Advertisement

ಮೌಲ್ಯಗಳಿಂದ ದೇಶದ ಪ್ರಗತಿ ಸಾಧ್ಯ

04:34 PM Jun 10, 2019 | Team Udayavani |

ರಾಯಚೂರು: ದೇಶ ಆರ್ಥಿಕವಾಗಿ ಬಲಗೊಳ್ಳುತ್ತಿದ್ದು, ಮಾನವೀಯ ಮೌಲ್ಯಗಳಲ್ಲಿ ಕುಸಿಯುತ್ತಿದೆ. ಮೌಲ್ಯಗಳಿಗೆ ಗೌರವ ನೀಡುವ ಸಂಪ್ರದಾಯ ರೂಢಿಸದ ಹೊರತು ದೇಶದ ಸಮಗ್ರ ಪ್ರಗತಿ ಸಾಧ್ಯವಿಲ್ಲ ಎಂದು ಹೈಕೋರ್ಟ್‌ ನಿವೃತ್ತ ನ್ಯಾಯಮೂರ್ತಿ ಎಚ್.ಎನ್‌. ನಾಗಮೋಹನದಾಸ ಅಭಿಪ್ರಾಯಪಟ್ಟರು.

Advertisement

ಸೂರ್ಯೋದಯ ವಾಕಿಂಗ್‌ ಕ್ಲಬ್‌ನ ಆರನೇ ವಾರ್ಷಿಕೋತ್ಸವ ನಿಮಿತ್ತ ನಗರದ ಪಂಡಿತ ಸಿದ್ಧರಾಮ ಜಂಬಲದಿನ್ನಿ ರಂಗಮಂದಿರದಲ್ಲಿ ರವಿವಾರ ಹಮ್ಮಿಕೊಂಡಿದ್ದ ಪ್ರತಿಭಾ ಪುರಸ್ಕಾರ, ವಿವಿಧ ಕ್ಷೇತ್ರಗಳ ಸಾಧಕರಿಗೆ ಸನ್ಮಾನ, ಕ್ರಿಕೆಟ್ ಪಂದ್ಯಾವಳಿ ವಿಜೇತ ತಂಡಗಳಿಗೆ ಟ್ರೋಫಿ ವಿತರಣೆ ಹಾಗೂ ಉಚಿತ ಕೋಚಿಂಗ್‌ ನೀಡಿದ ಶಿಕ್ಷಕರಿಗೆ ಅಭಿನಂದನಾ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.

ಯಾವ ಸಮಾಜದಲ್ಲಿ ಹಿರಿಯರಿಗೆ ಗೌರವ ಸಿಗುವುದಿಲ್ಲವೋ ಅದು ನಾಗರಿಕ ಸಮಾಜ ಅನಿಸಿಕೊಳ್ಳುವುದಿಲ್ಲ. ಪ್ರತಿಭೆಗಳಿಗೆ ಮನ್ನಣೆ ಸಿಗದಿದ್ದಲ್ಲಿ ಆರ್ಥಿಕ ಪ್ರಗತಿ ಇರುವುದಿಲ್ಲ. ಆದರೆ, ಈ ಸೂರ್ಯೋದಯ ಸಂಸ್ಥೆಯು ಹಿರಿಯರನ್ನು ಗೌರವಿಸುವಂಥ, ಪ್ರತಿಭೆಯನ್ನು ಗುರುತಿಸುವಂಥ ಕೆಲಸ ಮಾಡುತ್ತಿರುವುದು ಶ್ಲಾಘನೀಯ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.

ಕಳೆದ 70 ವರ್ಷಗಳಿಂದಲೂ ದೇಶದ ಜನಪ್ರತಿನಿಧಿಗಳು ಸಂವಿಧಾನದ ಮಹತ್ವದ ಬಗ್ಗೆಯೂ ಜನರಿಗೆ ತಿಳಿಸಿಲ್ಲ. ಜನರೂ ತಿಳಿದುಕೊಳ್ಳಲು ಹೋಗಿಲ್ಲ. ಇಂದು ಪಠ್ಯಪುಸ್ತಕಗಳಲ್ಲಿ ಸಂವಿಧಾನ ವಿಷಯವನ್ನು ಅಳವಡಿಸಿದರೂ ಯಾರೂ ಅದನ್ನು ಅರ್ಥೈಸಿಕೊಂಡು ನಡೆಯುತ್ತಿಲ್ಲ ಎಂದರು.

ಜಿಲ್ಲಾ ಉಸ್ತುವಾರಿ ಸಚಿವ ವೆಂಕಟರಾವ್‌ ನಾಡಗೌಡ ಮಾತನಾಡಿ, ಎಲ್ಲ ಕಾರ್ಯವನ್ನು ಸರ್ಕಾರವೇ ಮಾಡಬೇಕು ಎಂಬ ಧೋರಣೆಯನ್ನು ಜನ ಬಿಡಬೇಕು. ಯಾವುದೇ ಒಂದು ಉತ್ತಮ ಕಾರ್ಯಕ್ಕೆ ಅಡ್ಡಿಪಡಿಸುವವರೇ ಹೆಚ್ಚಾಗಿದ್ದಾರೆ. ಎಲ್ಲ ಕ್ಷೇತ್ರಗಳಲ್ಲೂ ಮೌಲ್ಯಗಳು ಕುಸಿದಿವೆ. ಮಾಧ್ಯಮ ಕ್ಷೇತ್ರಗಳಲ್ಲೂ ಮೌಲ್ಯಗಳು ಕುಸಿಯುತ್ತಿವೆ. ಸಂಸ್ಕಾರವಿಲ್ಲದ ಶಿಕ್ಷಣ ಅಪಾಯಕಾರಿ. ಹೆತ್ತವರನ್ನು ಬಿಟ್ಟು ವಿದೇಶಕ್ಕೆ ಹೋಗುವ ಮಕ್ಕಳೇ ಹೆಚ್ಚಾಗಿದ್ದಾರೆ. ಹೆತ್ತವರನ್ನು ಗೌರವದಿಂದ ಕಾಣುವ ಗುಣ ಬೆಳೆಸಿಕೊಳ್ಳಿ ಎಂದರು.

