Advertisement

ಪ್ರವಾಹ ಯಥಾಸ್ಥಿತಿ ಮುಂದುವರಿದ ಭೀತಿ

11:31 AM Aug 09, 2019 | Naveen |

ರಾಯಚೂರು: ಕೃಷ್ಣಾ ನದಿಗೆ ಜಲಾಶಯಗಳಿಂದ ಬಿಡುತ್ತಿರುವ ನೀರಿನ ಪ್ರಮಾಣ ಏರಿಳಿತವಾಗುತ್ತಿದ್ದು, ನದಿ ತಟದ ಜನ ಮಾತ್ರ ಪ್ರವಾಹ ಭೀತಿಯಲ್ಲೇ ಕಾಲ ಕಳೆಯುವಂತಾಗಿದೆ. ಈಗಾಗಲೇ ಸಂತ್ರಸ್ತರನ್ನು ಸುರಕ್ಷಿತ ಸ್ಥಳಗಳಿಗೆ ಸ್ಥಳಾಂತರಿಸಿದ್ದು, ಗಂಜಿ ಕೇಂದ್ರಗಳನ್ನು ಆರಂಭಿಸಿ ಊಟ, ಬಟ್ಟೆ, ಹಾಸಿಗೆ ವಿತರಿಸಲಾಗುತ್ತಿದೆ.

Advertisement

ಬುಧವಾರ ಕೃಷ್ಣಾ ನದಿಗೆ 4.75 ಲಕ್ಷ ಕ್ಯೂಸೆಕ್‌ ನೀರು ಹರಿದ ಪರಿಣಾಮ ನದಿ ಪಾತ್ರದ ಕೆಲ ಹಳ್ಳಿಗಳಿಗೆ ಪ್ರವಾಹ ಬಿಸಿ ತಟ್ಟಿತ್ತು. ಗುರುವಾರ ಮಧ್ಯಾಹ್ನದ ವೇಳೆಗೆ ನೀರಿನ ಪ್ರಮಾಣ 3.55 ಲಕ್ಷ ಕ್ಯೂಸೆಕ್‌ ತಲುಪಿದ್ದರಿಂದ ಪ್ರವಾಹ ಇಳಿಮುಖವಾಗಿತ್ತು. ಆದರೆ, ಸಂಜೆ 5 ಗಂಟೆ ಸುಮಾರಿಗೆ ಮತ್ತೆ 4.15 ಲಕ್ಷ ಕ್ಯೂಸೆಕ್‌ ನೀರು ಹರಿಸಲಾಗಿದೆ. ಇದರಿಂದ ಮತ್ತೆ ನದಿ ತೀರದಲ್ಲಿ ಯಥಾ ಸ್ಥಿತಿ ಮುಂದುವರಿದಿದೆ. ಅದರ ಜತೆಗೆ ಕೊಯ್ನಾ ಜಲಾಶಯದಿಂದ ಮತ್ತೆ 5 ಲಕ್ಷ ಕ್ಯೂಸೆಕ್‌ ಹರಿಬಿಟ್ಟಿದ್ದಾರೆ ಎನ್ನಲಾಗುತ್ತಿದ್ದು, ಅಧಿಕಾರಿಗಳು ಖಚಿತ ಪಡಿಸಿಲ್ಲ. ಒಂದು ವೇಳೆ ಬಿಟ್ಟಿದ್ದೇ ಆದಲ್ಲಿ ಶನಿವಾರದ ವೇಳೆಗೆ ಮತ್ತೆ ಪ್ರವಾಹ ಭೀತಿ ಹೆಚ್ಚಾಗುವ ನಿರೀಕ್ಷೆ ಇದೆ. ಜಿಲ್ಲೆಯಲ್ಲಿ ಪ್ರವಾಹ ಸ್ಥಿತಿ ಮುಂದುವರಿದಿದ್ದು, ಸುರಕ್ಷಿತ ಸ್ಥಳಗಳಿಗೆ ರವಾನಿಸಿದ ಜನರಿಗೆ ಗಂಜಿ ಕೇಂದ್ರಗಳ ಮೂಲಕ ಊಟ, ಬಟ್ಟೆ, ಜಮಖಾನ, ಚಾದರ ನೀಡುವ ಮೂಲಕ ತಾತ್ಕಾಲಿಕ ಸೌಲಭ್ಯ ಕಲ್ಪಿಸಲಾಗುತ್ತಿದೆ. ದೇವದುರ್ಗ ತಾಲೂಕಿನ ಅಂಜಳ, ಲಿಂಗಸುಗೂರು ತಾಲೂಕಿನ ಯರಗೋಡಿಯಲ್ಲಿ ಗಂಜಿ ಕೇಂದ್ರ ತೆರೆಯಲಾಗಿದೆ. ಗುರುವಾರ ರಾಯಚೂರು ತಾಲೂಕಿನ ಗುರ್ಜಾಪುರದಲ್ಲೂ ಗಂಜಿ ಕೇಂದ್ರ ಆರಂಭಿಸಿ ಆಹಾರ ವಿತರಿಲಾಗಿದೆ.

ಸಂಸದ ರಾಜಾ ಅಮರೇಶ್ವರ ನಾಯಕ ಲಿಂಗಸುಗೂರು ತಾಲೂಕಿನ ಯರಗೋಡಿ, ಗೋನವಾಟ್ಲ, ಕಡದರಗಡ್ಡಿ, ಮ್ಯಾದರಗಡ್ಡಿ, ಯಳಗುಂದಿ ಮತ್ತು ರಾಯಚೂರು ತಾಲೂಕಿನ ಗುರ್ಜಾಪುರಕ್ಕೆ ಭೇಟಿ ನೀಡಿ ಪ್ರವಾಹ ಸ್ಥಿತಿ ಅವಲೋಕಿಸಿದರು. ಈ ವೇಳೆ ಸಂತ್ರಸ್ತರು, ಬೆಳೆ ಹಾನಿಗೀಡಾದ ರೈತರೊಂದಿಗೆ ಸಮಾಲೋಚನೆ ನಡೆಸಿ ಪರಿಹಾರ ಕಲ್ಪಿಸುವುದಾಗಿ ತಿಳಿಸಿದರು. ನದಿಯಲ್ಲಿ ಪ್ರವಾಹ ಇಳಿಮುಖವಾಗಿದ್ದ ಕಾರಣ ಜಮೀನುಗಳಿಗೆ ಹೆಚ್ಚುವರಿ ನೀರು ನುಗ್ಗಿಲ್ಲ. ಆದರೆ, ರಾತ್ರಿ ವೇಳೆಗೆ ಮತ್ತೆ ನೀರಿನ ಪ್ರಮಾಣ ಹೆಚ್ಚಾಗಬಹುದು ಎಂಬ ಮಾಹಿತಿ ಹಿನ್ನೆಲೆಯಲ್ಲಿ ನದಿ ಪಾತ್ರದ ಜನರಿಗೆ ಮತ್ತೆ ಎಚ್ಚರಿಕೆ ನೀಡಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next