Advertisement
ನಾರಾಯಣಪುರ ಜಲಾಶಯದಿಂದ ಕೃಷ್ಣಾ ನದಿಗೆ ಶನಿವಾರ ಬೆಳಗ್ಗೆ 5 ಲಕ್ಷ ಕ್ಯೂಸೆಕ್ ಇದ್ದ ನೀರಿನ ಪ್ರಮಾಣ ಮಧ್ಯಾಹ್ನ 2 ಗಂಟೆ ಹೊತ್ತಿಗೆ 6.20 ಲಕ್ಷ ಕ್ಯೂಸೆಕ್ ತಲುಪಿತ್ತು. ಇದರ ಜತೆಗೆ ಸನ್ನತಿ ಜಲಾಶಯದಿಂದಲೂ ಭೀಮಾ ನದಿಗೆ 2.85 ಲಕ್ಷ ಕ್ಯೂಸೆಕ್ ನೀರು ಹರಿಸಿದ ಪರಿಣಾಮ ಸಂಜೆ ವೇಳೆಗೆ ನದಿಗೆ 9 ಲಕ್ಷ ಕ್ಯೂಸೆಕ್ ನೀರು ಹರಿಸಲಾಗಿದೆ. ಇದರಿಂದ ರಾಯಚೂರು ತಾಲೂಕಿನ ಅರಷಿಣಿಗಿ, ಗುರ್ಜಾಪುರ ಬೂರ್ದಿಪಾಡ್ ಗ್ರಾಮಗಳಿಗೆ ನೀರು ನುಗ್ಗುವ ಆತಂಕ ಎದುರಾಗಿದೆ.
Related Articles
Advertisement
ಅಲ್ಲದೇ, ಕಾಡ್ಲೂರು, ಅರಶಿಣಗಿ, ದೇವಸುಗೂರು, ಗುಂಜಳ್ಳಿ, ಕರೆಕಲ್, ಆತ್ಕೂರು, ಡಿ.ರಾಂಪುರ ಸೇರಿ ದೇವದುರ್ಗ, ಲಿಂಗಸೂಗೂರು ತಾಲೂಕಿನ ಅನೇಕ ಕಡೆ ಜಮೀನುಗಳಿಗೆ ನೀರು ನುಗ್ಗಿ ಸಾವಿರಾರು ಎಕರೆ ಜಮೀನಿಗೆ ನೀರು ನುಗ್ಗಿ ಬೆಳೆ ಹಾನಿಯಾಗಿದೆ.
ಜಿಲ್ಲೆಯ ನಡುಗಡ್ಡೆಗಳಲ್ಲಿರುವ ನಿವಾಸಿಗಳನ್ನು ಸ್ಥಳಾಂತರಿಸಲು ಜಿಲ್ಲಾಡಳಿತ ಹಾಗೂ ಎನ್‌ಡಿಆರ್‌ಎಫ್ ತಂಡ ಸಾಕಷ್ಟು ಪ್ರಯತ್ನ ನಡೆಸುತ್ತಿದೆ. ದೇವದುರ್ಗ ತಾಲೂಕಿನ ಅಂಜಳ ಗ್ರಾಮಕ್ಕೆ ನೀರು ನುಗ್ಗಿ ಅಪಾರ ಹಾನಿಯಾಗಿದೆ. ಹತ್ತು ಮನೆಗಳು ಸಂಪೂರ್ಣ ಜಲಾವೃತಗೊಂಡಿದ್ದು, ನಿವಾಸಿಗಳನ್ನು ಗಂಜಿ ಕೇಂದ್ರಕ್ಕೆ ರವಾನಿಸಲಾಗಿದೆ. ಮುನ್ನೆಚ್ಚರಿಕೆ ಕ್ರಮವಾಗಿ 15 ಜನರನ್ನು ಸ್ಥಳಾಂತರಿಸಲಾಗಿದೆ. ದೇವದುರ್ಗ ತಾಲೂಕಿನ ಕರ್ಕಿಹಳ್ಳದ 40 ಕುಟುಂಬದ 250 ಜನರನ್ನು ಮೊರಾರ್ಜಿ ದೇಸಾಯಿ ವಸತಿ ಶಾಲೆಗೆ ಸ್ಥಳಾಂತರಿಸಲಾಗಿದೆ. ದೇವದುರ್ಗ ತಾಲೂಕಿನ ಕೊಪ್ಪರ ಗ್ರಾಮದ ಮನೆಗಳಿಗೂ ನೀರು ನುಗ್ಗಿದೆ.
ಲಿಂಗಸುಗೂರು ತಾಲೂಕಿನ ಜಲದುರ್ಗ ಸೇತುವೆ ಮುಳುಗಿದ್ದು, ಸೇತುವೆ ತಡೆಗೋಡೆ ಕೊಚ್ಚಿ ಹೋಗಿದೆ. ಈಗಾಗಲೇ ಶೀಲಹಳ್ಳಿ, ಯರಗೋಡಿ ಸೇತುವೆ ಮುಳುಗಡೆಯಿಂದ ಹಲವು ಗ್ರಾಮಗಳು ಸಂಪರ್ಕ ಕಡಿತಗೊಂಡಿವೆ. ಹೂವಿನಹೆಡಗಿ ಸೇತುವೆಯಿಂದಲೂ ನೀರು ಹರಿಯುತ್ತಿದ್ದು, ಸತತ 10 ದಿನದಿಂದ ಕಲಬುರಗಿ ಸಂಪರ್ಕ ಕಡಿತಗೊಂಡಿದೆ.
ದೇವದುರ್ಗ ತಾಲೂಕಿನ ಅಂಜಳ, ಗೂಗಲ್ ಪ್ರಭುಸ್ವಾಮಿ ದೇವಸ್ಥಾನ, ಅಂಗಡಿಗಳು, ಹೊಟೇಲ್ಗಳು ಮುಳುಗಿವೆ. ಹಿರೇರಾಯಕುಂಪಿ ಗ್ರಾಮದ ಮನೆಗಳಿಗೆ ನೀರು ನುಗ್ಗಿದೆ. ಪರ್ತಾಪುರ, ಮುದ್ಗೋಟ್, ಹಿರೇರಾಯಕುಂಪಿ, ಕರಕಿಹಳ್ಳಿ, ಗುರ್ಜಾಪುರ ಗ್ರಾಮಸ್ಥರನ್ನು ಸ್ಥಳಾಂತರ ಮಾಡಲಾಗಿದೆ.
ಸಾವಿರಾರು ಎಕರೆ ಬೆಳೆ ನಾಶವಾದರೆ, ನೂರಾರು ಪಂಪ್‌ಸೆಟ್‌ಗಳು ನದಿಯಲ್ಲಿ ಕೊಚ್ಚಿ ಹೋಗಿವೆ. ಇನ್ನೂ ಅನೇಕ ಕಡೆ ವಿದ್ಯುತ್ ಕಂಬಗಳು ಕೂಡ ನೀರಿನಲ್ಲಿ ಮುಳುಗಡೆಯಾಗಿದ್ದು, ವಿದ್ಯುತ್ ಕಡಿತಗೊಳಿಸಲಾಗಿದೆ.