Advertisement

ನಗರ ಶಾಸಕ ಡಾ| ಶಿವರಾಜ ಪಾಟೀಲ ಮಾತನಾಡಿದರು. ವ್ಯಕ್ತಿತ್ವ ವಿಕಸನ ತರಬೇತುದಾರರಾದ ಲೀಲಾ ಮಲ್ಲಿಕಾರ್ಜುನ ಕಾರಟಗಿ ವಿಶೇಷ ಉಪನ್ಯಾಸ ನೀಡಿದರು.

ಹಿರಿಯ ಪತ್ರಕರ್ತ ರಂಗನಾಥರಿಗೆ ಪ್ರಶಸ್ತಿ ನೀಡಿ ಸನ್ಮಾನಿಸಲಾಯಿತು. ಎಸ್ಸೆಸ್ಸೆಲ್ಸಿ, ದ್ವಿತೀಯ ಪಿಯುಸಿ ಪರೀಕ್ಷೆಯಲ್ಲಿ ಹೆಚ್ಚು ಅಂಕ ಗಳಿಸಿದ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ಪ್ರದಾನ ಮಾಡಲಾಯಿತು. ವಿವಿಧ ಕ್ಷೇತ್ರಗಳ ಸಾಧಕರಿಗೆ, ಶಿಕ್ಷಕರಿಗೆ ಹಾಗೂ ಕ್ರಿಕೆಟ್ ಪಂದ್ಯಾವಳಿಯಲ್ಲಿ ಗೆಲುವು ಸಾಧಿಸಿದ ತಂಡಕ್ಕೆ ಟ್ರೋಫಿ ನೀಡಿ ಸನ್ಮಾಸಲಾಯಿತು.

ವಾಕಿಂಗ್‌ ಕ್ಲಬ್‌ ಅಧ್ಯಕ್ಷ ಬಿ.ಬಸವರಾಜ ಅಧ್ಯಕ್ಷತೆ ವಹಿಸಿದ್ದರು. ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಡಿ.ಕಿಶೋರಬಾಬು, ಡಾ| ವಿ.ಎ. ಮಾಲಿಪಾಟೀಲ, ಡಾ| ಶ್ರೀಧರರೆಡ್ಡಿ, ಡಾ| ರಿಯಾಜುದ್ದೀನ್‌, ಆರ್‌ಡಿಸಿಸಿ ಬ್ಯಾಂಕ್‌ ನಿರ್ದೇಶಕ ವಿಶ್ವನಾಥ ಪಾಟೀಲ, ಮುಖ್ಯಾಧ್ಯಾಪಕಿ ಶಿವಮ್ಮ ಹಾಗೂ ಮತ್ತಿತರರಿದ್ದರು.

ಇಡೀ ವಿಶ್ವವೇ ನೆಚ್ಚಿದ ನಮ್ಮ ದೇಶದ ಸಂವಿಧಾನವನ್ನು ನಮ್ಮನ್ನಾಳುವ ಯಾವುದೇ ರಾಜಕಾರಣಿಗಳಾಗಲಿ, ಪಕ್ಷಗಳಾಗಲಿ ಸರಿಯಾಗಿ ಅರ್ಥ ಮಾಡಿಕೊಂಡಿಲ್ಲ. ಯಾವ ವ್ಯಕ್ತಿ ಸಂವಿಧಾನವನ್ನೇ ಅರ್ಥ ಮಾಡಿಕೊಳ್ಳುವುದಿಲ್ಲವೋ ಆತನಿಂದ ಉತ್ತಮ ಆಡಳಿತ ನಿರೀಕ್ಷಿಸುವುದು ಅಸಾಧ್ಯ. ಇಂದು ಒಬ್ಬ ಹಿಂದುಳಿದ ಸಮಾಜದ ವ್ಯಕ್ತಿ ರಾಷ್ಟ್ರಪತಿ ಆಗಲು, ಚಹ ಮಾರುವ ಬಾಲಕ ಪ್ರಧಾನಿ ಆಗಲು ಆ ಸಂವಿಧಾನವೇ ಕಾರಣವಾಗಿದೆ. ಅಂಥ ಸಂವಿಧಾನವನ್ನು ಎಲ್ಲರೂ ಅರ್ಥೈಸಿಕೊಳ್ಳಬೇಕಿದೆ.
•ಎಚ್.ಎನ್‌. ನಾಗಮೋಹನದಾಸ,
ನಿವೃತ್ತ ನ್ಯಾಯಮೂರ್ತಿ

Advertisement

Udayavani is now on Telegram. Click here to join our channel and stay updated with the latest news.

Next