ರಾಯಚೂರು: ಪ್ರಧಾನಮಂತ್ರಿ ಫಸಲ್ ಬಿಮಾ ಫಲಾನುಭವಿಗಳಿಗೆ ಪರಿಹಾರ ಬಂದಿಲ್ಲ ಎಂಬ ಆರೋಪಗಳು ಎಷ್ಟೋ ಜಿಲ್ಲೆಗಳಲ್ಲಿ ಕೇಳಿ ಬಂದಿದ್ದರೆ, ರಾಯಚೂರು ಜಿಲ್ಲೆಯಲ್ಲಿ ಮಾತ್ರ ಪರಿಹಾರ ಹಣ ವಿತರಿಸಲು ಫಲಾನುಭವಿಗಳನ್ನೇ ಹುಡುಕುವ ಸ್ಥಿತಿ ಬಂದಿದೆ.
ಅಚ್ಚರಿಯಾದರೂ ನಿಜ. 2016-17ನೇ ಸಾಲಿನ ಸುಮಾರು 1,159 ರೈತ ಫಲಾನುಭವಿಗಳಿಗೆ ಪರಿಹಾರ ಹಣ ಬಿಡುಗಡೆಯಾಗಿದೆಯಾದರೂ ಸರಿಯಾದ ದಾಖಲೆ ನೀಡದ ಕಾರಣ ಕೃಷಿ ಇಲಾಖೆ ಸಿಬ್ಬಂದಿಯೇ ಅವರನ್ನು ಹುಡುಕಾಡುವಂತಾಗಿದೆ.
ಜಿಲ್ಲೆಯಲ್ಲಿ ಮುಂಗಾರು, ಹಿಂಗಾರು ಸೇರಿ 51,576 ರೈತರು ವಿಮೆ ಮಾಡಿಸಿದ್ದರು. ಅದರಲ್ಲಿ 18 ಸಾವಿರಕ್ಕೂ ಅಧಿಕ ರೈತರು ಅರ್ಹರಾಗಿದ್ದರು. ವಿಮೆ ಸಂಸ್ಥೆಯಿಂದ ಕಮೀಷನರ್ ಖಾತೆಗೆ 7.30 ಕೋಟಿ ರೂ. ಪರಿಹಾರ ಹಣ ಕೂಡ ಜಮಾ ಆಗಿತ್ತು. 17 ಸಾವಿರ ರೈತರಿಗೆ ಈಗಾಗಲೇ ಪರಿಹಾರ ತಲುಪಿದ್ದು, ಉಳಿದ ರೈತರದ್ದೇ ಸಮಸ್ಯೆಯಾಗಿದೆ ಎನ್ನುತ್ತಾರೆ ಇಲಾಖೆ ಅಧಿಕಾರಿಗಳು.
ಮೊಬೈಲ್ ನಂಬರ್‌ಗಳೇ ಚಾಲ್ತಿಯಲ್ಲಿಲ್ಲ: ರೈತರು ವಿಮೆ ಮಾಡಿಸುವಾಗ ಬ್ಯಾಂಕ್ ಖಾತೆಗೆ ಆಧಾರ್ ಕಡ್ಡಾಯವಾಗಿ ಲಿಂಕ್ ಮಾಡಿಸಬೇಕಿದೆ. ಆಗ ನೀಡುವ ಮೊಬೈಲ್ ಸಂಖ್ಯೆಗೆ ಮಾಹಿತಿ ತಲುಪಲಿದೆ. ಆದರೆ, ಬಹಳಷ್ಟು ರೈತರು ಆಧಾರ್ ಲಿಂಕ್ ಆಗದ ಖಾತೆಗಳನ್ನೇ ನೀಡಿದ್ದು ಒಂದು ಸಮಸ್ಯೆಯಾದರೆ, ಅರ್ಜಿಯಲ್ಲಿ ನಮೂದಿಸಿದ ಮೊಬೈಲ್ ಸಂಖ್ಯೆಗಳು ಬಹುತೇಕ ಚಾಲ್ತಿಯಲ್ಲಿಲ್ಲ. ಇದರಿಂದ ಇಲಾಖೆ ಅಧಿಕಾರಿಗಳು ಕರೆ ಮಾಡಿದರೂ ಸ್ಪಂದನೆಗೆ ಸಿಗುತ್ತಿಲ್ಲ. ಕೃಷಿ ಇಲಾಖೆಗೆ ಸರ್ಕಾರ ನಾನಾ ಜವಾಬ್ದಾರಿಗಳನ್ನು ನೀಡಿದೆ. ಇಂಥ ಬಿಡುವಿಲ್ಲದ ಕೆಲಸದ ಮಧ್ಯೆಯೂ ಇಲಾಖೆ ಸಿಬ್ಬಂದಿಗೆ ರೈತರನ್ನು ಹುಡುಕಿ ಪರಿಹಾರ ಕಲ್ಪಿಸುವುದು ನಿಜಕ್ಕೂ ಹೆಚ್ಚುವರಿ ಕೆಲಸವಾಗಿದೆ.
