ರಾಯಚೂರು: ಕಳೆದೆರಡು ತಿಂಗಳ ಹಿಂದೆ ನೆರೆಗೆ ನಲುಗಿದ್ದ ಜಿಲ್ಲೆಯಲ್ಲಿ ಮತ್ತೆ ಅಂಥದ್ದೇ ಭಯದ ವಾತಾವರಣ ನಿರ್ಮಾಣವಾಗಿದೆ. ವಿವಿಧೆಡೆ ಸುರಿಯುತ್ತಿರುವ ಮಳೆಗೆ ಜಲಾಶಯಗಳು ಭರ್ತಿಯಾಗಿದ್ದು, ಕೃಷ್ಣಾ, ತುಂಗಭದ್ರಾಗೆ ಹೆಚ್ಚುವರಿ ನೀರು ಹರಿಸಲಾಗಿದೆ. ಇದರಿಂದ ನದಿ ತೀರದ ಜನರಲ್ಲಿ ಪ್ರವಾಹದ ಆತಂಕ ಮನೆ ಮಾಡಿದೆ.
ಕೃಷ್ಣಾ ನದಿ ತೀರದ ಗ್ರಾಮವಾದ ದೇವದುರ್ಗ ತಾಲೂಕಿನ ಚಿಂಚೋಡಿಯಲ್ಲಿ ಪ್ರವಾಹಕ್ಕೆ ಸಿಲುಕಿ ಮೂವರು ಕುರಿಗಾಹಿಗಳನ್ನು ರಕ್ಷಣಾ ಪಡೆ ಬೋಟ್‌ಗಳ ಮೂಲಕ ಸುರಕ್ಷಿತ ಸ್ಥಳಕ್ಕೆ ಕರೆ ತಂದಿದೆ. ಅದರ ಜತೆಗೆ 89 ಕುರಿಗಳನ್ನು ಕೂಡ ಬೋಟ್‌ಗಳ ಮೂಲಕ ಸಾಗಿಸಲಾಗಿದೆ. ಸೋಮವಾರ ಬಾಲಕ ನೀರಿಗೆ ಕೊಚ್ಚಿಹೋದ ಹಿನ್ನೆಲೆಯಲ್ಲಿ ಯಾರು ಕೂಡ ನದಿಗೆ ಇಳಿಯದಂತೆ ಎಚ್ಚರಿಕೆ ನೀಡಲಾಗುತ್ತಿದೆ.
ಯಾದಗಿರಿ ಜಿಲ್ಲೆ ನಾರಾಯಣಪುರ ಜಲಾಶಯದಿಂದ ನದಿಗೆ ದಿನೇ ದಿನೇ ಹರಿಸುತ್ತಿರುವ ನೀರಿನ ಪ್ರಮಾಣ ಹೆಚ್ಚಾಗುತ್ತಿದೆ. ಮಂಗಳವಾರ ಸಂಜೆ 4:00ಕ್ಕೆ ವೇಳೆಗೆ ನದಿಗೆ 2.57 ಲಕ್ಷ ಕ್ಯೂಸೆಕ್ ನೀರು ಹರಿಸಲಾಗಿದೆ. 11 ಗೇಟ್‌ಗಳ ಮೂಲಕ ನೀರು ಹರಿಸಲಾಗುತ್ತಿದೆ. 2.30 ಲಕ್ಷ ಕ್ಯೂಸೆಕ್ ಒಳಹರಿವು ಇದ್ದು, ಅದರ ಪ್ರಮಾಣ ಗಣನೀಯವಾಗಿ ಹೆಚ್ಚಳವಾಗುತ್ತಿದೆ. ದೇವದುರ್ಗ ತಾಲೂಕಿನ ಹೂವಿನಹೆಡಗಿ ಸೇತುವೆ ಮುಳುಗಡೆ ಹಂತಕ್ಕೆ ಬಂದು ತಲುಪಿದೆ.ಬೆಳಗ್ಗೆಯಿಂದ ನೀರಿನ ಹರಿವಿನಲ್ಲಿ ಏರಿಳಿತ ಕಂಡು ಬರುತ್ತಿತ್ತು.
