ರಾಯಚೂರು: ವೃಂದ ಮತ್ತು ನೇಮಕಾತಿಯಲ್ಲಿ ಆಗಿರುವ ಅನ್ಯಾಯ ಸರಿಪಡಿಸುವಂತೆ ಆಗ್ರಹಿಸಿ ಕರ್ನಾಟಕ ರಾಜ್ಯ ಸರ್ಕಾರಿ ಎನ್‌ಪಿಎಸ್ ನೌಕರರ ಸಂಘ ಹಾಗೂ ಕರ್ನಾಟಕ ರಾಜ್ಯ ಪ್ರಾಥಮಿಕ ಶಾಲಾ ಪದವೀಧರ ಶಿಕ್ಷಕರ ಸಂಘದ ಸದಸ್ಯರು ಶನಿವಾರ ಮೌನ ಪ್ರತಿಭಟನೆ ನಡೆಸಿದರು.
ನಗರದ ಅಂಬೇಡ್ಕರ್ ವೃತ್ತದಿಂದ ಬಸವೇಶ್ವರ ವೃತ್ತ, ಜಿಲ್ಲಾಧಿಕಾರಿ ಕಚೇರಿ ಮಾರ್ಗವಾಗಿ ಡಿಡಿಪಿಐ ಕಚೇರಿವರೆಗೆ ಪ್ರತಿಭಟನಾ ರ್ಯಾಲಿ ನಡೆಸಿದ ಪ್ರತಿಭಟನಾಕಾರರು. ಬಳಿಕ ಡಿಡಿಪಿಐ ಮೂಲಕ ಮುಖ್ಯಮಂತ್ರಿಗೆ ಮನವಿ ಸಲ್ಲಿಸಿದರು. ಸೇವಾ ನಿರತ ಪ್ರಾಥಮಿಕ ಪದವೀಧರ ಶಿಕ್ಷಕರು ಜುಲೈ 1ರಿಂದ 6ರಿಂದ 8ನೇ ತರಗತಿ ಬೋಧನೆ ಬಹಿಷ್ಕರಿಸುತ್ತಿದ್ದು, ಬೇಡಿಕೆ ಈಡೇರುವರೆಗೂ ಹೋರಾಟದಿಂದ ಹಿಂದೆ ಸರಿಯುವುದಿಲ್ಲ. ಈ ಅವಧಿಯಲ್ಲಿ ಶಿಕ್ಷಕರನ್ನು ಯಾವುದೇ ಕಾರಣಕ್ಕೂ 6ರಿಂದ 8ನೇ ತರಗತಿಗಳಿಗೆ ಸಂಬಂದಿಸಿದ ತರಬೇತಿಗಳಿಗೆ ನಿಯೋಜಿಸಬಾರದು. 1ರಿಂದ 7ನೇ ತರಗತಿಗಳಿಗೆ ನೇಮಕಗೊಂಡ ಶಿಕ್ಷಕರು 2005ರಿಂದ 6ರಿಂದ 8ನೇ ತರಗತಿ ಸೇವೆಯಲ್ಲಿರುವ ಪದವೀಧರ ಶಿಕ್ಷಕರು ಬೋಧಿಸುತ್ತಿದ್ದಾರೆ ಎಂದು ವಿವರಿಸಿದರು.
ಪದವಿ ಹಾಗೂ ವಿದ್ಯಾರ್ಹತೆ, ಸೇವಾನುಭವ ಹೊಂದಿದ್ದರೂ ಪರಿಗಣಿಸದೇ ಪ್ರಾಥಮಿಕ ಶಾಲಾ ಶಿಕ್ಷಕರನ್ನು ವೃಂದಕ್ಕೆ ಸೇರಿಸುವ ಮೂಲಕ ಪದವೀಧರ ಶಿಕ್ಷಕರಿಗೆ ಅನ್ಯಾಯ ಮಾಡಲಾಗುತ್ತಿದೆ. ಅರ್ಹತೆ ಇದ್ದರೂ ಬೋಧನೆಗೆ ಅವಕಾಶವಿಲ್ಲದ ಸ್ಥಿತಿ ನಿರ್ಮಾಣವಾಗಲಿದೆ. ಹೀಗಾಗಿ ನಮಗಾದ ಅನ್ಯಾಯಕ್ಕೆ ನ್ಯಾಯ ಸಿಗುವವರೆಗೆ 1 ರಿಂದ 5ನೇ ತರಗತಿವರೆಗೆ ಮಾತ್ರ ಬೋಧಿಸುವುದಾಗಿ ತಿಳಿಸಿದರು.
ಪ್ರಾಥಮಿಕ ಶಾಲಾ ಶಿಕ್ಷಕರು ಒಂದರಿಂದ ಐದನೇ ತರಗತಿ ವಿಷಯಗಳನ್ನು ಮಾತ್ರ ಬೋಧಿಸುತ್ತಿದ್ದು, ಮುಂದಿನ ಜುಲೈ 1ರಿಂದ 6ರಿಂದ 8ನೇ ತರಗತಿಗಳನ್ನು ಬಹಿಷ್ಕರಿಸುತ್ತಿರುವುದಾಗಿ. ಇಲಾಖೆಯು ಆಯೋಜಿಸುವ ಯಾವುದೇ ತರಗತಿಗಳಿಗೆ ಸಂಬಂಸಿ ಎಲ್ಲ ತರಬೇತಿಗಳನ್ನು ಸಂಪೂರ್ಣವಾಗಿ ಬಹಿಷ್ಕರಿಸಲು ನಿರ್ಧರಿಸಿದ್ದರಿಂದ ಜಿಲ್ಲಾ ಸಾರ್ವಜನಿಕ ಶಿಕ್ಷಣ ಇಲಾಖೆ ಯಾವುದೇ ತರಗತಿಗಳಿಗೆ ನಿಯೋಜಿಸಬಾರದು ಎಂದು ಒತ್ತಾಯಿಸಿದರು.
ಶಿಕ್ಷಕರ ಸಂಘಗಳ ಸದಸ್ಯರಾದ ಮಹಾಂತೇಶ ಬಿರಾದಾರ, ನಂದೀಶ, ಪ್ರಸನ್ನ, ಮುನಿರಾಜು, ರಮೇಶ, ಸುಗೂರೇಶ, ಅನ್ವರ್, ಸುವರ್ಣ, ತಿರುಮಲಾಚಾರ್ಯ, ಅಮರೇಶ, ವೀರೇಶ, ವೀಣಾ, ದಿವ್ಯಾ, ಸುವರ್ಣ ಧನಲಕ್ಷ್ಮೀ, ವಿನಯ, ರಾಮಣ್ಣ ಇತರರು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.