ಪ್ರಕಟಣೆ ನೀಡಿದರೂ ಸಮಸ್ಯೆ: ಪರಿಹಾರ ಹಣ ಬಂದಿದ್ದು ರೈತರು ಬಂದು ಸಂಪರ್ಕಿಸಬಹುದೆಂದು ಪ್ರಕಟಣೆ ನೀಡಿದರೂ ಸಾಕಷ್ಟು ಸಮಸ್ಯೆಯಾಗುತ್ತಿದೆ. ಪರಿಹಾರ ಬಾರದ ರೈತರು ಇಲಾಖೆಗೆ ಬಂದು ಗಲಾಟೆ ಮಾಡುತ್ತಾರೆಂಬುದು ಅಧಿಕಾರಿಗಳ ಆತಂಕ. ವಿಮೆ ಹಣ ಪಾವತಿಸಿದ ರೈತರೆಲ್ಲರೂ ಅರ್ಹರಾಗಲ್ಲ. ಕೆಲವೊಮ್ಮೆ ತಿರಸ್ಕಾರಗೊಳ್ಳುವ ಸಾಧ್ಯತೆಗಳೂ ಇವೆ. ಆದರೆ, ಈಗ ವಿಮೆ ಪಾವತಿಸಿದ ರೈತರು ಬಂದು ಪರಿಶೀಲಿಸಿಕೊಳ್ಳಿ ಎಂದು ಪ್ರಕಟಣೆ ನೀಡಿದರೆ ಹಣ ಬಾರದ ಎಲ್ಲ ರೈತರು ಏಕಕಾಲಕ್ಕೆ ಬರುವುದರಿಂದ ಮತ್ತಷ್ಟು ಗೊಂದಲ ಶುರುವಾಗುವುದು ಖಚಿತ.
ಪತ್ತೇ ಹಚ್ಚೋದೆ ದುಸ್ಸಾಹಸ: ಬಾಕಿ ಇರುವ ರೈತರು ಜಿಲ್ಲೆಯ ಎಲ್ಲ ಭಾಗಗಳಲ್ಲೂ ಇದ್ದಾರೆ. ಅಲ್ಲದೇ, ಒಂದೊಂದು ಹಳ್ಳಿಯಲ್ಲಿ ಇಬ್ಬರು, ಮೂವರು, ಕೆಲ ಹಳ್ಳಿಯಲ್ಲಿ ಒಬ್ಬರೇ ಇದ್ದಾರೆ. ಅಂಥ ರೈತರನ್ನು ಪತ್ತೆ ಹಚ್ಚುವುದೇ ದುಸ್ಸಾಹಸವಾದಂತಾಗಿದೆ. ಅಲ್ಲದೇ, ಒಂದೇ ಹೆಸರಿನ ಇಬ್ಬರು, ಮೂವರು ರೈತರಿರುವುದು ಸಮಸ್ಯೆಗೆ ಕಾರಣವಾಗುತ್ತಿದೆ.
ವಿಮೆ ಹಣ ಬಂದಿಲ್ಲವೆಂದು ಗೋಳಿಡುವ ರೈತರ ಮಧ್ಯೆ ಹಣ ಬಂದರೂ ಕೈಗೆಟುಕದ ರೈತರಿರುವುದು ವಿಪರ್ಯಾಸ. ದೇವರು ಕೊಟ್ಟರೂ ಪೂಜಾರಿ ಕೊಡ ಎನ್ನುವ ಸ್ಥಿತಿಗೆ ಬಂದು ನಿಂತಿದೆ ಬಡ ರೈತರ ಬದುಕು.
ಪ್ರಧಾನಮಂತ್ರಿ ಫಸಲ್ ಬಿಮಾ ಯೋಜನೆಗೆ ಹಣ ಕಟ್ಟಿದ ಬಹುತೇಕ ರೈತರಿಗೆ ಹಣ ಸಂದಾಯ ಮಾಡಲಾಗಿದೆ. ಆದರೆ, 1159 ರೈತರು ದಾಖಲೆ ಸರಿಯಾಗಿ ನೀಡದ ಕಾರಣ ಹಣವಿದ್ದರೂ ಅವರ ಖಾತೆಗೆ ಹಾಕುವುದು ಕಷ್ಟವಾಗುತ್ತಿದೆ. ಬ್ಯಾಂಕ್ ಖಾತೆಗೆ ಆಧಾರ್ ಮತ್ತು ಮೊಬೈಲ್ ನಂಬರ್ ಲಿಂಕ್ ಮಾಡದಿದ್ದರೆ ಪರಿಹಾರ ಒದಗಿಸುವುದು ಕಷ್ಟದ ಕೆಲಸ. ಅವರ ಮೊಬೈಲ್ಗೆ ಕರೆ ಮಾಡಿದರೂ ಸಿಗುತ್ತಿಲ್ಲ.. ಹೀಗಾಗಿ ನಮ್ಮ ಸಿಬ್ಬಂದಿಗೆ ರೈತರನ್ನು ಹುಡುಕುವ ಹೆಚ್ಚುವರಿ ಕೆಲಸ ಹತ್ತಿದೆ.
•ಡಾ| ಚೇತನಾ ಪಾಟೀಲ,
ಜಂಟಿ ನಿರ್ದೇಶಕಿ, ಕೃಷಿ ಇಲಾಖೆ