ಬೆಳಗ್ಗೆ ಆರು ಗಂಟೆಗೆ 2 ಲಕ್ಷ ಕ್ಯೂಸೆಕ್ ನೀರು ಹರಿಸಿದರೆ 12:00ರ ಸುಮಾರಿಗೆ 2.50 ಲಕ್ಷ ಕ್ಯೂಸೆಕ್ ತಲುಪಿತ್ತು. ಮಧ್ಯಾಹ್ನ 2:00ಕ್ಕೆ ತುಸು ಇಳಿಮುಖವಾಗಿದ್ದು, 2.20 ಲಕ್ಷ ಕ್ಯೂಸೆಕ್ ಹರಿಸಲಾಗಿತ್ತು. ಸಂಜೆ ಪುನಃ ನೀರಿನ ಹರಿವು 2.57 ಲಕ್ಷ ಕ್ಯೂಸೆಕ್ ತಲುಪಿತ್ತು. ಇನ್ನೂ ತುಂಗಭದ್ರಾ ಜಲಾಶಯದಿಂದಲೂ ನದಿಗೆ 1.56 ಲಕ್ಷ ಕ್ಯೂಸೆಕ್ ನೀರು ಹರಿಸಿದ ಪರಿಣಾಮ ಆ ಭಾಗದಲ್ಲೂ ಆತಂಕ ಶುರುವಾಗಿದೆ. ಜತೆಗೆ ಜಿಲ್ಲೆಯಲ್ಲಿ ಸೋಮವಾರ ಮಳೆ ಜೋರಾಗಿ ಸುರಿದಿದ್ದು, ಹಳ್ಳಕೊಳ್ಳಗಳು ತುಂಬಿ ಹರಿದು ನದಿಗೆ ಸೇರಿಕೊಂಡ ಪ್ರಮಾಣ ಧುಮ್ಮಿಕ್ಕಿ ಹರಿಯುತ್ತಿದೆ.ಹೀಗಾಗಿ ಜಿಲ್ಲಾಡಳಿತ ಲಿಂಗಸುಗೂರು, ದೇವದುರ್ಗ ಹಾಗೂ ರಾಯಚೂರು ತಾಲೂಕಿನ ನದಿ ತೀರದ ಗ್ರಾಮಗಳಲ್ಲಿ ಡಂಗೂರ ಸಾರಿ ಎಚ್ಚರಿಕೆ ನೀಡಿದೆ. ಯಾರು ನದಿಗೆ ಇಳಿಯದಂತೆ ಎಚ್ಚರಿಕೆ ನೀಡಲಾಗುತ್ತಿದೆ. ಅಲ್ಲದೇ, ಈಗಾಗಲೇ ನದಿ ತೀರದಲ್ಲಿ ರಕ್ಷಣಾ ಸಿಬ್ಬಂದಿ ಕೂಡ ಕಾರ್ಯೋನ್ಮುಖರಾಗಿದ್ದು, ಪ್ರವಾಹಕ್ಕೆ ಸಿಲುಕಿದವರ ರಕ್ಷಣೆಗೆ ಒತ್ತು ನೀಡುತ್ತಿದೆ. ಕೃಷ್ಣಾ ನದಿ ತೀರದ ಗ್ರಾಮಗಳಾದ ಚಿಂಚೋಡಿ, ಹಿರೆರಾಯಕುಂಪಿ,
ಬಸವಂತಪುರ, ಕೊಪ್ಪರ, ಗೂಗಲ್, ಅರಶಿಷಣಿಗಿ, ಗುರ್ಜಾಪುರ ಹಾಗೂ ತುಂಗಭದ್ರಾ ನದಿ ತೀರದ ಹಳ್ಳಿಗಳಾದ ಸಿಂಗಾಪುರ, ಮುಕ್ಕುಂದ, ಒಳಬಳ್ಳಾರಿ,
ದಡೇಸುಗೂರು, ಮಾನವಿ ತಾಲೂಕಿನ ಚೀಕಲಪರ್ವಿ, ರಾಯಚೂರು ತಾಲೂಕಿನ ಬಿಚ್ಚಾಲಿ, ಕಟಕನೂರು, ಹಳೇ ತುಂಗಭದ್ರಾ ಸೇರಿ ಇನ್ನಿತರ ಗ್ರಾಮಗಳಲ್ಲಿ ಎಚ್ಚರಿಕೆ ನೀಡಲಾಗಿದೆ.