ ಸಿಎಂ ಸಿದ್ದು ಬಗ್ಗೆ ಸುಖಾಣಿ ಬೇಸರ: ತಾರಾನಾಥ ಶಿಕ್ಷಣ ಸಂಸ್ಥೆಯ ಅಧ್ಯಕ್ಷ ಪಾರಸಮಲ್ ಸುಖಾಣಿ ಮಾತನಾಡುವಾಗ, ನಮ್ಮ ಸಂಸ್ಥೆ ಸಾಕಷ್ಟು ಹಳೆಯದಾಗಿದ್ದು, ಕಡಿಮೆ ದರದಲ್ಲಿ ಶಿಕ್ಷಣ ನೀಡುತ್ತಿದೆ. ಹಿಂದೆ ಸಿಎಂ ಆಗಿದ್ದ ಸಿದ್ಧರಾಮಯ್ಯ ಅವರ ಬಳಿ ಸಂಸ್ಥೆ ಅಭಿವೃದ್ಧಿಗಾಗಿ ಒಂದೆರಡು ಕೋಟಿ ಬಿಡುಗಡೆ ಮಾಡುವಂತೆ ಮನವಿ ಮಾಡಿದ್ದೆ. ಆದರೆ, ಅವರು ಕೊನೆಗೂ ಮಾಡಲಿಲ್ಲ ಎಂದು ಬೇಸರ ವ್ಯಕ್ತಪಡಿಸಿದರು. ಸಿಎಂ ಎಚ್.ಡಿ.ಕುಮಾರಸ್ವಾಮಿಗೂ ಮನವಿ ಮಾಡಿದ್ದಾಗಿ ತಿಳಿಸಿದರು.
ಗೈರಾದ ಕೊಪ್ಪಳ ಗವಿಶ್ರೀ: ಕಾರ್ಯಕ್ರಮಕ್ಕೆ ವಿಶೇಷ ಆಹ್ವಾನಿತರನ್ನಾಗಿ ಕೊಪ್ಪಳದ ಗವಿಮಠದ ಶ್ರೀ ಗವಿಸಿದ್ದೇಶ್ವರ ಸ್ವಾಮಿಗಳನ್ನು ಆಹ್ವಾನಿಸಲಾಗಿತ್ತು. ಅವರು ಬರುತ್ತಾರೆ ಎಂದೇ ಸಾಕಷ್ಟು ಜನ ನಿರೀಕ್ಷೆ ಇಟ್ಟುಕೊಂಡು ಕಾರ್ಯಕ್ರಮಕ್ಕೆ ಆಗಮಿಸಿದ್ದರು. ಆದರೆ, ಶ್ರೀಗಳು ಗೈರಾಗಿದ್ದು ಜನರಿಗೆ ಬೇಸರ ಮೂಡಿಸಿತು.
ಸಮಯ ತಿಂದ ಸನ್ಮಾನ: ಕಾರ್ಯಕ್ರಮದಲ್ಲಿ ಸುಮಾರು ಒಂದೂವರೆ ಗಂಟೆಗೂ ಅಧಿಕ ಕಾಲ ಸನ್ಮಾನ ಸಮಾರಂಭವೇ ನಡೆದಿದ್ದರಿಂದ ನೆರೆದ ಜನರ ತಾಳ್ಮೆ ಪರೀಕ್ಷಿಸುವಂತಾಗಿತ್ತು. ಹಳೇ ವಿದ್ಯಾರ್ಥಿಗಳು, ಬೋಧಕರು, ನಿವೃತ್ತ ನೌಕರರು, ಅವರ ಸಂಬಂಧಿಗಳು, ದೇಣಿಗೆದಾರರು ಹೀಗೆ ಸನ್ಮಾನಿತರ ಪಟ್ಟಿ ದೊಡ್ಡದಾಗಿತ್ತು. ಮಧ್ಯಾಹ್ನ ಒಂದೂವರೆಯಾದರೂ ಸನ್ಮಾನ ಮುಗಿಯದ ಕಾರಣ ಜನ ಊಟಕ್ಕೆ ಎದ್ದು ಹೋಗುತ್ತಿದ್ದ ದೃಶ್ಯ ಸಾಮಾನ್ಯವಾಗಿತ್ತು. ಮುಖ್ಯ ಗಣ್ಯರ ಭಾಷಣಕ್ಕೆ ಜನರ ಕೊರತೆ ಕಂಡು ಬಂತು. ಇನ್ನು ಊಟಕ್ಕೂ ವಿದ್ಯಾರ್ಥಿಗಳು ಗಂಟೆಗಟ್ಟಲೇ ಕಾಯುವಂತಾಗಿತ್ತು. ವಿದ್ಯಾರ್ಥಿಗಳಿಗೆ ಪ್ರತ್ಯೇಕ ಊಟದ ವ್ಯವಸ್ಥೆ ಮಾಡಲಾಗಿತ್ತು. ವಿದ್ಯಾರ್ಥಿಗಳು ಗೇಟ್ ಮುಂದೆ ಕಾದು ನಿಂತಿದ್ದರೆ, ಹಂತ ಹಂತವಾಗಿ ಒಳಗೆ ಬಿಡಲಾಗುತ್ತಿತ್ತು. ಇದರಿಂದ ಅಲ್ಲಿಯೂ ವಿದ್ಯಾರ್ಥಿಗಳು ಗಂಟೆಗಟ್ಟಲೇ ಕಾದು ನಿಲ್ಲುವಂತಾಗಿತ್ತು.