ರಾಯಚೂರು: ಭಾರತದ ಅಭಿವೃದ್ಧಿ ಕುಶಲಕರ್ಮಿಗಳ ಮೇಲೆ ನಿಂತಿದೆ. ಕೌಶಲ್ಯಾಭಿವೃದ್ಧಿಗೆ ಬೇಕಾದ ಅಗತ್ಯ ನೆರವು ನೀಡಲು ಸದಾ ಸಿದ್ಧ ಎಂದು ಉಪ ಮುಖ್ಯಮಂತ್ರಿ, ಉನ್ನತ ಶಿಕ್ಷಣ, ಕೌಶಲ್ಯಾಭಿವೃದ್ಧಿ, ಉದ್ಯಮಶೀಲತೆ ಮತ್ತು ಜೀವನೋಪಾಯ ಇಲಾಖೆ, ಐಟಿ ಮತ್ತು ಬಿಟಿ ಹಾಗೂ ವಿಜ್ಞಾನ ಮತ್ತು ತಂತ್ರಜ್ಞಾನ ಇಲಾಖೆ ಸಚಿವ ಡಾ| ಅಶ್ವತ್ಥ ನಾರಾಯಣ ಸಿ.ಎನ್. ಹೇಳಿದರು.
ನಗರದ ಸರ್ಕಾರಿ ಕೈಗಾರಿಕಾ ತರಬೇತಿ ಸಂಸ್ಥೆಯಲ್ಲಿ ಇತ್ತೀಚೆಗೆ ಹಮ್ಮಿಕೊಂಡ ತರಬೇತಿದಾರರೊಂದಿಗೆ ಸಂವಾದ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು. ದೇಶಕ್ಕೆ ಮಾದರಿಯಾಗುವ ರೀತಿಯಲ್ಲಿ ತರಬೇತಿದಾರರು ಕೌಶಲ್ಯ ಹೆಚ್ಚಿಸಿಕೊಳ್ಳಬೇಕು. ಕೌಶಲ್ಯತೆಗೆ ಜಪಾನ್ ಮತ್ತು ಜರ್ಮನಿ ದೇಶಗಳ ಅನುಕರಣೆ ಮಾಡಿದಲ್ಲಿ ಭಾರತವು ಮುಂಚೂಣಿ ರಾಷ್ಟ್ರವಾಗುವುದನ್ನು ತಡೆಯಲು ಯಾರಿಂದಲೂ ಸಾಧ್ಯವಿಲ್ಲ ಎಂದು ಹೇಳಿದರು.
ಕೈಗಾರಿಕಾ ತರಬೇತಿ ಮತ್ತು ಉದ್ಯೋಗ ಇಲಾಖೆ ಆಯುಕ್ತರಾದ ಕೆ.ಪಿ.ಮೋಹನರಾಜ್ ಮಾತನಾಡಿ, 1958ರಲ್ಲಿ ಪ್ರಾರಂಭವಾದ ರಾಯಚೂರು ಸಂಸ್ಥೆಯನ್ನು ಉನ್ನತೀಕರಣಗೊಳಿಸುವುದಾಗಿ ಭರವಸೆ ನೀಡಿದರು.
ಜಿಲ್ಲಾ ಕೇಂದ್ರದಲ್ಲಿ ಕೆ.ಜಿ.ಟಿ.ಟಿ.ಐ. ತರಬೇತಿ ಕೇಂದ್ರ ಪ್ರಾರಂಭಿಸಲು ಸಚಿವರೊಂದಿಗೆ ಚರ್ಚಿಸಲಾಗುವುದು ಹಾಗೂ ಐಟಿಐ. ಮುಗಿದ ತರಬೇತಿದಾರರಿಗೆ ಜಿಲ್ಲೆಯಲ್ಲಿ ಹೆಚ್ಚಿನ ಸಂಖ್ಯೆಯ ಶಿಶಿಕ್ಷು ತರಬೇತಿಗೆ ಅವಕಾಶ ಕಲ್ಪಿಸಲಾಗುವುದು. ಐಟಿಐ ಪಠ್ಯಕ್ರಮವನ್ನು ಕನ್ನಡಕ್ಕೆ ಭಾಷಾಂತರಿಸಲು ಕ್ರಮ ಕೈಗೊಳ್ಳಲು ಸಮಿತಿಯೊಂದಿಗೆ ಚರ್ಚಿಸುವುದಾಗಿ ತಿಳಿಸಿದರು.
ಜಿಪಂ ಅಧ್ಯಕ್ಷೆ ಆದಿಮನಿ ವೀರಲಕ್ಷ್ಮೀ, ವಿಧಾನ ಪರಿಷತ್ ಮಾಜಿ ಸದಸ್ಯ ಶಶಿಲ್ ಜಿ. ನಮೋಶಿ, ವಾಣಿಜ್ಯ ಮತ್ತು ಕೈಗಾರಿಕೋದ್ಯಮ ಅಧ್ಯಕ್ಷ ತ್ರಿವಿಕ್ರಮ ಜೋಶಿ, ಬೆಂಗಳೂರಿನ ಕೈಗಾರಿಕಾ ತರಬೇತಿ ಮತ್ತು ಉದ್ಯೋಗ ಇಲಾಖೆ ಅಪರ ನಿರ್ದೇಶಕ ಪಿ.ಕೆ. ನಾಗರಾಜ, ಕಲಬುರಗಿ ವಿಭಾಗೀಯ ಕಚೇರಿ ಜಂಟಿ ನಿರ್ದೇಶಕ ರವೀಂದ್ರನಾಥ ಎಸ್. ಬಾಳಿ, ಸರ್ಕಾರಿ ಕೈಗಾರಿಕಾ ತರಬೇತಿ ಸಂಸ್ಥೆ ಪ್ರಾಚಾರ್ಯ ರಾಜೇಶ ಬಿ. ಬಾವಗಿ, ದೇವದುರ್ಗ ಸಂಸ್ಥೆ ಪ್ರಾಚಾರ್ಯರಾದ ಭೀಮಣ್ಣ, ಲಿಂಗಸುಗೂರು ಸಂಸ್ಥೆ ಪ್ರಾಚಾರ್ಯ ಅಬ್ದುಲ್ ಖಾದರ, ರಮೇಶ ಭದ್ರಗೊಂಡ, ನಲ್ಮ್ ವ್ಯವಸ್ಥಾಪಕ ರಸೂಲ್ ಹಾಗೂ ಸಂಸ್ಥೆ ಸಿಬ್ಬಂದಿ ಉಪಸ್ಥಿತರಿದ್ದರು.