ರಾಯಚೂರು: ಭೀಕರ ಬರ ಜನರಿಗೆ ಮಾತ್ರವಲ್ಲ ಜಾನುವಾರುಗಳ ಜೀವಕ್ಕೂ ಕಂಟಕವಾಗಿ ಪರಿಣಮಿಸಿದೆ. ಒಂದೆಡೆ ಜಲಮೂಲಗಳೆಲ್ಲ ಖಾಲಿಯಾಗಿ ಕುಡಿಯಲು ನೀರಿಲ್ಲದಿದ್ದರೆ, ಮತ್ತೊಂದೆಡೆ ಮೇವಿಗೂ ಬರ ಎದುರಾಗಿದೆ.
ಜಿಲ್ಲೆಯ ನದಿ, ಹಳ್ಳ, ಕೊಳ್ಳ ಕೆರೆ ಕುಂಟೆಗಳಲ್ಲಿ ಹನಿ ನೀರು ಸಿಗುತ್ತಿಲ್ಲ. ಜಾನುವಾರು ಗಳನ್ನು ಮನೆ ಗಳಲ್ಲೇ ಮೇಯಿ ಸುವ ಸ್ಥಿತಿ ಎದುರಾಗಿದೆ. ಆದರೆ, ಮನೆಯಲ್ಲಿ ಸಂಗ್ರಹಿಸಲು ಮೇವಿಲ್ಲದೇ ರೈತಾಪಿ ವರ್ಗ ಪೇಚಾಡುತ್ತಿದೆ. ಪಶು ಸಂಗೋಪನೆ ಸಚಿವ ವೆಂಕಟರಾವ್ ನಾಡಗೌಡ ಅವರ ತವರು ಜಿಲ್ಲೆ ಹಾಗೂ ಉಸ್ತುವಾರಿ ಇರುವ ಜಿಲ್ಲೆಯಲ್ಲೇ ಈ ಸಮಸ್ಯೆ ಎದುರಾಗಿರುವುದು ವಿಪರ್ಯಾಸ.
ಜಿಲ್ಲೆಯಲ್ಲಿ 4.95 ಲಕ್ಷ ಜಾನುವಾರುಗಳಿದ್ದು, ಜಿಲ್ಲಾಡಳಿತ ನಮ್ಮಲ್ಲಿ ಅಗತ್ಯದಷ್ಟು ಮೇವು ಸಂಗ್ರಹವಿದ್ದು, ರಿಯಾಯಿತಿ ದರದಲ್ಲಿ ವಿತರಿಸುತ್ತಿದ್ದೇವೆಂದು ತಿಳಿಸುತ್ತಿದೆ. ಆದರೆ, ಸಿಂಧನೂರಿನ ಜವಳಗೇರಾ ಪಾರ್ಕ್‌ನಲ್ಲಿ ಮಾತ್ರ ಮೇವು ಸಂಗ್ರಹಿಸಿದ್ದು, ಸಣ್ಣ ರೈತರು ನೂರಾರು ಕಿಮೀ ಹೋಗಿ ಮೇವು ತರುವಷ್ಟು ಶಕ್ತರಾಗಿಲ್ಲ. ಈ ಕುರಿತು ಪ್ರಶ್ನಿಸಿದರೆ ತೀರ ಅನಿವಾರ್ಯ ಇರುವ ಹೋಬಳಿಗಳಲ್ಲಿ ಮೇವು ಬ್ಯಾಂಕ್ ಸ್ಥಾಪಿಸಲಾಗಿದೆ. ಎಲ್ಲಿಂದ ಬೇಡಿಕೆ ಬರುವುದೋ ಅಲ್ಲಿ ಬ್ಯಾಂಕ್ ಸ್ಥಾಪಿಸುವುದಾಗಿ ತಿಳಿಸುತ್ತಿದ್ದಾರೆ. ಸಿಂಧನೂರಿಗೆ ಹೋಗಿ ತರುವುದಕ್ಕಿಂತ ಆಂಧ್ರ, ತೆಲಂಗಾಣ ಗಡಿ ಭಾಗಗಳಿಗೆ ಹೋಗುವುದೇ ಲೇಸು ಎನ್ನುತ್ತಾರೆ ರೈತರು. ಟಿಎಲ್ಬಿಸಿ ಕೊನೆ ಭಾಗದಲ್ಲಿ ನೀರು ಸಿಗದೆ ಈ ಬಾರಿ ಭತ್ತದ ಬೆಳೆ ನಿರೀಕ್ಷಿತ ಮಟ್ಟದಲ್ಲಿ ಬರಲಿಲ್ಲ. ಜಿಲ್ಲೆಯಲ್ಲಿ ಒಟ್ಟು 1.19 ಲಕ್ಷ ಹೆಕ್ಟೇರ್ ಪ್ರದೇಶದಲ್ಲಿ ಭತ್ತ ಬಿತ್ತನೆ ಮಾಡಲಾಗಿತ್ತು. ಆ ಪೈಕಿ ಸಿಂಧನೂರಿನಲ್ಲಿ 5,71,22 ಹೆಕ್ಟೇರ್, ಮಾನ್ವಿಯಲ್ಲಿ 22,315 ಹೆಕ್ಟೇರ್ ಹಾಗೂ ದೇವದುರ್ಗದಲ್ಲಿ 21,437 ಹೆಕ್ಟೇರ್, ರಾಯಚೂರಿನಲ್ಲಿ 11,004 ಹಾಗೂ ಲಿಂಗಸುಗೂರಿನಲ್ಲಿ 7,592 ಹೆಕ್ಟೇರ್ ಭತ್ತ ಬೆಳೆಯಲಾಗಿತ್ತು. ಆದರೆ, ಸಕಾಲಕ್ಕೆ ಕಾಲುವೆಗಳಿಗೆ ನೀರು ಸಿಗದೆ ರಾಯಚೂರು, ಮಾನ್ವಿ ಭಾಗದಲ್ಲಿ ಭತ್ತದ ಇಳುವರಿಯೇ ಬರಲಿಲ್ಲ. ಇದರಿಂದ ರೈತರಿಗೆ ಮೇವು ಖರೀದಿಸದೆ ವಿಧಿ ಇಲ್ಲ ಎನ್ನುವ ಸ್ಥಿತಿ ಇದೆ. ನೀರಿಲ್ಲದೆ ಬೆಳೆ ಕೈಗೆಟುಕಿಲ್ಲ. ಮಾಡಲು ಕೆಲಸ ಸಿಗುತ್ತಿಲ್ಲ. ಇಂಥ ಹೊತ್ತಲ್ಲಿ ಜಾನುವಾರು ಸಾಕುವುದು ರೈತರಿಗೆ ಸವಾಲಾಗಿ ಪರಿಣಮಿಸಿದೆ. ಹೀಗಾಗಿ ಸಾಕಷ್ಟು ಜನ ಸಂತೆಗಳಲ್ಲಿ ಜಾನುವಾರು ಮಾರಿ ಗುಳೆ ಹೋಗುತ್ತಿದ್ದಾರೆ. ತಕ್ಷಣಕ್ಕೆ ಎಲ್ಲ ಹೋಬಳಿಗಳಲ್ಲಿ ಮೇವು ಬ್ಯಾಂಕ್ ಸ್ಥಾಪಿಸಿ ಉಚಿತವಾಗಿ ರೈತರಿಗೆ ವಿತರಿಸುವ ಕೆಲಸವಾಗಬೇಕು ಎಂದು ಒತ್ತಾಯಿಸುತ್ತಾರೆ ರೈತ ಮುಖಂಡರು.
ಭೀಕರ ಬರ ಹಿನ್ನೆಲೆಯಲ್ಲಿ ಜಾನುವಾರುಗಳಿಗೆ ಸಮಸ್ಯೆಯಾಗದಂತೆ ಅಗತ್ಯ ಮೇವು ಸಂಗ್ರಹಿಸಲಾಗಿದೆ. ಸಿಂಧನೂರು ಸಮೀಪದ ಜವಳಗೇರಾ ಪಾರ್ಕ್‌ನಲ್ಲಿ 200 ಟನ್‌ಗೂ ಅಧಿಕ ಮೇವಿದೆ. ಎಲ್ಲಿ ಅಗತ್ಯವೋ ಅಲ್ಲಿಗೆ ನೀಡಲಾಗುವುದು. ಕೆಲ ಹೋಬಳಿಗಳಲ್ಲಿ ಈಗಾಗಲೇ ಮೇವು ಬ್ಯಾಂಕ್ ಸ್ಥಾಪಿಸಲಾಗಿದೆ. ರಾಜ್ಯದಲ್ಲೂ ಅಗತ್ಯಕ್ಕೆ ತಕ್ಕ ಮೇವು ಪೂರೈಸಲಾಗುತ್ತಿದೆ. ಈಗಾಗಲೇ 40ಕ್ಕೂ ಅಧಿಕ ಗೋಶಾಲೆ ತೆರೆಯಲಾಗಿದೆ. ರಾಯಚೂರು ಜಿಲ್ಲೆಯಲ್ಲಿ ಗೋಶಾಲೆ ತೆರೆಯುವ ಅನಿವಾರ್ಯತೆ ಬಂದಿಲ್ಲ.
•
ವೆಂಕಟರಾವ್ ನಾಡಗೌಡ,
ಜಿಲ್ಲಾ ಉಸ್ತುವಾರಿ ಸಚಿವ